Advertisement

ಅಪರಾಹ್ನ 3ರಿಂದ ರಾತ್ರಿ 9:ಅತೀ ಹೆಚ್ಚು ಅಪಘಾತ : ರಸ್ತೆ ಸಾರಿಗೆ ಮತ್ತು ಹೆದ್ದಾರಿ ಖಾತೆಯ ಅಧಿಕೃತ ವರದಿ

01:48 AM Jan 03, 2023 | Team Udayavani |

ಹೊಸದಿಲ್ಲಿ : ಅಪರಾಹ್ನ 3ರಿಂದ ರಾತ್ರಿ 9ರ ವರೆಗೆ ದೇಶದ ರಸ್ತೆಗಳು ಅಪಾಯಕಾರಿ. ಏಕೆಂದರೆ ಈ ಅವಧಿಯಲ್ಲೇ ಶೇ. 40ರಷ್ಟು ಅಪಘಾತಗಳು ಸಂಭವಿಸುತ್ತವೆ.

Advertisement

– ಕೇಂದ್ರ ಸರಕಾರದ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಖಾತೆಯ ಅಧಿಕೃತ ವರದಿಯಲ್ಲಿ ಈ ಅಂಶವನ್ನು ಸ್ಪಷ್ಟಪಡಿಸಲಾಗಿದೆ. ಆದರೆ ಮಧ್ಯರಾತ್ರಿ 12ರಿಂದ ಬೆಳಗ್ಗೆ 6ರ ವರೆಗೆ ಸುರಕ್ಷಿತ ಅವಧಿ ಎಂದು ಪರಿಗಣಿಸಲಾಗಿದೆ. ಈ ಅವಧಿಯಲ್ಲಿ ಶೇ. 10ರಷ್ಟು ಮಾತ್ರ ಅಪಘಾತಗಳು ಉಂಟಾಗುತ್ತವೆ.

ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ “ಭಾರತದಲ್ಲಿ ರಸ್ತೆ ಅಪಘಾತ-2021′ ಎಂಬ ಶಿರೋನಾಮೆಯ ವರದಿಯಲ್ಲಿ ಈ ಅಂಶಗಳನ್ನು ಉಲ್ಲೇಖೀಸಲಾಗಿದೆ. 2021ರಲ್ಲಿ ದಾಖಲಾಗಿರುವ 4.21 ಲಕ್ಷ ಅಪಘಾತಗಳ ಪೈಕಿ 1.58 ಲಕ್ಷ ಪ್ರಕರಣಗಳು ಅಪರಾಹ್ನ 3 ರಿಂದ ರಾತ್ರಿ 9ರ ನಡುವೆ ನಡೆದಿದೆ. ಸಂಜೆ 6ರಿಂದ ರಾತ್ರಿ 9ರ ಅವಧಿಯಲ್ಲಿ ಶೇ. 21 ಆ್ಯಕ್ಸಿಡೆಂಟ್‌ಗಳು ಉಂಟಾಗುತ್ತವೆ. ಅಪರಾಹ್ನ 3ರಿಂದ ಸಂಜೆ 6ರ ವರೆಗೆ ಶೇ. 18 ಅಪಘಾತಗಳು ಉಂಟಾಗುತ್ತವೆ ಎಂದು ಸಚಿವಾಲಯದ ವರದಿಯಲ್ಲಿ ಉಲ್ಲೇಖೀಸಲಾಗಿದೆ.

ಮೊದಲ ಸ್ಥಾನದಲ್ಲಿ ತಮಿಳುನಾಡು
ರಾಜ್ಯವಾರು ಮಾಹಿತಿಗಳನ್ನು ಗಮನಿಸಿದಾಗ ಸಂಜೆ 6ರಿಂದ ರಾತ್ರಿ 9ರ ನಡುವೆ ಹೆಚ್ಚು ಅಪಘಾತ ಸಂಭವಿಸುವ ರಾಜ್ಯಗಳಲ್ಲಿ ತಮಿಳು ನಾಡು ಮೊದಲ ಸ್ಥಾನದಲ್ಲಿ ಇದೆ. ಅಲ್ಲಿ 14,416 ಅಪಘಾತಗಳು ನಡೆದಿವೆ. ಮಧ್ಯಪ್ರದೇಶದಲ್ಲಿ ಇದೇ ಅವಧಿಯಲ್ಲಿ 10,332 ಅಪಘಾತಗಳು ನಡೆದಿವೆ. ಕೇರಳ, ಕರ್ನಾಟಕ ಮತ್ತು ಉತ್ತರ ಪ್ರದೇಶಗಳನ್ನು ಒಳಗೊಂಡು 82, 879 ಅಪಘಾತಗಳು ಸಂಭವಿಸಿವೆ.

2017ರಲ್ಲಿ ಒಟ್ಟು ಅಪಘಾತಗಳ ಪೈಕಿ ಶೇ. 35 ಪ್ರಕರಣಗಳು ಅಪರಾಹ್ನ 3ರಿಂದ ರಾತ್ರಿ 9ರ ನಡುವೆ ನಡೆಯುತ್ತಿದ್ದವು. 2021ರಲ್ಲಿ ಇದು ಗಣನೀಯ ಏರಿಕೆ ಕಂಡಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next