Advertisement

ನದಿ ಜೋಡಣೆ ಬೇಗುದಿ;  ರಾಜ್ಯಕ್ಕೆ ಆತಂಕ –ವರಿಷ್ಠರಿಗೆ ನಿಲುವು ತಿಳಿಸಲಿರುವ  ಸಿಎಂ

01:17 AM Feb 05, 2022 | Team Udayavani |

ಬೆಂಗಳೂರು: ಕೇಂದ್ರ ಬಜೆಟ್‌ನಲ್ಲಿ ಪ್ರಸ್ತಾವವಾಗಿರುವ ಪಂಚ ನದಿಗಳ ಜೋಡಣೆ ಯೋಜನೆಯಲ್ಲಿ ರಾಜ್ಯಕ್ಕೆ ಅನ್ಯಾಯವಾಗಲಿದ್ದು, ಈ ಬಗ್ಗೆ ಕೇಂದ್ರ ಸರಕಾರದ ಜತೆ ಚರ್ಚಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ  ಮುಂದಾಗಿದ್ದಾರೆ. ಯೋಜನೆ ಆರಂಭಕ್ಕೂ ಮುನ್ನವೇ ಇದರಲ್ಲಿ  ರಾಜ್ಯಕ್ಕೆ ಸಿಗುವ ಪಾಲೆಷ್ಟು ಎಂಬ ಬಗ್ಗೆ ಖಚಿತಪಡಿಸಬೇಕು ಎಂದು ಕೇಂದ್ರವನ್ನು ಕೋರಲಿದ್ದಾರೆ.

Advertisement

ಬಜೆಟ್‌ನಲ್ಲಿ ಘೋಷಿಸುವ ಮುನ್ನ ಎಲ್ಲ ರಾಜ್ಯಗಳ ಜತೆ ಚರ್ಚಿಸಬೇಕಾಗಿತ್ತು ಎಂದು  ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. ಸರಕಾರವೂ ಇದೇ ಅಭಿಪ್ರಾಯ ಹೊಂದಿದ್ದು,  ಮಂಗಳವಾರ  ಬೊಮ್ಮಾಯಿ ಅವರು ದಿಲ್ಲಿಯಲ್ಲಿ ಕೇಂದ್ರದ ಜತೆ ಮಾತುಕತೆ ನಡೆಸುವ ಸಾಧ್ಯತೆ ಇದೆ.  ಇನ್ನೊಂದೆಡೆ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಅವರೂ, ನಮ್ಮ ಪಾಲಿನ ನೀರು ಸಿಗದೇ ಹೋದರೆ ಯೋಜನೆಗೆ ಒಪ್ಪಿಗೆ ನೀಡುವುದಿಲ್ಲ ಎಂದಿದ್ದಾರೆ.

ಸಮ್ಮತಿ ಪಡೆಯದಿದ್ದರೆ ಸಂಘರ್ಷ: ಸಿದ್ದು
ರಾಜ್ಯಗಳ ಸಮ್ಮತಿ ಪಡೆಯದೆ ಈ ಯೋಜನೆ ಆರಂಭಿಸಿದರೆ ಮತ್ತೆ ಸಂಘರ್ಷ ಉಂಟಾಗಬಹುದು ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ದಕ್ಷಿಣ ರಾಜ್ಯಗಳ ಮುಖ್ಯಮಂತ್ರಿಗಳು ಹಾಗೂ ಸರ್ವಪಕ್ಷಗಳ ಸಭೆ ಕರೆದು ಯೋಜನೆ ಬಗೆಗಿನ ಸಮಗ್ರ  ಮಾಹಿತಿ ನೀಡಬೇಕು ಎಂದರು.

