ಬೆಂಗಳೂರು: ವಾರಾಂತ್ಯ ಪಾರ್ಟಿ ಮಾಡಿ ಮದ್ಯದ ಅಮಲಿನಲ್ಲಿ ಕಾರು ಚಲಾಯಿಸಿ ಆಡುಗೋಡಿಯ ಎನ್‌ಜಿವಿ ಒಳಾಂಗಣ ಕ್ರೀಡಾಂಗಣ ಜಂಕ್ಷನ್ ಸಮೀಪದ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಟೆಕ್ಕಿ ಗಾಯಗೊಂಡಿದ್ದಾನೆ.
ಕಾರು ಚಾಲಕ ಪಶ್ಚಿಮ ಬಂಗಾಳ ಮೂಲದ ಬಿಟಿಎಂ ಲೇಔಟ್‌ನ ನಿವಾಸಿ ಸಮೀರ್ (33) ವಿರುದ್ಧ ಆಡುಗೊಡಿ ಸಂಚಾರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಸಾಫ್ಟ್ವೇರ್ ಕಂಪನಿಯಲ್ಲಿ ಕೆಲಸ ಮಾಡುತ್ತಿ ರುವ ಸಮೀರ್ ವಾರಾಂತ್ಯದ ಹಿನ್ನೆಲೆಯಲ್ಲಿ ತನ್ನ ಪತ್ನಿ ಮರ್ಲಿನ್ ಹಾಗೂ ಸ್ನೇಹಿತೆಯೊಬ್ಬರ ಜತೆಗೆ ಭಾನುವಾರ ರಾತ್ರಿ ಕೋರಮಂಗಲದ ಪಬ್ ವೊಂದಕ್ಕೆ ಆಲ್ಟೋ ಕಾರಿನಲ್ಲಿ ಹೋಗಿದ್ದ. ಪಬ್ ನಲ್ಲಿ ಮೂವರೂ ಕಂಠಪೂರ್ತಿ ಮದ್ಯಪಾನ ಮಾಡಿ ತಡರಾತ್ರಿ 1.30ಕ್ಕೆ ಕೋರಮಂಗಲ ಫೋರಂ ಮಾಲ್ ಕಡೆಯಿಂದ ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಿಟಿಎಂ ಲೇಔಟ್ ಕಡೆಗೆ ಬರುತ್ತಿದ್ದರು. ಮಾರ್ಗಮಧ್ಯೆ ಎನ್‌ಜಿವಿ ಒಳಾಂಗಣ ಕ್ರೀಡಾಂಗಣ ಜಂಕ್ಷನ್‌ನಲ್ಲಿ ಎಡತಿರುವು ಪಡೆಯುವಾಗ ಕುಡಿದ ಅಮಲಿನಲ್ಲಿ ಸಮೀರ್ ನಿಯಂತ್ರಣ ತಪ್ಪಿ ಕಾರು ರಸ್ತೆಯ ವಿಭಜಕಕ್ಕೆ ಡಿಕ್ಕಿ ಹೊಡೆದಿತ್ತು. ಪರಿಣಾಮ ಕಾರಿನ ಮುಂಭಾಗ ಜಖಂಗೊಂಡು ಸಮೀರ್ ತಲೆಗೆ ಗಾಯವಾಗಿ ರಕ್ತಸ್ರಾವ ಉಂಟಾಗಿತ್ತು. ಸ್ಥಳೀಯರು ಈ ಬಗ್ಗೆ ಆಡೋಗೋಡಿ ಸಂಚಾರ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದರು.
ಸ್ಥಳಕ್ಕೆ ಧಾವಿಸಿದ ಪೊಲೀಸರು ಗಾಯಗೊಂಡ ಸಮೀರ್‌ನನ್ನು ಆಟೋದಲ್ಲಿ ಆಸ್ಪತ್ರೆಗೆ ಕಳುಹಿಸಿದ್ದರು. ಬಳಿಕ ಆತನನ್ನು ಬಂಧಿಸಿ ಠಾಣಾ ಜಾಮೀನಿನ ಮೇಲೆ ಬಿಡುಗಡೆ ಮಾಡಿ ಆಲ್ಟೋ ಕಾರು ಜಪ್ತಿ ಮಾಡಿದ್ದಾರೆ. ಅದೃಷ್ಟವಶಾತ್ ಯಾವುದೇ ಪ್ರಾಣಪಾಯ ಸಂಭವಿಸಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಮೊಬೈಲ್‌ನಲ್ಲಿ ಚಿತ್ರೀಕರಿಸಿದ್ದಕ್ಕೆ ಆಕ್ಷೇಪ: ರಸ್ತೆ ಅಪಘಾತ ಸಂಭವಿಸಿದಾಗ ನೆರೆದಿದ್ದ ಸಾರ್ವಜನಿಕರು ಮೊಬೈಲ್‌ನಲ್ಲಿ ಈ ದೃಶ್ಯವನ್ನು ಚಿತ್ರೀಕರಿಸಲು ಮುಂದಾದ ವೇಳೆ ಸಮೀರ್ ಪತ್ನಿ ಮರ್ಲಿನ್ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಆಕ್ರೋಶ ಹೊರ ಹಾಕಿದ್ದರು. ಪೊಲೀಸರು ಬಂದ ಬಳಿಕ ನೆರೆದಿದ್ದ ಸಾರ್ವಜನಿಕರನ್ನು ಕಳುಹಿಸಿ, ಮರ್ಲಿನ್‌ಗೆ ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ.