Advertisement

ಅಡಿಕೆ ವಿಸ್ತರಣೆಯ ಅಪಾಯ, ಅನಲಾಗ್‌ ಉಪಾಯ

02:53 PM Jun 25, 2019 | Sriram |

ಅಡಿಕೆಯ ಮರ ನೋಡಿದ ತಕ್ಷಣ ಈಗೀಗ ಕೊಳವೆ ಬಾವಿಯ ಕೇಸಿಂಗ್‌ ಪೈಪ್‌ ನೆನಪಾಗುತ್ತಿದೆ. ವಾರ್ಷಿಕ 400-500 ಮಿಲಿ ಮೀಟರ್‌ ಮಳೆಯಿಲ್ಲದ ಊರಲ್ಲಿಯೂ ಅಡಿಕೆ ಪ್ರೀತಿ ಸಮೂಹ ಸನ್ನಿಯಂತೆ ಹಬ್ಬಿದೆ. ಎಕರೆಯಲ್ಲಿ 550 ಮರಗಳಿರುತ್ತವೆಂದು ಅಂದಾಜಿಸಿದರೆ ಒಂದು ಮರಕ್ಕೆ ದಿನಕ್ಕೆ 10-15 ಲೀಟರ್‌ ನೀರು ಬೇಕು.ಈ ಹಿಂದೆಲ್ಲಾ, ಮಲೆನಾಡಿನ ಮೂರು ನಾಲ್ಕು ತಿಂಗಳ ಮಳೆ ಸುರಿದ ಮೇಲೆ, ಬೇಸಿಗೆಯಲ್ಲಿ ಹಳ್ಳಗಳಿಗೆ ಒಡ್ಡು ಹಾಕಿ ತೋಟಕ್ಕೆ ನೀರಾವರಿ ಕಲ್ಪಿಸುವ ಉಪಾಯವಿತ್ತು. ಪ್ರತಿ ತೋಟದ ಮೇಲಾºಗದಲ್ಲಿ ವರ್ಷವಿಡೀ ನೀರಿರುವ ಒರತೆ. ಶತಮಾನಗಳಿಂದ ಕೆರೆಗಳನ್ನು ನಂಬಿ ಬೇಸಾಯ ನಡೆದಿತ್ತು. ಮಳೆ ನಂಬಿ ರಾಗಿ, ಜೋಳ, ಹತ್ತಿ, ತೊಗರಿ ಬೆಳೆಯುವುದು ಕಷ್ಟವಾಗುತ್ತಿರುವ ಸಂದರ್ಭದಲ್ಲಿ, ಎಕರೆ ಅಡಿಕೆಗೆ ದಿನಕ್ಕೆ ಎಂಟರಿಂದ ಹತ್ತು ಸಾವಿರ ಲೀಟರ್‌ ನೀಡುವುದಾದರೂ ಹೇಗೆ?

Advertisement

ಬೇಸಿಗೆಯಲ್ಲಿ ಬಯಲುನಾಡಿನ ಚಿತ್ರದುರ್ಗ, ತುಮಕೂರು, ದಾವಣಗೆರೆ, ಹಾವೇರಿ ಜಿಲ್ಲೆಗಳನ್ನು ಸುತ್ತಾಡಿದರೆ ಕೊಳವೆ ಬಾವಿ ಕೊರೆಯುವ ಯಂತ್ರಗಳು ರಸ್ತೆಗಳಲ್ಲಿ ಸಿಗುತ್ತವೆ, ಕೆಟ್ಟು ಹೋದ ಪಂಪ್‌ ಮೇಲೆತ್ತುವ ದೃಶ್ಯ ಕಾಣಿಸುತ್ತದೆ. 2016 ರ ಬರಗಾಲದಲ್ಲಿ ಚಿತ್ರದುರ್ಗದ ಒಂದು ಹಳ್ಳಿಗೆ ಹೋಗಿದ್ದಾಗ ನೀರಿಲ್ಲದೇ ತೋಟ ಸಂಪೂರ್ಣ ಒಣಗಿತ್ತು. ಅಚ್ಚರಿಯೆಂದರೆ, ವರ್ಷ ಕಳೆದು ಅದೇ ಹಳ್ಳಿ ಸುತ್ತಾಡಿದರೆ ಮತ್ತಷ್ಟು ಹೊಸ ತೋಟಗಳು ಶುರುವಾಗಿದ್ದವು. ನೀರಿನ ಸಂಕಟದಿಂದ ಪಾಠ ಕಲಿಯದೇ ಅಡಿಕೆಯ ಹಿಂದೆ ಹೋಗುವ ಉತ್ಸಾಹ ರೈತಾಪಿ ಜರನ್ನು ಅಪಾಯದ ಸುಳಿಗೆ ಸೆಳೆಯುತ್ತಿದೆ.

