Advertisement

ಪ್ಯಾರಿಸ್‌ ಸ್ಫೋಟದ ಹಿಂದೆ ರಿಯಾಜ್‌?

06:00 AM Dec 14, 2018 | |

ಬೆಂಗಳೂರು: ಮೂರು ವರ್ಷಗಳ ಹಿಂದೆ ಪ್ಯಾರಿಸ್‌ನಲ್ಲಿ 130 ಜನರ ಮಾರಣ ಹೋಮ ನಡೆಸಿದ್ದ ಐಸಿಸ್‌ ಉಗ್ರ ಸಂಘಟನೆ ಕೃತ್ಯಕ್ಕೆ ಸಂಬಂಧಿಸಿದಂತೆ ತನಿಖೆಗಾಗಿ ಬೆಂಗಳೂರಿಗೆ ಆಗಮಿಸಿರುವ ಪ್ಯಾರಿಸ್‌ ಪೊಲೀಸರು ಬಂಧಿತ ಇಂಡಿಯನ್‌ ಮುಜಾಹಿದ್ದಿನ್‌ ಮತ್ತು ಇತರೆ ಭಯೋತ್ಪಾದಕ ಸಂಘಟನೆಗಳ ಉಗ್ರರನ್ನು ವಿಚಾರಣೆಗೆ ಒಳಪಡಿಸಿದ್ದಾರೆ.

