Advertisement

ರಿವರ್‌ಫೆಸ್ಟ್ ಸ್ಥಳ ಈಗ ಅನ್ಯ ಚಟುವಟಿಕೆ ತಾಣ!

10:53 AM Apr 14, 2022 | Team Udayavani |

ಕೂಳೂರು: ಪ್ರಥಮ ಬಾರಿಗೆ ರಿವರ್‌ ಫೆಸ್ಟ್‌ ನಡೆಸಿದ ಪ್ರದೇಶವಾದ ಬಂಗ್ರಕೂಳೂರಿನ ಪ್ರಕೃತಿಯ ಮಡಿಲಿನ ರಮಣೀಯ ಸ್ಥಳ ಇಂದು ಸ್ಥಳೀಯ ಆಡಳಿತಗಳ ನಿರ್ಲಕ್ಷ್ಯದಿಂದ ಈ ಸ್ಥಳ ಅನೈತಿಕ ಚಟುವಟಿಕೆಗಳ ತಾಣವಾಗುತ್ತಿದೆ. ಕುಡಿದು ಮೋಜು ಮಾಡುವ, ಮಾದಕ ದ್ರವ್ಯ ಬಳಕೆಯ ಜಾಗವಾಗಿ ಮಾರ್ಪಾಡಾಗುತ್ತಿದೆ.

Advertisement

ಕೂಳೂರಿನಿಂದ ಒಂದೆರಡು ಕಿ.ಮೀ. ಫಲ್ಗುಣಿ ನದಿ ದಂಡಯ ಮಣ್ಣಿನ ರಸ್ತೆಯಲ್ಲಿ ಸಂಚರಿಸಿದರೆ ಈ ಹಿಂದೆ ದ.ಕ. ಜಿಲ್ಲಾಡಳಿತ ರಿವರ್‌ ಫೆಸ್ಟ್‌ ನಡೆಸಿದ ಈ ಸ್ಥಳ ಕಂದಾಯ ಇಲಾಖೆಗೆ ಸೇರಿದ್ದಾಗಿದ್ದು, ಯಾವುದೇ ಯೋಜನೆಗೆ ಸದ್ಯ ಮೀಸಲಿರಿಸಲಾಗಿಲ್ಲ. ಈ ಹಿಂದೆ ನದಿಯಲ್ಲಿ ಡ್ರಜ್ಜಿಂಗ್‌ ಮಾಡಿದ ಸಂದರ್ಭ ಮರಳು ರಾಶಿ ಹಾಕಲು ಈ ಸ್ಥಳ ಬಳಕೆ ಮಾಡಲಾಗಿತ್ತು. ಇದೀಗ ಅಘೋಷಿತವಾಗಿ ಯುವ ಸಮೂಹಕ್ಕೆ ಮೋಜಿನ ಕೇಂದ್ರವಾಗಿದೆ.

ಅಪಾಯದ ಮುನ್ಸೂಚನೆ

ಸರಕಾರ ಈ ಸ್ಥಳದ ಬಗ್ಗೆ ಸ್ವಲ್ಪ ಕಾಳಜಿ ವಹಿಸಿದರೂ ಇದು ಪ್ರವಾಸಿಗರ ಪ್ರೇಕ್ಷಣೀಯ ತಾಣವಾಗುವ ಅವಕಾಶವಿದೆ. ಸದ್ಯ ಇದು ಈ ಮೋಜಿನ ಪಾರ್ಟಿಗೆ ಮೀಸಲಿರಿಸಿದಂತೆ ಕಾಣುತ್ತದೆ. ಪರಿಣಾಮ ಇಲ್ಲಿ ಬಿಯರ್‌, ವಿಸ್ಕಿ ಹೀಗೆ ತರಾವರಿ ಮದ್ಯದ ಬಾಟಲಿಗಳ ರಾಶಿ ಬಿದ್ದಿವೆ. ತಿಂದು ಬಿಸಾಡಿದ ಪೊಟ್ಟಣಗಳು, ಪ್ಲಾಸ್ಟಿಕ್‌ ರ್ಯಾಪರ್‌ಗಳ ರಾಶಿಯಿದೆ. ಯುವಕರ ಈ ನಡವಳಿಕೆಯಿಂದ ಸ್ಥಳೀಯ ಗ್ರಾಮಸ್ಥರಿಗೂ ಮುಜುಗರ ವುಂಟಾಗುತ್ತಿದ್ದು, ಹಿರಿಯರು ವಾಕಿಂಗ್‌ ನಡೆಸಲೂ ಹಿಂದೇಟು ಹಾಕುವಂತಾಗಿದೆ. ಬೀದ ದೀಪವಿಲ್ಲದೆ ಕತ್ತಲಾದೊಡನೆ ಇಲ್ಲಿ ಅಪಾಯದ ಮುನ್ಸೂಚನೆಯೂ ಗೋಚರಿಸುತ್ತದೆ. ಈ ವಿಚಾರವಾಗಿ ಹಲವು ಬಾರಿ ಸ್ಥಳೀಯ ಪೊಲೀಸ್‌ ಠಾಣೆಯ ಗಮನಕ್ಕೆ ತರಲಾಗಿದೆ.

