ಬೆಂಗಳೂರು: ನೀರಿನ ಟ್ಯಾಂಕರ್ ಹರಿದು ನೇಪಾಳ ಮೂಲದ ದಂಪತಿಯ ಮೂರು ವರ್ಷದ ಮಗು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಎಚ್‌ಎಸ್‌ಆರ್ ಲೇಔಟ್ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಎಚ್‌ಎಸ್‌ಆರ್ ಲೇಔಟ್ ನಿವಾಸಿ ಖೇಮ್‌ರಾಜ್ ಹಾಗೂ ಜಯಂತಿ ದಂಪತಿಯ ಮೂರು ವರ್ಷದ ಪುತ್ರಿ ಪ್ರತಿಕ್ಷಾ ಭಟ್ ಮೃತ ಮಗು.
ಮೂರು ವರ್ಷಗಳ ಹಿಂದೆ ಉದ್ಯೋಗ ಅರಸಿ ನೇಪಾಳದಿಂದ ಬಂದ ಖೇಮ್‌ರಾಜ್ ಹಾಗೂ ಜಯಂತಿ ದಂಪತಿ ಎಚ್‌ಎಸ್‌ಆರ್ ಲೇಔಟ್‌ನಲ್ಲಿ ನೆಲೆಸಿದ್ದರು. ದಂಪತಿ ಮನೆಗೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದು, ದಂಪತಿಗೆ ಮೂರು ವರ್ಷದ ಪ್ರತಿಕ್ಷ ಭಟ್ ಎಂಬ ಪುತ್ರಿ ಇದ್ದಳು.
ಗುರುವಾರ ಸೆರನಿಟಿ ಲೇಔಟ್‌ನ ಶ್ವೇತಾ ರೆಸಿಡೆನ್ಸ್ ಅಪಾರ್ಟ್‌ಮೆಂಟ್ ರಸ್ತೆಯಲ್ಲಿ ಸರ್ಜಾಪುರ ರಸ್ತೆ ಕಡೆಯಿಂದ ಪ್ರತಿಕ್ಷಾ ನಡೆದುಕೊಂಡು ಬರುತ್ತಿದ್ದಳು. ಅದೇ ವೇಳೆ ಶ್ವೇತಾ ರೆಸಿಡೆನ್ಸಿ ಅಪಾರ್ಟ್ ಮೆಂಟ್‌ನ ನೀರಿನ ತೊಟ್ಟಿಗೆ ನೀರು ಹಾಕಲು ಬಂದಿದ್ದ ವಾಟರ್ ಟ್ಯಾಂಕರ್ ಚಾಲಕ ಏಕಾಏಕಿ ಯಾವುದೇ ಸೂಚನೆ ನೀಡದೆ ಹಿಮ್ಮುಖವಾಗಿ ಲಾರಿ ಚಲಾಯಿಸಿದ್ದಾನೆ. ಪರಿಣಾಮ ಪ್ರತಿಕ್ಷಾ ಕೆಳಗೆ ಬಿದ್ದಿದ್ದು, ಲಾರಿಯ ಹಿಂಬದಿ ಚಕ್ರ ಆಕೆಯ ಮೇಲೆ ಹರಿದಿದೆ. ಆಕೆ ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಗಾಬರಿಗೊಂಡ ಚಾಲಕ ಲಾರಿ ಸಮೇತ ಪರಾರಿಯಾಗಿದ್ದಾನೆ ಎಂದು ಸಂಚಾರ ಪೊಲೀಸರು ಹೇಳಿದರು. ಎಚ್‌ಎಸ್‌ಆರ್ ಲೇಔಟ್ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.