Advertisement

ಇಂಡಿಯನ್‌ ಮುಜಾಹಿದ್ದೀನ್‌(ಐಎಂ) ಸ್ಥಾಪಕ ರಿಯಾಜ್‌ ಭಟ್ಕಳ್‌ ಜತೆ ನಿಕಟ ಸಂಪರ್ಕ ಹೊಂದಿದ್ದ ಕೆಲವು ಉಗ್ರರು ಬೆಂಗಳೂರು ಸರಣಿ ಸ್ಫೋಟ ಮತ್ತು ಚಿನ್ನಸ್ವಾಮಿ ಸ್ಟೇಡಿಯಂ ಬಳಿಯ ಸ್ಫೋಟ ಸಂಬಂಧ ಬಂಧಿತರಾಗಿ ಪರಪ್ಪನ ಅಗ್ರಹಾರದಲ್ಲಿದ್ದಾರೆ. ಜತೆಗೆ ರಿಯಾಜ್‌ಗೆ ಅಲ್‌ಖೈದಾ ಮತ್ತು ಐಸಿಸ್‌ ಸಂಘಟನೆ ಜತೆ ಸಂಬಂಧ ಹೊಂದಿರುವುದರ ಬಗ್ಗೆ ಪ್ಯಾರಿಸ್‌ ಪೊಲೀಸರಿಗೆ ಮಾಹಿತಿ ಇದೆ. ರಿಯಾಜ್‌ಗೂ ಕೇರಳದಿಂದ ಐಸಿಸ್‌ ಸಂಘಟನೆ ಸೇರಿದ ಯುವಕರಿಗೂ ಸಂಬಂಧ ಇದೆಯೇ ಎಂಬ ಆಯಾಮದಲ್ಲಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಜತೆಗೆ ವಿಚಾರಣಾಧೀನ ಕೈದಿಗಳಲ್ಲಿ ಹಲವರು ಕೇರಳದವರಾಗಿದ್ದು, ಅವರಿಗೂ ಐಸಿಸ್‌ಗೂ ಸಂಪರ್ಕ ಇರುವ ಬಗ್ಗೆಯೂ ವಿಚಾರಣೆ ನಡೆಸಲಾಗಿದೆ ಎನ್ನಲಾಗಿದೆ. ಇದಷ್ಟೇ ಅಲ್ಲ, ಪ್ಯಾರಿಸ್‌ ದಾಳಿಯಲ್ಲಿ ಕೇರಳ ಮೂಲದವರ ನೆರಳು ಕಾಣುತ್ತಿರುವುದು ಪ್ರಮುಖ ಕಾರಣ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಯಾರೀತ ಸುಬಹಾನಿ?: 2016ರಲ್ಲಿ ರಾಷ್ಟ್ರೀಯ ತನಿಖಾ ದಳದಿಂದ ಬಂಧಿತನಾಗಿರುವ ಐಸಿಸ್‌ ಉಗ್ರ ಕೇರಳದ ಸುಬಹಾನಿ ಹಜಾ ಮೊಯ್ದಿನ್‌ ಪ್ಯಾರಿಸ್‌ ಸ್ಫೋಟ ಪ್ರಕರಣದಲ್ಲಿ ಭಾಗಿಯಾಗಿದ್ದಾನೆ ಎಂಬ ಆರೋಪ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಸುಬಹಾನಿ ಹಿನ್ನೆಲೆ ಕೆದಕಿದಾಗ ಆತ ಈ ಹಿಂದೆ ಇಂಡಿಯನ್‌ ಮುಜಾಹಿದ್ದೀನ್‌ ಸಂಘಟನೆಯಲ್ಲಿ ಸಕ್ರಿಯನಾಗಿದ್ದು, ಭಟ್ಕಳ್‌ ಸಹೋದರರ ತಂಡದಲ್ಲಿ ಗುರ್ತಿಸಿ  ಕೊಂಡಿದ್ದ. ಕೇರಳದಲ್ಲಿ ಐಎಂ ಸಂಘಟನೆಯ ಜವಾಬ್ದಾರಿಯನ್ನು ಹೊತ್ತಿದ್ದ. ಸುಬಹಾನಿಯ ಐಎಂ ಸಂಘಟನೆ ಚಟುವಟಿಕೆಗಳು ಬೆಳಕಿಗೆ ಬರುತ್ತಿದ್ದಂತೆ ಐಸಿಸ್‌ ಸೇರುವ ಸಲುವಾಗಿ 2015ರಲ್ಲಿ ಇರಾಕ್‌ಗೆ ತೆರಳಿ ವಾಪಸ್‌ ಬಂದಿದ್ದ. ಅಲ್ಲದೆ, ಜತೆಗೆ ಐಎಂ ಸಂಘಟನೆಯಲ್ಲಿ ತೊಡಗಿಸಿ  ಕೊಂಡು ಕೇಂದ್ರ ಕಾರಾಗೃಹದಲ್ಲಿರುವ ಕೆಲವರು ಐಸಿಸ್‌ ಸೇರಲು ಹೋಗಿ ವಾಪಸ್‌ ಬಂದಿದ್ದರು. ಈ ಅಂಶಗಳ ಆಧಾರದಲ್ಲಿ ಪ್ಯಾರಿಸ್‌ ಸ್ಫೋಟ ಪ್ರಕರಣದಲ್ಲಿ ಐಎಂ ಸಂಘಟನೆ ಕೈವಾಡವೂ ಇರಬಹುದು ಎಂಬ ಬಲವಾದ ಶಂಕೆ ವ್ಯಕ್ತವಾಗಿದೆ. ಈ ಪ್ರಮುಖ ಅಂಶಗಳನ್ನು ಆಧಾರದಲ್ಲಿ ಕೇಂದ್ರ ಕಾರಾಗೃಹದಲ್ಲಿರುವ ಐಎಂ ಉಗ್ರರ ವಿಚಾರಣೆಯನ್ನು ನಡೆಸಲಾಗಿದೆ ಎಂದು ಮೂಲಗಳು ತಿಳಿಸಿವೆ.