ಕಾರೇ ಗಿಡದಲ್ಲಿ ಹೊಂಬಾಳೆಯಾ?
1975 ರಲ್ಲಿ ಗುಡ್ಡದ ಭೂಮಿಯ ಕೆಂಪು ಜಜ್ಜು ಮಣ್ಣಿನಲ್ಲಿ ಅಡಿಕೆ ನೆಡುತ್ತಿದ್ದವರನ್ನು ನೋಡಿ ತುಮಕೂರು ಬಡವನಹಳ್ಳಿಯ ಕೃಷಿಕ ಚೌಡಪ್ಪ ಕೇಳಿದ್ದರಂತೆ ! ಆ ಕಾಲಕ್ಕೆ ಕೆರೆ ತಗ್ಗಿನ ನೆಲೆಯಲ್ಲಿ ಮಾತ್ರ ಅಡಿಕೆಯಿತ್ತು. ರಾಗಿ, ಶೇಂಗಾ, ಹುರಳಿ, ಅರ್ಕ, ಕೊರಲೆ ಪ್ರಮುಖ ಬೆಳೆಯಾಗಿತ್ತು. ಹೊಲಕ್ಕೆ ಹೋಗುವವರು ಕುಡಿಯಲು ನೀರು ಒಯ್ಯುತ್ತಿರಲಿಲ್ಲ; ಹಳ್ಳ, ಕೆರೆಗಳಲ್ಲಿ ನೀರು ಸಿಗುತ್ತಿತ್ತು. ತೋಟದ ಕಡಗ(ಕಾಲುವೆ)ಗಳಲ್ಲಿ ಮಕ್ಕಳು ಬೇಸಿಗೆಯಲ್ಲಿ ಈಜುತ್ತಿದ್ದ ನೆನಪುಗಳಿವೆ. ಬಯಲು ಸೀಮೆಗೆ ಅಡಿಕೆ ಪ್ರೀತಿ ಹೆಚ್ಚಿದಂತೆ, ಮಳೆ ನಂಬಿ ಆಹಾರ ಬೆಳೆ ಬೆಳೆಯುವ ಬದಲು ಬಹುವಾರ್ಷಿಕ ಅಡಿಕೆ ಬೆಳೆದರೆ ಆರ್ಥಿಕ ಚೇತನ ಸಾಧ್ಯವೆಂದು ಲೆಕ್ಕ ಹಾಕಿದರು. ಎಕರೆ ರಾಗಿ, ಜೋಳದಿಂದ ದೊರೆಯುವ ಆದಾಯಕ್ಕೆ ಹೋಲಿಸಿದಾಗ ಅಡಿಕೆ ಚಿನ್ನದಂತೆ ಕಾಣಿಸಿತು. ಆಳದ ಕೊಳವೆ ಬಾವಿ ಕೊರೆಯುವ ತಂತ್ರಜ್ಞಾನ, ಕೃಷಿ ನೀರಾವರಿಗೆ ಉಚಿತ ವಿದ್ಯುತ್‌ ಲಭ್ಯತೆಯ ಅವಕಾಶ ಹೆಚ್ಚಿಸಿತು. ಕೆರೆ ತಗ್ಗಿನ ಭೂಮಿಯಲ್ಲಿ ಮಾತ್ರವಿದ್ದ ಅಡಿಕೆ ಕಣ್ಮುಚ್ಚಿ ಸೀಮೆಗೆಲ್ಲ ಹಬ್ಬಿತು. 80ರ ದಶಕದಲ್ಲಿ 150-200 ಅಡಿಗೆ ಧಾರಾಳ ನೀರು ಸಿಗುತ್ತಿದ್ದ ಪ್ರದೇಶದಲ್ಲಿ ಇಂದು 1,600 ಅಡಿಯವರೆಗೂ ಶೋಧ ಮುಂದುವರಿದಿದೆ. ಎಕರೆ ತೋಟ ಉಳಿಸಲು ಹತ್ತಾರು ಬಾವಿ ಕೊರೆಸುವುದು ಸಾಮಾನ್ಯವಾಗಿದೆ.

