ಪಟ್ನಾ : ತಥಾಕಥಿತ ಆರ್‌ಜೆಡಿ – ಜೆಡಿಯು ವಿಲಯನದ ಬಗ್ಗೆ ಮುಕ್ತ ಚರ್ಚೆಗೆ ಬರುವಂತೆ ಜೆಡಿಯು ಉಪಾಧ್ಯಕ್ಷ ಪ್ರಶಾಂತ್ ಕಿಶೋರ್ ಅವರು ಬಹುಕೋಟಿ ಮೇವು ಹಗರಣದಲ್ಲಿ ಜೈಲು ಪಾಲಾಗಿರುವ ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರಿಗೆ ಚ್ಯಾಲೆಂಜ್ ಹಾಕಿದ್ದಾರೆ.
ಜೆಡಿಯು ಅಧ್ಯಕ್ಷ ನಿತೀಶ್ ಕುಮಾರ್ ಎನ್‌ಡಿಎ ಸೇರಿದ ಬಳಿಕ ಬಿಹಾರದ ಮಹಾಘಟಬಂಧನ ಸೇರುವ ಹಂಬಲದಲ್ಲಿ ತನ್ನ ಪ್ರತಿನಿಧಿ ಪ್ರಶಾಂತ್ ಕಿಶೋರ್ ಅವರನ್ನು ಐದು ಬಾರಿ ತನ್ನಲ್ಲಿಗೆ ಕಳುಹಿಸಿದ್ದರು ಎಂದು ಲಾಲು ಆರೋಪಿಸಿದ್ದರು.
ಈ ಆರೋಪದ ಸತ್ಯಾಸತ್ಯತೆಯನ್ನು ಬಯಲು ಮಾಡುವ ನಿಟ್ಟಿನಲ್ಲಿ ಬಹಿರಂಗ ಚರ್ಚೆಗೆ ಬರುವಂತೆ ಲಾಲುಗೆ ಪ್ರಶಾಂತ್ ಕಿಶೋರ್ ಅವರು ಟ್ವಿಟರ್ ನಲ್ಲಿ ಚ್ಯಾಲೆಂಜ್ ಹಾಕಿದ್ದಾರೆ.
“ಸಾರ್ವಜನಿಕ ಹುದ್ದೆಗಳನ್ನು ದುರುಪಯೋಗಿಸಿಕೊಂಡು ಜನರ ಹಣವನ್ನು ದುರ್ಬಳಕೆ ಮಾಡಿದವರು ಸತ್ಯದ ಗುತ್ತಿಗೆ ಹಿಡಿದವರಂತೆ ಮಾತನಾಡುತ್ತಿರುವುದು ವಿಪರ್ಯಾಸಕರ’ ಎಂದು ಪ್ರಶಾಂತ್ ಕಿಶೋರ್ ಟ್ವಿಟರ್‌ನಲ್ಲಿ ವ್ಯಂಗ್ಯವಾಡಿದ್ದಾರೆ.
ಬಿಹಾರ ಮಾಜಿ ಮುಖ್ಯಮಂತ್ರಿ ರಾಬ್ರಿ ದೇವಿ ಅವರು “ಚುನಾವಣಾ ರಣತಂತ್ರಗಾರ ಪ್ರಶಾಂತ್ ಕಿಶೋರ್ ಅವರು ನಿತೀಶ್ ಕುಮಾರ್ ಅವರ ಜೆಡಿಯು ಮತ್ತು ಆರ್‌ಜೆಡಿ ವಿಲೀನವಾಗುವ ಪ್ರಸ್ತಾವವೊಂದನ್ನು ಹಿಡಿದುಕೊಂಡು ನನ್ನ ಪತಿ ಲಾಲು ಪ್ರಸಾದ್ ರನ್ನು ಭೇಟಿಯಾಗಿದ್ದರು. ಹೀಗೆ ವಿಲಯನಗೊಳ್ಳುವ ಉಭಯ ಪಕ್ಷಗಳು 2019ರ ಲೋಕಸಭಾ ಚುನಾವಣೆಗೆ ಮುನ್ನ ಪ್ರಧಾನಿ ಅಭ್ಯರ್ಥಿಯನ್ನು ಘೋಷಿಸಬೇಕು ಎಂದು ಹೇಳಿದ್ದರು’ ಎಂಬುದಾಗಿ ಕೆಲ ದಿನಗಳ ಹಿಂದಷ್ಟೇ ಹೇಳಿಕೆ ನೀಡಿದ್ದರು.
ರಾಬ್ರಿ ಅವರ ಈ ಹೇಳಿಕೆಯ ಹಿನ್ನೆಲೆಯಲ್ಲಿ ಆರ್‌ಜೆಡಿ – ಜೆಡಿಯು ವಿಲಯನ ಕುರಿತ ಸತ್ಯಾಸತ್ಯತೆಯನ್ನು ಜಗಜ್ಜಾಹೀರು ಪಡಿಸುವ ದಿಶೆಯಲ್ಲಿ ಲಾಲು ಅವರು ಬಹಿರಂಗ ಚರ್ಚೆಗೆ ಬರಬೇಕು ಎಂಬ ಸವಾಲನ್ನು ಪ್ರಶಾಂತ್ ಕಿಶೋರ್ ಒಡ್ಡಿದ್ದಾರೆ.