Advertisement

ರಸ್ತೆ ಅಪಘಾತ ಪ್ರಕರಣ ಭೇದಿಸಿದ ಸಂಚಾರ ಪೊಲೀಸರು

11:37 AM Oct 11, 2021 | Team Udayavani |

ಕೆ.ಆರ್‌.ಪುರ: ಪಾದಚಾರಿಗೆ ಡಿಕ್ಕಿ ಹೊಡೆದು ಕಾರು ನಿಲ್ಲಿಸದೆ ಪರಾರಿಯಾಗಿದ್ದ ಪ್ರಕರಣದ ತನಿಖೆ ನಡೆಸಿದ ಸಂಚಾರ ಪೊಲೀಸರು ಸುಮಾರು 50ಕ್ಕೂ ಸಿಸಿ ಕ್ಯಾಮರಾ ಪರಿಶೀಲಿಸಿ ಕಾರು ಚಾಲಕನನ್ನು ಪತ್ತೆ ಹಚ್ಚುವಲ್ಲಿ ಕೆ.ಆರ್‌ .ಪುರ ಪೊಲೀಸರು ಯಶಸ್ವಿಯಾಗಿದ್ದಾರೆ.

Advertisement

ಎಚ್‌ಎಎಲ್‌ನ ನಿವೃತ್ತ ಉದ್ಯೋಗಿ ಶ್ರೀಧರ್‌ ಎಂಬವರು ಅಪಘಾತ ಎಸಗಿದ್ದು, ಇದೀಗ ಕೋರ್ಟ್‌ನಿಂದ ಜಾಮೀನು ಪಡೆದುಕೊಂಡಿದ್ದಾರೆ. ಸೆ.21 ರಂದು ರಾತ್ರಿ ಸುಮಾರು 9.30ಕ್ಕೆ ಕೆ.ಆರ್‌.ಪುರ ಠಾಣಾ ವ್ಯಾಪ್ತಿಯ ಕಸ್ತೂರಿ ನಗರ 2ನೇ ಮುಖ್ಯರಸ್ತೆಯಲ್ಲಿ ಅಪರಿಚಿತ ಕಾರು ಪಾದಚಾರಿಗೆ ಡಿಕ್ಕಿ ಹೊಡೆದ ಬಳಿಕ ಕಾರು ಸಹಿತ ಚಾಲಕ ಪರಾರಿಯಾಗಿದ್ದ. ಬಳಿಕ ಗಾಯಾಳುವನ್ನು ಚಿಕಿತ್ಸೆಗಾಗಿ ಬೌರಿಂಗ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫ‌ಲಕಾರಿಯಾಗದೇ ಗಾಯಾಳು ಮೃತಪಟ್ಟಿದ್ದ.ಈ ಸಂಬಂಧ ಕೆ.ಆರ್‌.ಪುರ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಾಗಿ ಹುಡುಕಾಟ ನಡೆಸಿದರು.

ಇದನ್ನೂ ಓದಿ:- ರೈತರಿಗೆ ನ್ಯಾಯ ಒದಗಿಸುವ ಪ್ರಾಮಾಣಿಕ ಪ್ರಯತ್ನ

ಕೆ.ಆರ್‌.ಪುರ ಸಂಚಾರಿ ಪೊಲೀಸ್‌ ಠಾಣಾಧಿಕಾರಿ ಎಂ.ಎ .ಮೊಹಮದ್‌ ಅವರ ನೇತೃತ್ವದಲ್ಲಿ ತನಿಖೆ ನಡೆಸಲಾಗಿತ್ತು. ಘಟನಾ ಸ್ಥಳ ಹಾಗೂ ಕಾರು ಹಾದು ಹೋದ ರಸ್ತೆಗಳಲ್ಲಿರುವ ಸುಮಾರು 50ಕ್ಕೂ ಸಿಸಿ ಕ್ಯಾಮೆರಾಗಳನ್ನು ಪರಿಶೀಲಿಸಿದಾಗ ಕೆಲವೊಂದು ಸುಳಿವು ಸಿಕ್ಕಿತ್ತು. ಅಪಘಾತದ ನಂತರ ಚಾಲಕ

ಹಲವು ರಸ್ತೆಗಳಲ್ಲಿ ಸಂಚರಿಸಿ ಒಂದು ಜೆರಾಕ್ಸ್‌ ಅಂಗಡಿಗೆ ತೆರಳಿ ಅಲ್ಲಿ ಯಾವುದೋ ದಾಖಲಾತಿಗಳನ್ನು ಬೆರಳಚ್ಚು ಮಾಡಿಸಿಕೊಂಡಿದ್ದು, ಜೆರಾಕ್ಸ್‌ ಮಾಡಿಸಿಕೊಂಡ ಬಗ್ಗೆ ಮಾಹಿತಿ ಕಲೆಹಾಕಿದ ಪೊಲೀಸರು ಅಂಗಡಿಯಲ್ಲಿ ವಿಚಾರಿಸಿದಾಗ ಆರೋಪಿಯ ಭಾವಚಿತ್ರ ಲಭ್ಯವಾಗಿದೆ. ಭಾವಚಿತ್ರವನ್ನು ಸ್ಥಳೀಯ ಗ್ಯಾಸ್‌, ಹಾಲು, ಪತ್ರಿಕೆ ವಿತರಕ ಹುಡುಗರು ಮತ್ತು ಇತರ ಸಾರ್ವಜನಿಕರಿಗೆ ತೋರಿಸಿದಾಗ ಆರೋಪಿಯ ಮಾಹಿತಿ ಲಭ್ಯವಾಗಿದೆ.

Advertisement

ನಂತರ ವಿಳಾಸ ಪಡೆದುಕೊಂಡು ವಿಚಾರಣೆಗೆ ಹಾಜರಾಗಲು ನೋಟಿಸ್‌ ಜಾರಿ ಮಾಡಿದ ನಂತರ, ಚಾಲಕ ನೇರವಾಗಿ ನ್ಯಾಯಾಲಯಕ್ಕೆ ಶರಣಾಗಿ ಜಾಮೀನು ಪಡೆದು ಠಾಣೆಗೆ ಹಾಜರಾಗಿದ್ದಾರೆ. ವಿಚಾರಣೆಯಲ್ಲಿ ಶ್ರೀಧರ್‌, ಎಚ್‌ ಎಎಲ್‌ ನಿವೃತ್ತ ನೌಕರನಾಗಿದ್ದು, ಅಪಘಾತದ ದಿನ ವಿಪರೀತ ಮಳೆ ಇದ್ದುದರಿಂದಾಗಿ ಕಾರು ನಿಲ್ಲಿಸದೇ ಹೊರಟು ಹೋಗಿರುವುದಾಗಿ ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದಾರೆ ಎಂದು ಸಂಚಾರ ಪೊಲೀಸರು ಮಾಹಿತಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next