ಒಮ್ಮೆ ನಾಟಿ ಮಾಡಿದರೆ ಸುಲಭ ನಿರ್ವಹಣೆಯಲ್ಲಿ ಹತ್ತಾರು ವರ್ಷ ಫ‌ಸಲು ಕೊಯ್ಯಬಹುದು. ಸಾಂಪ್ರದಾಯಿಕ ಆಹಾರ ಬೆಳೆಗಳಿಗಿಂತ ಲಾಭ ಜಾಸ್ತಿ. ಟೊಮೆಟೊ, ಈರುಳ್ಳಿ, ಬಟಾಟೆಗಳನ್ನು ವರ್ಷಗಳ ಕಾಲ ಕೆಡದಂತೆ ಇಡಲಾಗುವುದಿಲ್ಲ. ಅಡಿಕೆಯನ್ನು ಶೇಖರಿಸಿಟ್ಟು ಬೆಲೆ ಬಂದಾಗ ಮಾರಾಟ ಮಾಡಬಹುದು. ತೋಟದವರು, ಅಡಿಕೆ ಬೆಳಗಾರರು ಎಂಬ ಸಾಮಾಜಿಕ ಮಾನ್ಯತೆ ದೊರೆಯಿತು. ಬ್ಯಾಂಕುಗಳ ಸಾಲ, ಸರಕಾರದ ನೀರಾವರಿ ಪೋ›ತ್ಸಾಹದಿಂದ ರಾಜ್ಯದಲ್ಲಿ ತೋಟ ವೃದ್ಧಿಯಾಗಿದೆ.
ಮಲೆನಾಡು, ಕರಾವಳಿ ಕಣಿವೆಗಳಲ್ಲಿ ಕಾಗದಾಳಿ ಮಣ್ಣಿನಲ್ಲಿ ತೋಟಗಳಿವೆ. ನೀರಾವರಿಯ ಅಗತ್ಯವಿಲ್ಲದೇ ಬೇಸಿಗೆಯಲ್ಲೂ ತಂಪು ಹಿಡಿಯುವ ಕಾಗದಾಳಿಯ ನೆರವಿನಿಂದ ಶತಮಾನಗಳಿಂದ ತೋಟ ಬೆಳೆದಿದೆ. ಒಂದು ಅಂದಾಜಿನ ಪ್ರಕಾರ, ಶೇ. 43.40 ರಷ್ಟು ತೋಟಗಳು ಮಲೆನಾಡು, ಕರಾವಳಿ ಜಿಲ್ಲೆಗಳಲ್ಲಿವೆ. ಕ್ರಿ.ಶ. 2006ರ ಅಂಕಿಸಂಖ್ಯೆಯ ಪ್ರಕಾರ ರಾಜ್ಯದಲ್ಲಿ 4,20,000 ಎಕರೆ ಅಡಿಕೆ ಇದೆ. ಆದರೆ, ಇತ್ತೀಚಿನ ವರ್ಷಗಳಲ್ಲಿ ಭತ್ತ, ಕಬ್ಬಿನ ನೀರಾವರಿ ನೆಲೆಗಳು ಅಡಿಕೆಯ ವಶವಾಗಿ ಕ್ಷೇತ್ರ ಮೂರುಪಟ್ಟು ಹೆಚ್ಚಿದೆ. ಅಡಿಕೆ ಕ್ಷೇತ್ರದ ಸರಿಯಾದ ಅಂದಾಜು ಸಾಧ್ಯವಾದರೆ ನೀರಿನ ಭವಿಷ್ಯವೂ ಅರ್ಥವಾಗುತ್ತದೆ. ಮುಖ್ಯವಾಗಿ, ರಾಜ್ಯದ ಒಟ್ಟೂ ತೋಟದ ಶೇ. 60 ಕ್ಕಿಂತ ಹೆಚ್ಚಿನ ಕ್ಷೇತ್ರಗಳು ಆಳದ ಕೊಳವೆ ಬಾವಿಯ ನೀರಿನಲ್ಲಿ ಬದುಕಿವೆ. ರಾಜ್ಯದಲ್ಲಿ ಕಾರ್ಯನಿರ್ವಹಿಸುವ ಸುಮಾರು 20,000 ಕೊಳವೆ ಬಾವಿ ಕೊರೆಯುವ ಯಂತ್ರಗಳಲ್ಲಿ ಮುಕ್ಕಾಲು ಭಾಗ ಅಡಿಕೆ ಕ್ಷೇತ್ರದಲ್ಲಿ ಕೆಲಸ ಪಡೆದಿವೆ. ನೀರಿನ ಸಮಸ್ಯೆ ಕರಾವಳಿ, ಮಲೆನಾಡಿನಲ್ಲೂ ವ್ಯಾಪಕವಾಗಿ, ಸಾಂಪ್ರದಾಯಿಕ ತೋಟಗಳು ಆಪತ್ತಿನಲ್ಲಿವೆ. ಅಡಿಕೆ ಮರ ನೋಡಿದ ತಕ್ಷಣ, ಕೊಳವೆ ಬಾವಿಯ ಕೇಸಿಂಗ್‌ ಪೈಪ್‌ ಏಕೆ ನೆನಪಾಗುತ್ತಿದೆಯೆಂದು ಈಗ ಅರ್ಥವಾಗಿರಬಹುದು.

