ಬೆಂಗಳೂರು: ಧರ್ಮಸ್ಥಳ ಶ್ರೀ ಮಂಜುನಾಥನ ದರ್ಶನ ಪಡೆದು ವಾಪಸ್ ಬರುತ್ತಿದ್ದ ಕಾರೊಂದು ಕೆಟ್ಟು ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಮಹಿಳೆಯೊಬ್ಬರು ಮೃತಪಟ್ಟಿದ್ದು, ಇಬ್ಬರು ಮಕ್ಕಳು ಸೇರಿ ಐವರು ಗಾಯಗೊಂಡಿರುವ ಘಟನೆ ಶನಿವಾರ ತಡ ರಾತ್ರಿ ಬ್ಯಾಡರಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಆನೇಕಲ್‌ನ ಸುಲೋಚನಾ (32) ಮೃತ ಮಹಿಳೆ.
ಆಕೆಯ ಅತ್ತೆ, ಪತಿ ಮುರಳಿ ಹಾಗೂ ಇಬ್ಬರು ಮಕ್ಕಳು ಸೇರಿ ಐವರು ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನೈಸ್ ರಸ್ತೆಯ ಮಾಗಡಿ ರಸ್ತೆಯ ಸೇತುವೆ ಕೆಳಗೆ ಅಪಘಾತ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದರು.
ಮುರಳಿ ತಮ್ಮ ಕುಟುಂಬಸ್ಥರ ಜತೆ ಕಾರಿನಲ್ಲಿ ಧರ್ಮಸ್ಥಳಕ್ಕೆ ಹೋಗಿದ್ದರು. ಶನಿವಾರ ದೇವರ ದರ್ಶನ ಪಡೆದು ಆನೇಕಲ್‌ಗೆ ವಾಪಸಾಗುತ್ತಿದ್ದರು. ನೈಸ್ ರಸ್ತೆಯ ಮಾಗಡಿ ರಸ್ತೆಯ ಸೇತುವೆ ಕೆಳಗೆ ಚಲಿಸುತ್ತಿದ್ದ ರಾಜಸ್ಥಾನದ ಲಾರಿಯೊಂದು ವೀಲ್‌ಜಾಮ್ ಆಗಿ ರಸ್ತೆ ಮಧ್ಯೆಯೇ ಯಾವುದೇ ಸಿಗ್ನಲ್ ಹಾಕದೆ ನಿಲ್ಲಿಸಿತ್ತು. ಶನಿವಾರ ತಡರಾತ್ರಿ ತಮ್ಮ ಕಾರಿನಲ್ಲಿ ವೇಗವಾಗಿ ಬಂದ ಮುರುಳಿ ಯಾವುದೇ ಸಿಗ್ನಲ್ ಅಥವಾ ಲಾರಿ ಕೆಟ್ಟು ನಿಂತಿರುವ ಗುರುತು ಸಿಗದೆ ಕತ್ತಲಿನಲ್ಲಿ ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದಿದ್ದಾರೆ.
ಇದನ್ನೂ ಓದಿ:ಹಳೆದ್ವೇಷ, ಲವ್ ಕೇಸ್ ಹಿನ್ನೆಲೆ; ಮನೆಯಿಂದ ಹೊರಗೆಳೆದು ಮಚ್ಚಿನಿಂದ ಕೊಚ್ಚಿ ರೌಡಿಶೀಟರ್ ಕೊಲೆ
ಎಡಭಾಗದಲ್ಲಿ ಕುಳಿತಿದ್ದ ಸುಲೋಚನಾ ರಸ್ತೆಗೆ ಬಿದ್ದು ಮೃತಪಟ್ಟಿದ್ದಾರೆ. ಘಟನೆಯಲ್ಲಿ ಇಬ್ಬರು ಮಕ್ಕಳು ಸೇರಿ ಐವರು ಗಾಯಗೊಂಡಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ ಎಂದು ಪೊಲೀಸರು ಹೇಳಿದರು.
ವೀಲ್ ಜಾಮ್ ಆಗಿ ಕೆಟ್ಟು ನಿಂತಿದ್ದ ಲಾರಿಯನ್ನು ರಾಜಸ್ಥಾನ ದಲ್ಲಿ ನೋಂದಣಿಯಾದ ಲಾರಿ ಎಂದು ಗುರುತಿಸಲಾಗಿದೆ. ಚಾಲಕ ಸತ್ಯನಾರಾಯಣ (35)ನನ್ನು ಬಂಧಿಸಲಾಗಿದೆ.