ತೀರ್ಥಹಳ್ಳಿ: ವಿವಿಧ ಕಾಲಘಟ್ಟದಲ್ಲಿ ಆಚಾರ-ವಿಚಾರ, ನುಡಿಗಟ್ಟುಗಳು ಎಲ್ಲ ಜಾತಿಗಳಲ್ಲೂ ದಾಖಲಾಗಬೇಕಾದ ಅವಶ್ಯಕತೆಯಿದ್ದು, ಪ್ರಗತಿಪರ ಚಟುವಟಿಕೆಗಳಿಗೆ ರಾಮಪ್ಪಗೌಡರ ಕೃತಿ ಅತ್ಯಮೂಲ್ಯವಾಗಿದೆ ಎಂದು ಸಾಹಿತಿ, ಜಾನಪದ ತಜ್ಞ ಮೈಸೂರಿನ ಡಾ| ಕಾಳೇಗೌಡ ನಾಗವಾರ ಹೇಳಿದರು.
ಪಟ್ಟಣದ ಗೋಪಾಲಗೌಡ ರಂಗಮಂದಿರದಲ್ಲಿ ಕಡಿದಾಳ್ ಸಹೋದರರ ಕುಟುಂಬ ಆಯೋಜಿಸಿದ್ದ ಕಡಿದಾಳ್ ಎಸ್. ರಾಮಪ್ಪಗೌಡರ ನೆನಪು ಪುಸ್ತಕ ಬಿಡುಗಡೆ ಹಾಗೂ ಹಿಂದೂಸ್ಥಾನಿ ಸಂಗೀತ ಕಾರ್ಯಕ್ರಮದಲ್ಲಿ ಪುಸ್ತಕ ಬಿಡುಗಡೆಗೊಳಿಸಿ ಅವರು ಮಾತನಾಡಿದರು. ರಾಮಪ್ಪಗೌಡರ ಮಲೆನಾಡು ಶ್ರೀ ವೈಷ್ಣವ ನಾಮದಾರಿ ಗೌಡ ಸಂಸ್ಕೃತಿ ಕೃತಿಯ ಬಗ್ಗೆ ಮುಂದಿನ ಸಮಾಜ ಕಟ್ಟುವಲ್ಲಿ ಚರ್ಚೆಯಾಗುವ ಅವಶ್ಯಕತೆಯಿದೆ. ರಾಮಾನುಜರು ಹಾಗೂ
ಬಸವಣ್ಣರು ಪ್ರಾಮಾಣಿಕತೆ ಹಾಗೂ ಜಾತಿ ಪದ್ಧತಿಗೆ ವಿರೋಧವಾಗಿದ್ದರು. ಜಾತ್ಯತೀತ ಚಳವಳಿಗೆ ರೂಪಕೊಟ್ಟ ಮಹನೀಯರಾಗಿದ್ದಾರೆ
ಎಂದರು.
ವರ್ಣ ಸಂಕರದ ವ್ಯವಸ್ಥೆಯ ಬಗ್ಗೆ ಕೇವಲ ಪುಸ್ತಕಗಳಲ್ಲಿ ದಾಖಲಾದರೆ ಸಾಲದು. ಚರ್ಚೆ ಮತ್ತು ಸಂವಾದವಾಗಬೇಕು. ಇವರ ಮಲೆನಾಡಿನ ಶಿಕಾರಿಯ ನೆನಪುಗಳು ಕೃತಿಯೂ ಕುವೆಂಪು, ತೇಜಸ್ವಿಯಂತಹ ಮಹಾನ್ ಲೇಖಕರ ಸಾಲಿನಲ್ಲಿಯೇ ಪ್ರಕೃತಿ ಹಾಗೂ ಜೀವನ ಸಂಸ್ಕೃತಿಯನ್ನು ಬಿಂಬಿಸುತ್ತಾ ಹೋಗುತ್ತದೆ. ಇಂದಿನ ಯುವ ಪೀಳಿಗೆ ಇಂತಹ ಕೃತಿಕಾರರ ಕೃತಿಗಳನ್ನು ಅಧ್ಯಯನ ಮಾಡಬೇಕು ಎಂದರು. ಬೆಂಗಳೂರಿನ ನಿವೃತ್ತ ದೂರದರ್ಶನ ನಿರ್ದೇಶಕ ಎನ್.ಕೆ. ಮೋಹನ್‌ರಾಮ್ ಮಾತನಾಡಿ, ವೈಷ್ಣವ ಪರಂಪರೆಗೆ ತನ್ನದೇ ಆದ ಇತಿಹಾಸವಿದೆ. ರಾಮಾನುಜಾಚಾರ್ಯರು ಒಬ್ಬ ಸಾಮಾಜಿಕ ಕ್ರಾಂತಿಕಾರಿ. ಕೆಳವರ್ಗದ ಜನಗಳಿಗೆ ಸ್ಪಂದಿ ಸಿದ ಸಮಾಜ ಸುಧಾರಕರಾಗಿದ್ದರು ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಹಿರಿಯ ಸಮಾಜವಾದಿ, ಸಾಹಿತಿ ಡಿ.ಎಸ್. ನಾಗಭೂಷಣ್, ಬಿಡುಗಡೆಯಾದ ಎರಡೂ ಕೃತಿಗಳಲ್ಲೂ ರಾಮಪ್ಪಗೌಡರ ಸಂಧ್ಯಾಕಾಲದಲ್ಲಿನ ತಾಕಲಾಟದ ಬದುಕಿನ ಚಿತ್ರಣ ಕಾಣಬಹುದಾಗಿದೆ. ಪ್ರಸ್ತುತ ಜಾತಿ ವಿನಾಶಕಾದ ಬದಲಾಗಿ ನಾವುಗಳು ಜಾತಿ
ಸಮೀಕರಣವನ್ನು ಅರ್ಥ ಮಾಡಿಕೊಂಡಿಲ್ಲ. ಜಾತಿ ಪದ್ಧತಿಯ ಬಗ್ಗೆ ಕೇವಲ ಸಮಾಜವಾದಿಗಳೇ ಚರ್ಚಿಸುವಂತಾಗಬಾರದು. ರಾಮಪ್ಪಗೌಡರ
ಕುಟುಂಬ ಸಾಂಸ್ಕೃತಿಕ ಕುಟುಂಬವಾಗಿ ಇಂದು ಬೆಳೆದು ಬಂದಿದೆ. ಬಹುಮುಖ ವ್ಯಕ್ತಿತ್ವದ ಪ್ರತಿಭಾವಂತರ ಕುಟುಂಬವಿಂದು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡುತ್ತ ಬಂದಿದ್ದಾರೆ ಎಂದರು.
ರೈತ ಮುಖಂಡ ಕಡಿದಾಳ್ ಶಾಮಣ್ಣ, ಹಿಂದೂಸ್ಥಾನಿ ಗಾಯಕ ಡಾ|ನಾಗರಾಜ್‌ರಾವ್ ಹವಲ್ದಾರ್ ಇದ್ದರು. ಇದೇ ಸಂದರ್ಭದಲ್ಲಿ
ಪಂಡಿತ್ ಡಾ| ನಾಗರಾಜ್‌ರಾವ್ ಹವಲ್ದಾರ್ ಸಂಗಡಿಗರಿಂದ ಹಿಂದೂಸ್ಥಾನಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.