2015ರಲ್ಲಿ ನಡೆದ ಪ್ಯಾರಿಸ್‌ ಭಯೋತ್ಪಾದಕ ಕೃತ್ಯದ ಜಾಡು ಹಿಡಿದು ತನಿಖೆ ನಡೆಸುತ್ತಿರುವ ಪ್ಯಾರಿಸ್‌ ಪೊಲೀಸರ ವಿಶೇಷ ತನಿಖಾ ತಂಡಕ್ಕೆ ಈ ಮಹತ್ವದ ಸುಳಿವು ಲಭಿಸಿದೆ. ಮೋಸ್ಟ್‌ ವಾಂಟೆಂಡ್‌ ಉಗ್ರನಾಗಿರುವ ಐಎಂ ಸದಸ್ಯ ರಿಯಾಜ್‌ ಭಟ್ಕಳ್‌ ಹಾಗೂ ಆತನ ಸಹಚರರು ಸೌದಿ ಅರೆಬಿಯಾ ರಾಷ್ಟ್ರಗಳಲ್ಲಿ ಆಶ್ರಯಪಡೆದುಕೊಂಡು, ಐಸಿಸ್‌ ಸಂಘಟನೆ ಜತೆ ಕೈ ಜೋಡಿಸಿದ್ದಾರೆ. ಹೀಗಾಗಿ ಸ್ಫೋಟ ಪ್ರಕರಣದಲ್ಲಿ ಇಂಡಿಯನ್‌ ಮುಜಾಯಿದ್ದೀನ್‌ ಪಾತ್ರದ ಬಗ್ಗೆಯೂ ತನಿಖೆ ಚುರುಕುಗೊಳಿಸಿದ್ದಾರೆ ಎಂದು ಉನ್ನತ ಮೂಲಗಳಿಂದ ತಿಳಿದು ಬಂದಿದೆ.

ಹತ್ತು ದಿನದ ಹಿಂದೆ ವಿಚಾರಣೆ
ಈಗಾಗಲೇ ಭಾರತಕ್ಕೆ ಆಗಮಿಸಿರುವ ಪ್ಯಾರಿಸ್‌ ಪೊಲೀಸರ ತಂಡ ಕೇರಳ, ಬೆಂಗಳೂರು, ಸೇರಿದಂತೆ ದೇಶದ ವಿವಿಧ ಜೈಲುಗಳಲ್ಲಿರುವ ಐಸಿಸ್‌ ಪರ ಒಲವುಳ್ಳ ಉಗ್ರರು ಹಾಗೂ ಐಎಂ ಉಗ್ರರನ್ನು ವಿಚಾರಣೆ ನಡೆಸಿ ಮಾಹಿತಿ ಸಂಗ್ರಹಿಸಲು ನಿರ್ಧರಿಸಿದೆ. ಹತ್ತು ದಿನಗಳ ಹಿಂದೆ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಐಎಂ ಸಂಘಟನೆಯ ಯಾಸೀನ್‌ ಭಟ್ಕಳ್‌ ಹಾಗೂ ಇತರರನ್ನು ಸುದೀರ್ಘ‌ ವಿಚಾರಣೆ ಗೊಳಪಡಿಸಿದೆ. ಐಸಿಸ್‌ ಸಂಪರ್ಕದ ಕುರಿತ ಮಾಹಿತಿಯನ್ನು ಪಡೆದುಕೊಂಡಿದೆ ಎಂದು ವಿಶ್ವಸನೀಯ ಮೂಲಗಳಿಂದ ತಿಳಿದು ಬಂದಿದೆ. ಈ ಬೆಳವಣಿಗೆಗಳ ಮಧ್ಯೆಯೇ ಕೇರಳದ ತ್ರಿಶೂರ್‌ ಜೈಲಿನಲ್ಲಿರುವ ಉಗ್ರ ಸುಬಾಹನಿ ವಿಚಾರಣೆಯನ್ನು ಪ್ಯಾರಿಸ್‌ ಪೊಲೀಸರ ತಂಡ ಪೂರ್ಣಗೊಳಿಸಿದ್ದು, ಸ್ಫೋಟ ಪ್ರಕರಣದಲ್ಲಿ ಆತನ ಪಾತ್ರ, ಭಾರತದಲ್ಲಿನ ಇತರೆ ಸಂಘಟನೆಗಳ ಉಗ್ರರು ಕೈ ಜೋಡಿಸಿದ್ದಾರೆಯೇ ಎಂಬುದರ ಬಗ್ಗೆ ಮಾಹಿತಿ ಕಲೆ ಹಾಕಿದೆ ಎಂದು ತಿಳಿದುಬಂದಿದೆ.

Advertisement

ಮಂಜುನಾಥ್‌ ಲಘುಮೇನಹಳ್ಳಿ

Advertisement

Udayavani is now on Telegram. Click here to join our channel and stay updated with the latest news.

Next