ಬಾಗಲಕೋಟೆ :ಕಾರಿನ ಟಯರ್ ಸ್ಪೋಟಗೊಂಡು ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಜಮಖಂಡಿಯ ಕಾಂಗ್ರೆಸ್ ಶಾಸಕ ಸಿದ್ದು ನ್ಯಾಮಗೌಡ (70)ಸಾವನ್ನಪಿರುವ ಘಟನೆ ಬಾಗಲಕೋಟೆ ತುಳಸಿಗೆರೆಯಲ್ಲಿ ಸೋಮವಾರ ಮುಂಜಾನೆ ಸಂಭವಿಸಿದೆ.
ಶಾಸಕರು ಕಾರಿನಲ್ಲಿ ಗೋವಾದಿಂದ ಬರುತ್ತಿದ್ದ ಸಂದರ್ಭ ಎದುರಿನಿಂದ ಬರುತ್ತಿದ್ದ ಲಾರಿಯನ್ನು ತಪ್ಪಿಸಲು ಹೋಗಿ ತಡೆಗೋಡೆಗೆ ಕಾರು ಡಿಕ್ಕಿ ಹೊಡೆದಿದೆ ಈ ಸಂದರ್ಭ ಶಾಸಕ ಸಿದ್ದು ನ್ಯಾಮಗೌಡ ಅವರ ಎದೆಗೆ ಗಂಭೀರ ಗಾಯವಾಗಿದ್ದು ತಕ್ಷಣ ಬಾಗಲಕೋಟೆ ಖಾಸಗಿ ಆಸ್ಪತ್ರೆಗೆ ಕೊಂಡೊಯ್ಯಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪಿದ್ದಾರೆ.
ಶಾಸಕರ ಜೊತೆಯಡವರಿಗೂ ಗಾಯಗಳಾಗಿದ್ದು ಅವರನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಲಾದಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.
ಜಿಲ್ಲಾ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ :ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟ ಶಾಸಕರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಜಿಲ್ಲಾ ಆಸ್ಪತ್ರೆಗೆ ಕೊಂಡೊಯ್ಯಲಾಗಿದ್ದು ಮರಣೋತ್ತರ ಪರೀಕ್ಷೆ ಮುಕ್ತಾಯಗೊಡಿದೆ.
ಸಾರ್ವಜನಿಕರಿಗೆ ದರ್ಶನ : ಮರಣೋತ್ತರ ಪರೀಕ್ಷೆ ಅಂತಿಮಗೊಂಡಿದ್ದು ಪಾರ್ಥಿವ ಶರೀರವನ್ನು ಜಮಖಂಡಿಯ ನಿವಾಸಕ್ಕೆ ಕೊಂಡೊಯ್ಯಲಾಗುತ್ತಿದೆ ನಂತರ ಸಾರ್ವಜನಿಕರ ವೀಕ್ಷಣೆಗೆ ಜಮಖಂಡಿ ಜಿಲ್ಲಾ ಕ್ರೀಡಾಂಗಣದಲ್ಲಿ ಇರಿಸಲಾಗುವುದು.
2018ರಲ್ಲಿ ನಡೆದ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಸಿದ್ದು ನ್ಯಾಮಗೌಡ ಅವರು ಭರ್ಜರಿ ಗೆಲುವು ಸಾಧಿಸಿದ್ದರು. ನ್ಯಾಮಗೌಡ ಅವರ ನಿಧನಕ್ಕೆ ಕಾಂಗ್ರೆಸ್ ಮುಖಂಡರು ಸಂತಾಪ ಸೂಚಿಸಿದ್ದಾರೆ.