Advertisement

ಹೊಸ್ಮಠ ಸೇತುವೆ ಮುಳುಗಡೆ

02:15 AM Jun 12, 2018 | Team Udayavani |

ಕಡಬ: ನಿರಂತರವಾಗಿ ಸುರಿದ ಮಳೆಯಿಂದಾಗಿ ಗುಂಡ್ಯ ಹೊಳೆಯಲ್ಲಿ ನೆರೆ ನೀರಿನ ಮಟ್ಟ ಏರಿಕೆಯಾಗಿದ್ದು, ಸೋಮವಾರ ಬೆಳಗ್ಗಿನಿಂದಲೇ ಹೊಸ್ಮಠ ಸೇತುವೆ ನೀರಿನಲ್ಲಿ ಮುಳುಗಡೆಯಾಗಿ ಕಡಬದ ಮೂಲಕ ಹಾದು ಹೋಗುವ ಉಪ್ಪಿನಂಗಡಿ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯಲ್ಲಿ ಸಂಚಾರ ವ್ಯತ್ಯಯಗೊಂಡಿತು. ಉಪ್ಪಿನಂಗಡಿಯಿಂದ ಕಡಬ ಮೂಲಕ ಸುಬ್ರಹ್ಮಣ್ಯಕ್ಕೆ ಸಂಚರಿಸಬೇಕಾದ ವಾಹನಗಳು ನೆಲ್ಯಾಡಿ, ಇಚ್ಲಂಪಾಡಿ ಮೂಲಕ ಬಳಸು ದಾರಿಯಲ್ಲಿ ಸಾಗಬೇಕಾಯಿತು. ಶಾಲಾ ವಿದ್ಯಾರ್ಥಿಗಳು ಹಾಗೂ ಈ ರಸ್ತೆಯಲ್ಲಿ ನಿತ್ಯ ಪ್ರಯಾಣಿಸುವ ಪ್ರಯಾಣಿಕರು ತೀವ್ರ ತೊಂದರೆ ಎದುರಿಸಿದರು. ಪಾದಚಾರಿಗಳು ನಿರ್ಮಾಣಹಂತದಲ್ಲಿರುವ ಹೊಸ ಸೇತುವೆಯ ಮೂಲಕ ಹೊಳೆ ದಾಟಿದರು. ಸಂಜೆಯ ವೇಳೆಗೆ ಮಳೆ ಕೊಂಚ ಕಡಿಮೆಯಾದರೂ ಸೇತುವೆಯ ಮೇಲಿನಿಂದ ನೆರವೆನೀರು ಇಳಿದಿರಲಿಲ್ಲ.

Advertisement


ಈ ವರ್ಷ ಪ್ರಥಮ ಮುಳುಗಡೆ

ಹಲವು ವರ್ಷಗಳಿಂದ ಮಳೆಗಾಲದಲ್ಲಿ ಹೊಸ್ಮಠ ಮುಳುಗು ಸೇತುವೆ ನೆರೆ ನೀರಿನಲ್ಲಿ ಮುಳುಗಡೆಯಾಗಿ ಉಪ್ಪಿನಂಗಡಿ -ಕಡಬ ರಸ್ತೆಯಲ್ಲಿ ಸಂಚರಿಸುವ ಪ್ರಯಾಣಿಕರು ತೊಂದರೆ ಅನುಭವಿಸುತ್ತಿದ್ದಾರೆ. ಈ ವರ್ಷದ ಮಳೆಗಾಲದಲ್ಲಿ  ಹೊಸ್ಮಠ ಸೇತುವೆಗೆ ಇದು ಪ್ರಥಮ ಮುಳುಗಡೆ. ಸ್ಥಳೀಯವಾಗಿ ಮಳೆ ಇಲ್ಲದೇ ಇದ್ದರೂ ಘಟ್ಟದ ಮೇಲೆ ಹೆಚ್ಚಿನ ಪ್ರಮಾಣದ ಮಳೆ ಸುರಿದರೆ ಹೊಳೆಯಲ್ಲಿ ನೀರು ಉಕ್ಕಿಹರಿದು ಹೊಸ್ಮಠ ಸೇತುವೆ ಮುಳುಗಡೆಯಾಗುವುದು ಇಲ್ಲಿ ಸಾಮಾನ್ಯ.

ಹೊಸ ಸೇತುವೆ ಪೂರ್ತಿಯಾಗದೆ ಸಮಸ್ಯೆ
ಹೊಸಮಠದಲ್ಲಿ  ಹಳೆಯ ಮುಳುಗು ಸೇತುವೆಯ ಪಕ್ಕದಲ್ಲಿ ನೂತನ ಸೇತುವೆಯ ನಿರ್ಮಾಣ ಕಾಮಗಾರಿ 7 ಕೋಟಿ 50 ಲಕ್ಷ ರೂ. ವೆಚ್ಚದಲ್ಲಿ ನಡೆಯುತ್ತಿದೆ. ಸೇತುವೆಯ ಕಾಮಗಾರಿ ಬಹುತೇಕ ಮುಗಿದಿದ್ದರೂ ಹೊಸ ಸೇತುವೆಯ ಎರಡೂ ಬದಿಯಲ್ಲಿ ಸಂಪರ್ಕ ರಸ್ತೆ ನಿರ್ಮಾಣದ ಕೆಲಸ ಪೂರ್ತಿಯಾಗಿಲ್ಲ. ಈ ಬಾರಿಯ ಮಳೆಗಾಲದಲ್ಲಿ ಹೊಸ ಸೇತುವೆಯ ಮೇಲೆ ವಾಹನ ಸಂಚಾರಕ್ಕೆ ಅನುವುಮಾಡಿಕೊಡುವುದಾಗಿ ಅಧಿಕಾರಿಗಳು ನೀಡಿದ್ದ ಭರವಸೆಯೂ ಕೈಗೂಡಿಲ್ಲ. ಸೇತುವೆಯ ಎರಡೂ ಬದಿಯಲ್ಲಿ ನಿರ್ಮಿಸಲಾಗಿರುವ ರಕ್ಷಣಾ ಗೇಟುಗಳನ್ನು ಮುಚ್ಚಿರುವ ಪೊಲೀಸರು ಹಾಗೂ ಗೃಹರಕ್ಷಕ ಸಿಬಂದಿ ಕಾವಲು ಕಾಯುತ್ತಿದ್ದಾರೆ. ಕಂದಾಯ ಅಧಿಕಾರಿಗಳು ಹಾಗೂ ಸ್ಥಳೀಯ ಪಂಚಾಯತ್‌ ಪ್ರಮುಖರು ಸ್ಥಳದಲ್ಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next