Advertisement

ನದಿ ಸಂರಕ್ಷಣೆ ಪ್ರತಿಯೊಬ್ಬರ ಕರ್ತವ್ಯ: ಪಾಟೀಲ

05:52 PM Dec 18, 2023 | Team Udayavani |

ಬೈಲಹೊಂಗಲ : ಇಡೀ ಉತ್ತರ ಕರ್ನಾಟಕ ಜನರ ಜೀವನಾಡಿ ಆಗಿರುವ ಮಲಪ್ರಭಾ ನದಿಯು ಈ ಭಾಗದ ಜನರ ಕಾಮಧೇನು, ಕಲ್ಪವೃಕ್ಷವಾಗಿದೆ. ಮಲಪ್ರಭಾ ನದಿ ದಡವು ಸಾಕಷ್ಟು ವರ್ಷಗಳಿಂದ ಪ್ಲಾಸ್ಟಿಕ್‌ ವಸ್ತುಗಳು, ಮೀನು ಮಾರಾಟಗಾರರ ತ್ಯಾಜ್ಯ ವಸ್ತುಗಳಿಂದ ಕಲುಷಿತಗೊಳ್ಳುತ್ತಿರುವುದನ್ನು ಮನಗಂಡು ತಾಲೂಕಿನ ಜಾಲಿಕೊಪ್ಪ ಗ್ರಾಮದ ತಪೋಕ್ಷೇತ್ರದ ಶಿವಾನಂದ ಗುರೂಜಿ, ಮಾಜಿ ಶಾಸಕ ಡಾ.ವಿಶ್ವನಾಥ ಪಾಟೀಲ ಮಾರ್ಗದರ್ಶನದಲ್ಲಿ ನಿರ್ಮಲ ಮಲಪ್ರಭಾ ನದಿ ಅಭಿಯಾನ ಹೆಸರಿನಡಿ ವಿವಿಧ ಕನ್ನಡಪರ ಸಂಘಟನೆ, ಸಾಮಾಜಿಕ ಕಾರ್ಯಕರ್ತರು, ವೈದ್ಯರು, ವಕೀಲರ ಸಂಘ, ಕಲಾವಿದರ ಬಳಗ, ಎಲ್ಲ ಶಾಲೆಗಳ ಪ್ರಾಂಶುಪಾಲರು, ಶಿಕ್ಷಕರು, ವಿದ್ಯಾರ್ಥಿಗಳು, ಈ ಭಾಗದ ಸಮಸ್ತ ರೈತರು ಕೂಡಿಕೊಂಡು ನದಿ ದಡವನ್ನು ರವಿವಾರ ಬೆಳಗ್ಗೆ ಶುಚಿಗೊಳಿಸಿದರು.

Advertisement

ನದಿ ದಡದಲ್ಲಿ ಅಧಿಕ ಪ್ರಮಾಣದಲ್ಲಿ ಬಿದ್ದಿದ್ದ ಪ್ಲಾಸ್ಟಿಕ್‌ ವಸ್ತುಗಳು, ಮೀನಿನ ತ್ಯಾಜ್ಯ, ಮಾಂಸದ ತುಕಡಿ, ಹಣ್ಣು, ಕಾಯಿ, ಬಟ್ಟೆ, ದೇವರ ಹಳೆಯ ಫೋಟೋಗಳನ್ನು ತೆಗೆದು ಹಾಕಿದರು. ನದಿ ದಡದ ತ್ಯಾಜ್ಯವನ್ನು ಪೂರ್ಣ ಪ್ರಮಾಣದಲ್ಲಿ ಸಂಗ್ರಹಿಸಿ ಸುಟ್ಟು ಹಾಕಿದರು.