ರಾಜ್ಯ ಸರಕಾರ ಪ್ರಸ್ತಾವನೆ
ಅಂತಾರಾಜ್ಯ ಜಲ ವಿವಾದದ ವಸ್ತುಸ್ಥಿತಿ ಹಾಗೂ ಸುತ್ತಲಿನ ರಾಜ್ಯಗಳೊಂದಿಗೆ ಗಡಿ ಹಂಚಿ ಕೊಂಡಿರುವ ಎಲ್ಲ ನದಿಗಳ ಸ್ಥಿತಿ ಹಾಗೂ ನದಿ ಜೋಡಣೆಯಿಂದ ಕರ್ನಾಟಕದ ಮೇಲೆ ಆಗುವ ಪರಿಣಾಮದ ಕುರಿತಾದ ಮಾಹಿತಿಯನ್ನು ಕೇಂದ್ರಕ್ಕೆ ಸಲ್ಲಿಸಲು ರಾಜ್ಯ ನಿರ್ಧರಿಸಿದೆ.  ಯೋಜನೆ ಕುರಿತು ರಾಜ್ಯದ ಜತೆ ಮಾತನಾಡದ  ಕೇಂದ್ರವು ಆಂಧ್ರ, ತ.ನಾಡು, ಕೇರಳದಿಂದ ಮಾಹಿತಿ ಪಡೆದಿರುವುದು  ರಾಜ್ಯಕ್ಕೆ ತಿಳಿದಿದೆ.

ಇದನ್ನೂ ಓದಿ:38 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಶಿಲ್ಪಾ ಶೆಟ್ಟಿಗೆ ವರ್ಗಾಯಿಸಿದ ಪತಿ ರಾಜ್ ಕುಂದ್ರಾ

Advertisement

ತಜ್ಞರು ಹೇಳುವುದೇನು?
ನೀರಾವರಿ ತಜ್ಞರ ಪ್ರಕಾರ, ನದಿ ಜೋಡಣೆ ಯೋಜನೆಯಿಂದ ಕರ್ನಾಟಕಕ್ಕೆ ಲಾಭಕ್ಕಿಂತ ನಷ್ಟವೇ ಹೆಚ್ಚು. ಈಗಾಗಲೇ ಆಂಧ್ರ ಪ್ರದೇಶ ಸರಕಾರ ಆಂಧ್ರದಲ್ಲಿ ಗೋದಾವರಿ -ಕೃಷ್ಣಾ ಯೋಜನೆ ಜಾರಿಗೊಳಿಸಿದೆ. ತಮಿಳುನಾಡು ಸರಕಾರ ಪೆನ್ನಾರ್‌ ಗುಂಡಾರ್‌ ಕಾವೇರಿ ಲಿಂಕ್‌ ಯೋಜನೆ ರೂಪಿಸಿದೆ. ಈ ಯೋಜನೆಗೆ ರಾಜ್ಯ ಸರಕಾರವೂ ತನ್ನ ಪಾಲು ನೀಡುವಂತೆ ಕೇಳಿದೆ. ಪ್ರಕರಣ ಸುಪ್ರಿಂ ಕೋರ್ಟ್‌ನಲ್ಲಿದೆ ಎಂದು ಹೇಳುತ್ತಾರೆ.

ರಾಜ್ಯದ ಪಾಲು ನಿರ್ಧಾರವಾಗಲಿ
ಅಂತಾರಾಜ್ಯ ನದಿ ಜೋಡಣೆ ಸಂಬಂಧ ವಿಸ್ತೃತ ಯೋಜನ ವರದಿ ಸಿದ್ಧಪಡಿಸುವುದಕ್ಕಿಂತ ಮುಂಚೆ ಕರ್ನಾಟಕದ ನೀರಿನ ಪಾಲು ಎಷ್ಟು ಎಂಬುದು ನಿರ್ಧಾರವಾಗಬೇಕು. ಈ ನಿರ್ಧಾರ ಪ್ರಕಟವಾದ ಬಳಿಕ ಡಿಪಿಆರ್‌ ಸಿದ್ಧಪಡಿಸುವುದು ಸೂಕ್ತ ಎಂದು ಕೇಂದ್ರ ಸರಕಾರದ ಮುಂದೆ  ಮನವಿ ಮಾಡಲಿದ್ದೇವೆ.
– ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿ

 

Advertisement

Udayavani is now on Telegram. Click here to join our channel and stay updated with the latest news.