ಬಹುವಾರ್ಷಿಕ ತೋಟಗಾರಿಕೆ ಬೆಳೆಗಳಿಗೆ ಜಲಕ್ಷಾಮ ದೊಡ್ಡ ಆಘಾತ ನೀಡುತ್ತಿದೆ. ಹತ್ತಾರು ವರ್ಷಗಳಿಂದ ಕಷ್ಟಪಟ್ಟು ಪೋಷಿಸಿದ ತೋಟಗಳು ನೀರಿನ ಸಮಸ್ಯೆಯಿಂದ ಒಣಗಿ ನಾಶವಾಗುತ್ತಿವೆ. ಇದಲ್ಲದೇ ದಕ್ಷಿಣ ಕನ್ನಡದ ಸುಳ್ಯ , ಚಿಕ್ಕಮಗಳೂರಿನ ಶೃಂಗೇರಿ, ಕೊಪ್ಪ ಸೀಮೆಯಲ್ಲಿ ಹಳದಿ ಚುಕ್ಕೆ ರೋಗದಿಂದ ಹಳೆಯ ತೋಟಗಳು ನಾಶವಾಗಿವೆ. ಇಲ್ಲೆಲ್ಲ ಒಂದು ಎಕರೆಯಿಂದ ಕ್ವಿಂಟಾಲ್‌ ಅಡಿಕೆಯೂ ದೊರೆಯುತ್ತಿಲ್ಲ. ಏಕ ಬೆಳೆಯ ಮುಖ ಅಡಿಕೆಯ ಕೃಷಿಕರಿಗೆ ಇತ್ತೀಚಿನ ದಶಕಗಳಲ್ಲಿ ಹಲವು ಬಗೆಯಲ್ಲಿ ಪೆಟ್ಟು ನೀಡುತ್ತಿದೆ.