ಜಾಲಿಕೊಪ್ಪ ಗ್ರಾಮದ ತಪೋ ಕ್ಷೇತ್ರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಡಾ.ವಿಶ್ವನಾಥ ಪಾಟೀಲ ನೇತೃತ್ವವಹಿಸಿ ಮಾತನಾಡಿ, ಈ ಭಾಗದ ಜೀವನಾಡಿಯಾಗಿರುವ ಮಲಪ್ರಭಾ ನದಿಯ ಸಂರಕ್ಷಣೆ, ಸ್ವತ್ಛತೆಗೆ ಪ್ರತಿಯೊಬ್ಬರ ಸಹಕಾರ ಅಗತ್ಯವಾಗಿದೆ. ಮೊದಲೇ ಬರಗಾಲ. ಮಳೆ ಇಲ್ಲ. ಕುಡಿಯುವ ನೀರಿಗೆ ಪರದಾಡುವ ದುಸ್ಥಿತಿ ಇದೆ. ಮಲಪ್ರಭಾ ನದಿಯು ಮಲೀನಗೊಂಡು ಕಲುಷಿತಗೊಳ್ಳುತ್ತಿರುವುದನ್ನು ಮನಗಂಡು ಶಿವಾನಂದ ಗುರೂಜಿ ಮಾರ್ಗದರ್ಶನದಲ್ಲಿ ಅಭಿಯಾನ ನಡೆಸಿ ಶುಚಿಗೊಳಿಸಲಾಗಿದೆ. ಈ ಅಭಿಯಾನಕ್ಕೆ ಕೈ ಜೋಡಿಸಿದ ಪ್ರತಿಯೊಬ್ಬರಿಗೂ ಕೃತಜ್ಞತೆ ಎಂದರು.

ತಪೋ ಕ್ಷೇತ್ರದ ಶಿವಾನಂದ ಗುರೂಜಿ ಸಾನ್ನಿಧ್ಯವಹಿಸಿ ಮಾತನಾಡಿ, ಸುತ್ತಮುತ್ತಲಿನ ಪರಿಸರ ಶುಚಿಯಾಗಿಟ್ಟುಕೊಳ್ಳುವುದರಿಂದ
ಆರೋಗ್ಯಭಾಗ್ಯ ಲಭಿಸುತ್ತದೆ. ಕುಡಿಯುವ ನೀರಿಗೆ ಆಸರೆ ಆಗಿರುವ ಮಲಪ್ರಭಾ ನದಿಯು ಈ ಭಾಗದ ಜನರ ಜೀವ ನಾಡಿ ಆಗಿದೆ. ಅದರ ಉಳಿವು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ನದಿಗೆ ಯಾರೂ ಏನನ್ನೂ ಎಸೆಯದೆ ಶುಚಿಯಾಗಿಟ್ಟುಕೊಳ್ಳಬೇಕು ಎಂದರು. ನ್ಯಾಯವಾದಿಗಳ ಸಂಘದ ಅಧ್ಯಕ್ಷ ಎಂ.ಆರ್‌. ಮೆಳವಂಕಿ, ಮಡಿವಾಳಪ್ಪ ಹೋಟಿ, ಮಲ್ಲಪ್ಪ ಮುರಗೋಡ, ಯಲಪ್ಪ  ಹುಗಲಣ್ಣವರ, ಡಾ.ಸಿ.ಬಿ.ಗಣಾಚಾರಿ, ಎ.ಬಿ.ಪಾಟೀಲ, ಮಹಾದೇವ ಕಲಭಾಂವಿ, ಸುರೇಶ ಹೊಳಿ, ಮಲ್ಲಯ್ನಾ ಪೂಜೇರ,
ಮಡಿವಾಳಪ್ಪ ಹಟ್ಟಿ, ಗುರು ಅಂಗಡಿ, ಉದಯ ಕೃಷ್ಣನ, ಪ್ರದೀಪ ಮೂಟವಾಣಿ, ಕುಮಾರ ಗಾಣಿಗೇರ, ಪರಪ್ಪ ಬೋಳಶೆಟ್ಟಿ, ಉಮೇಶ ಅಂಕನ್ನವರ, ಬಸವರಾಜ ತೋಟಗಿ, ಮಲ್ಲಿಕಾರ್ಜುನ ಗಾಣಿಗೇರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next