Advertisement

ರಿವರ್‌ಫೆಸ್ಟ್‌ ನಡೆದ ಜಾಗದಲ್ಲಿ ಇದೀಗ ಬೃಹತ್‌ ಹೊಂಡ ನಿರ್ಮಾಣವಾಗಿದ್ದು, ಮರಳು ಸಾಗಿಸಲಾದ ಕುರುಹು ಕಾಣುತ್ತಿದೆ. ಇನ್ನು ಒಂದೆರಡು ತಿಂಗಳಲ್ಲಿ ಮುಂಗಾರು ಆರಂಭವಾಗಲಿದ್ದು, ಈ ಹೊಂಡದಲ್ಲಿ ನೀರು ನಿಂತರೆ ಹೊಂಡ ಯಾವುದು, ಬಯಲು ಯಾವುದು ಎಂದು ಗೋಚರಿಸದ ಸ್ಥಿತಿಯಿದೆ. ಇಲ್ಲಿಯೂ ಬೇಡದ ತ್ಯಾಜ್ಯಗಳನ್ನು ತಂದು ಸುರಿಯುವ ಕೆಲಸ ಸದ್ದಿಲ್ಲದೆ ನಡೆಯುತ್ತಿದೆ. ಇಲ್ಲಿ ಅಲೆಮಾರಿ ಮೀನು ಹಿಡಿಯುವ ಜನಾಂಗವಾಸವಿದ್ದು, ಪುಟ್ಟ ಮಕ್ಕಳು ಓಡಾಡುವ ಜಾಗವಾಗಿದೆ.

ಬೇಲಿ ನಿರ್ಮಿಸಿ, ಸುರಕ್ಷೆ ಕಾಪಾಡಿ

ಈ ಭಾಗದಲ್ಲಿ ನದಿ ದಂಡೆಯ ಉದ್ದಕ್ಕೂ ತ್ಯಾಜ್ಯ ಹಾಕುವ, ನದಿ ಒಡಲಿಗೆ ಮಣ್ಣು ಹಾಕುವ ಅಕ್ರಮ ಚಟುವಟಿಕೆ ನಿಯಂತ್ರಿಸಲು ನದಿ ದಂಡೆ ಉದ್ದಕ್ಕೂ ತಂತಿ ಬೇಲಿ ನಿರ್ಮಿಸಿದ್ದು, ಯಶಸ್ವಿಯಾಗಿದೆ. ಇದೇ ಮಾದರಿ ಕಂದಾಯ ಭೂಮಿಯ ಸುತ್ತಲೂ ತಂತಿ ಬೇಲಿ ಹಾಕಿ ಅಕ್ರಮ ಕೆಲಸಗಳಿಗೆ ತಡೆಯಬೇಕಿದೆ. ಕೂಳೂರು ಜಂಕ್ಷನ್‌ಗೆ ಹತ್ತಿರವಿದ್ದರೂ ಸುರಕ್ಷೆ ದೃಷ್ಟಿಯಿಂದ ಪೊಲೀಸ್‌ ಚೌಕಿಯನ್ನು ಸ್ಥಾಪಿಸಿದಲ್ಲಿ ಸ್ಥಳೀಯರಿಗೂ ಅನುಕೂಲವಾಗಲಿದೆ.

ಪ್ರವಾಸೋದ್ಯಮಕ್ಕೆ ಮೆಗಾ ಯೋಜನೆ

ಫಲ್ಗುಣಿ ನದಿ ತಟದ ಈ ಪ್ರದೇಶದ ನೈಸರ್ಗಿಕ ಸೌಂದರ್ಯ ಉಳಿಸಿಕೊಳ್ಳುವಂತೆ ಮಾಡಬೇಕಿದೆ. ಈಗಾಗಲೇ ಪ್ರವಾಸೋಧ್ಯಮ ಇಲಾಖೆಗೆ ಮೆಗಾ ಟೂರಿಸಂ ಯೋಜನೆಗೆ ಅನುದಾನ ಕಲ್ಪಿಸಲು ಬೇಕಾದ ಎಲ್ಲ ಪೂರ್ವಭಾವಿ ಮಾಹಿತಿ ಕಲೆಹಾಕಲು ಸೂಚಿಸಲಾಗಿದೆ. ಇದೊಂದು ಪ್ರಸಿದ್ಧ ಪ್ರವಾಸಿ ಕೇಂದ್ರವಾಗಿ ಮಾಡಲು ಸರಕಾರದ ಗಮನ ಸೆಳೆಯುತ್ತೇನೆ. ಸುರಕ್ಷೆಗೆ ಸಂಬಂಧಪಟ್ಟಂತೆ ಪೊಲೀಸರು ನೋಡಿಕೊಳ್ಳುತ್ತಾರೆ. -ಡಾ| ಭರತ್‌ ಶೆಟ್ಟಿ ವೈ., ಶಾಸಕ ಮಂ.ಉ.ವಿಧಾನ ಸಭೆ ಕ್ಷೇತ್ರ

– ಲಕ್ಷ್ಮೀನಾರಾಯಣ ರಾವ್‌

Advertisement

Udayavani is now on Telegram. Click here to join our channel and stay updated with the latest news.

Next