Advertisement

ಪರಿಹಾರ ಇಲ್ಲಿದೆ
ಅಡಿಕೆ ತೋಟವನ್ನು ಬರನಿರೋಧಕಗೊಳಿಸಲು ಕಾಡು ಪ್ರೀತಿ ಅತ್ಯಗತ್ಯ. ದಿನಕ್ಕೆ ಹತ್ತು ಸಾವಿರ ಲೀಟರ್‌ ಬಳಸುವ ಬದಲು ತೋಟದಲ್ಲಿ ಮುಚ್ಚಿಗೆ ಬೆಳೆ ಬೆಳೆದು, ವಾರಕ್ಕೊಮ್ಮೆ ನೀರುಣಿಸುವ ತಂತ್ರವು ಕೃಷಿ ಗೆಲ್ಲಿಸುವ, ಅಂತರ್ಜಲ ಉಳಿಸುವ ದಾರಿಯಾಗುತ್ತದೆ. ಪಶ್ಚಿಮದ ತೀವ್ರ ಬಿಸಿಲುತಾಗದಂತೆ ನೆರಳಿಗೆ ನಿತ್ಯಹರಿದ್ವರ್ಣ ಮರ ಬೆಳೆಸುವ ಸೂತ್ರವಿದೆ. ಕಾಳು ಮೆಣಸು, ಕಂಚಿ(ಹೇರಳೆ), ಜಾಯಿಕಾಯಿ, ಅರಿಶಿನ, ಏಲಕ್ಕಿ, ಬಾಳೆ, ಕಾಫೀ ಮುಂತಾದ ಬೆಳೆ ಬೆಳೆಯುತ್ತಿದ್ದ ಮಲೆನಾಡಿನ ಹಿರಿಯಜ್ಜನ ತಂತ್ರ ಪೂರಕ ಬೆಳೆಗಳಲ್ಲಿ ಆದಾಯ ಪಡೆಯುವ ಅವಕಾಶ ತೋರಿಸುತ್ತದೆ. ಅಡಿಕೆ ಬೆಳೆಯ ಪ್ರದೇಶಕ್ಕೆ ತಕ್ಕಂತೆ ಮರ, ಬಳ್ಳಿ, ಗಡ್ಡೆ, ಹುಲ್ಲಿನ ಸಂಕುಲಗಳನ್ನು ತೋಟದಲ್ಲಿ ಸೇರಿಸುವ ಅವಕಾಶವಿದೆ. ಆಯುರ್ವೇದ ಔಷಧದ ಬಳಕೆ ಹೆಚ್ಚುತ್ತಿರುವ ಘಳಿಗೆಯಲ್ಲಿ ತೋಟದಲ್ಲಿ ಅಮೃತಬಳ್ಳಿ, ನೆಲಬೇವು(ಕಿರಾತಕಡ್ಡಿ), ಅರಿಶಿನ ಮುಂತಾದ ಸಸ್ಯಗಳನ್ನು ಬೆಳೆಯಬಹುದು. ಶಿವಮೊಗ್ಗ ಬಳಿಯ ಗಾಜನೂರಿನ ಎಮ್‌.ಪಿ.ದೇವರಾಜ್‌ ತಮ್ಮ ಐದು ಎಕರೆ ತೋಟದಲ್ಲಿ ಇಟಾಲಿಯನ್‌ ಲಿಂಬು ಬೆಳೆದಿದ್ದರು. ತುಮಕೂರಿನ ಅಮ್ಮನಘಟ್ಟ ತೋಟಗಳಲ್ಲಿ ಅಲಸಂದೆ, ಸೌತೆ, ಟೊಮೆಟೊ ಬೆಳೆದ ಪ್ರಯತ್ನಗಳಿವೆ. ಪುತ್ತೂರಿನ ಪೆರಾಬೆಯಲ್ಲಿ ತೊಂಡೆ ಬೆಳೆಯುತ್ತಿದ್ದರು. ಮಲೆನಾಡಿನಲ್ಲಿ ಅಡಿಕೆ ಜೊತೆಗೆ ಎಕರೆಯಲ್ಲಿ 120 -130 ಕೊಕ್ಕೋ ಗಿಡ ಬೆಳೆದು ಗೆದ್ದವರ ಯಶೋಗಾಥೆಗಳಿವೆ. ಬೆಣ್ಣೆಹಣ್ಣು(ಬಟರ್‌ಫ‌ೂ›ಟ್‌), ರಂಬೂಟಾನ್‌, ಮ್ಯಾಂಗೋಸ್ಟಿನ್‌, ಲಕ್ಷ್ಮಣ ಫ‌ಲ, ಮೂಸುಂಬಿ, ಬೇರುಹಲಸು, ಲವಂಗ, ಅಮಟೆ, ಕರಿಬೇವು… ಹೀಗೆ, ಹಲವು ಸಸ್ಯ ಬೆಳೆಯುವ ಸಾಧ್ಯತೆಗಳಿವೆ. ತೋಟದಂಚಿನಲ್ಲಿ ಮಾವು, ಹಲಸು, ಹೆಬ್ಬಲಸು, ಮುರುಗಲು, ಉಪ್ಪಾಗೆ, ನೇರಳೆ, ಬಿದಿರು, ವಾಟೆ ಹೀಗೆ ನೆಡಬಹುದಾದ ವೃಕ್ಷ ಸಂಕುಲ ನೂರಾರಿವೆ. ಮುಖ್ಯವಾಗಿ, ನೆಲಜಲ ಸಂರಕ್ಷಣೆ, ವನ್ಯಜೀವಿಗಳಿಂದ ಬೆಳೆ ರಕ್ಷಣೆ, ಸಾವಯವ ಉತ್ಪನ್ನಗಳ ಮೂಲಕ ಆರೋಗ್ಯ ಗೆಲ್ಲುವ ಉಪಾಯಗಳಿವು. ಆಹಾರ ಸುಸ್ಥಿರತೆಯ ಅವಕಾಶವೂ ಇಲ್ಲಿದೆ. ಇಡೀ ವರ್ಷ ಸಣ್ಣಪುಟ್ಟ ಆದಾಯವನ್ನು ತೋಟದಿಂದ ನಿರಂತರ ಪಡೆಯುತ್ತ ಬೇಸಾಯದಲ್ಲಿ ಗೆಲ್ಲುವುದು ಹೇಗೆಂಬ ಪ್ರಯೋಗಗಳು ರಾಜ್ಯಾದ್ಯಾಂತ ನಡೆದಿದೆ. ನೋಡಿ ಕಲಿಯಲು ಕೃಷಿಕರು ಮುಂದಾಗಬೇಕು.

