ಉಪ್ಪಿನಂಗಡಿ : ನದಿ ಪಾತ್ರದ ಕಲ್ಲು ಬಂಡೆಯನ್ನು ಬಳಸಿಕೊಂಡು, ಮಣ್ಣು ತುಂಬಿಸಿ ನದಿಪಾತ್ರದ ಭೂಮಿಯನ್ನು ಸ್ವಾಧೀನ ಮಾಡಿಕೊಳ್ಳಲು ವ್ಯಕ್ತಿಯೊಬ್ಬರು ಯತ್ನಿಸುತ್ತಿರುವುದು ಕಂಡುಬಂದಿದ್ದು, ಇದಕ್ಕೆ 34 ನೆಕ್ಕಿಲಾಡಿ ಗ್ರಾಮಸ್ಥರಿಂದ ಆಕ್ಷೇಪ ವ್ಯಕ್ತವಾಗಿದೆ.
ಪುತ್ತೂರು ತಾಲೂಕು 34 ನೆಕ್ಕಿಲಾಡಿ ಗ್ರಾಮದ ಕುಡಿಪ್ಪಾಡಿ ಎಂಬಲ್ಲಿ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಜಾಗವಿರುವ ವ್ಯಕ್ತಿಯೊಬ್ಬರು ನದಿಯನ್ನು ಅತಿಕ್ರಮಿಸುತ್ತಿದ್ದು, ಸುಮಾರು ಒಂದು ಎಕ್ರೆ ಜಾಗದಲ್ಲಿ ಮಣ್ಣು ಹಾಕಿ, ಸಮತಟ್ಟು ಮಾಡಿಸುತ್ತಿದ್ದಾರೆ. ಟಿಪ್ಪರ್ ಮೂಲಕ ಬೇರೆ ಕಡೆಯಿಂದ ಮಣ್ಣು ತಂದು ಸುರಿಯುತ್ತಿದ್ದಾರೆ. ಈವರೆಗೆ ಸಾವಿರಕ್ಕೂ ಹೆಚ್ಚು ಲೋಡ್ ಮಣ್ಣು ಹಾಕಿದ್ದಾರೆ. ತನ್ನ ಜಮೀನಿನ ಎತ್ತರಕ್ಕೆ ಮಣ್ಣು ಹಾಕುತ್ತಿದ್ದು, ಈಗಾಗಲೇ ಅರ್ಧ ಎಕ್ರೆಯಷ್ಟು ಜಾಗ ಸಮತಟ್ಟಾಗಿದೆ ಎಂದು ಸ್ಥಳೀಯರು ದೂರಿದ್ದಾರೆ.
ಮಣ್ಣು ಸುರಿಯುವುದರಿಂದ ನದಿಯ ಪ್ರಾಕೃತಿಕ ಹರಿವಿಗೆ ಅಡ್ಡಿಯಾಗುತ್ತದೆ. ನೀರಿಗೆ ತಡೆಯುಂಟಾದರೆ ನದಿ ದಿಕ್ಕು ಬದಲಿಸುವ ಸಾಧ್ಯತೆಯಿದೆ. ನದಿಯಲ್ಲಿ ಒರತೆ ಕಡಿಮೆಯಾಗುವ ಅಪಾಯವಿದೆ. ಮಣ್ಣು ಬಿದ್ದು, ನೀರು ಮಲಿನವಾಗುತ್ತಿದ್ದು, ಕೆಂಪು ಬಣ್ಣಕ್ಕೆ ತಿರುಗಿದೆ. ನೀರಿನ ಕೊರತೆಯಾಗಿ ಮೀನುಗಳು, ಇತರ ಜಲಚರಗಳು ಸಾಯುತ್ತಿದ್ದು, ದುರ್ವಾಸನೆ ಹರಡುತ್ತಿದೆ. ಈ ಜಾಗದ ಪಕ್ಕದಲ್ಲೇ ಮತ್ತೊಂದು ಕಡೆಯಲ್ಲೂ ಅಲ್ಪ ಪ್ರಮಾಣದ ಅತಿಕ್ರಮಣವಾಗಿದ್ದು, ಮಳೆ ನೀರಿಗೆ ನೀರು ಕೊಚ್ಚಿ ಹೋಗಿ, ನದಿ ದಡದಲ್ಲಿ ನಿಂತಿದೆ. ಈ ಜಾಗದಲ್ಲಿ ನೀರು ಹರಿಯಲು ತಡೆಯುಂಯಾಗಿದೆ. ಜಿಲ್ಲಾಡಳಿತ ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ವರದಿಗೆ ಸೂಚನೆ
ಖಾಸಗಿ ವ್ಯಕ್ತಿಗಳು ನದಿ ಪರಂಬೋಕು ಜಾಗವನ್ನು ಅತಿಕ್ರಮಿಸಿದರೆ ಕ್ರಮ ಜರಗಿಸುವೆ. ಅಲ್ಲದೆ, ತತ್‌ಕ್ಷಣವೇ ಗ್ರಾಮ ಕರಣಿಕರಿಗೆ ಸ್ಥಳ ಪರಿಶೀಲನೆ ನಡೆಸಿ, ವರದಿ ಸಲ್ಲಿಸುವಂತೆ ಸೂಚಿಸುತ್ತೇನೆ.
– ಜಯವಿಕ್ರಮ
ಕಂದಾಯ ನಿರೀಕ್ಷಕರು