ನೀರಿನ ಕೊರತೆ ಕಾರಣವಲ್ಲ
ಅಡಿಕೆ ಎಲ್ಲವೂ ಅಲ್ಲ, ರಾಜ್ಯದ ಜಲಕ್ಷಾಮಕ್ಕೆ ಗುಡ್ಡದ ನೆಲೆಗೆ ತೋಟ ವಿಸ್ತರಣೆ ಕಾರಣವೆಂಬುದನ್ನು ಮರೆಯಬಾರದು. ಹತ್ತಾರು ಜಾತಿಯ ಸಸ್ಯ ಬೆಳೆಸಲು ಹೆಜ್ಜೆಯಿಡುವುದು ಪ್ರತಿಯೊಬ್ಬ ಬೆಳೆಗಾರರ ಕರ್ತವ್ಯ. ಅಡಿಕೆಗೆ ನೀರಿಲ್ಲದಾಗ ಈ ಮರಕ್ಕೆ ನೀರುಣಿಸುವುದು ಹೇಗೆಂಬ ಸಂದೇಹ ಮೂಡಬಹುದು. ಅದಕ್ಕೂ ತಂತ್ರಗಳಿವೆ. ಮರದ ಆಳಕ್ಕೆ ಬೇರಿಳಿಸಿದ ನಂತರ ಬರಕ್ಕೆ ಮರ ಅಂಜುವುದಿಲ್ಲ. ತೋಟ ಒಣಗಲು ನೀರಿನ ಕೊರತೆ ಮಾತ್ರ ಕಾರಣವಲ್ಲ. ಮರದ ಬುಡದಲ್ಲಿ ಎಷ್ಟೇ ನೀರುಣಿಸಿದರೂ 40 ಡಿಗ್ರಿ ಉಷ್ಣಾಂಷ ಎಂಥ ಸಮೃದ್ಧತೆಯನ್ನು ಕಮರಿಸುತ್ತದೆ. ಜಲಕ್ಷಾಮ, ಹವಾಮಾನ ಬದಲಾವಣೆ ಎದುರಿಸಲು ತೋಟದ ಸ್ವರೂಪ ಬದಲಿಸಲು ಕೃಷಿಕರೆಲ್ಲರ ಸಾಮೂಹಿಕ ಪ್ರಯತ್ನ ಅಗತ್ಯ. ತೋಟದಲ್ಲಿ ಬೇರೆ ಮರ ಬೆಳೆದರೆ ನೆರಳಿನಿಂದ ಬೆಳೆ ಕಡಿಮೆಯಾಗುತ್ತದೆಂಬ ಭಯ ಎಲ್ಲರಿಗಿದೆ. ಆದರೆ, ಮರ ಬೆಳೆಸದಿದ್ದರೆ ಬಿಸಿಲಿನಿಂದ ತೋಟ ಒಣಗಿ ನಾಶವಾಗುತ್ತದೆಂಬುದನ್ನು ಮರೆಯಬಾರದು! ತೋಟದ ಆರೋಗ್ಯ ಸಂರಕ್ಷಣೆಗೆ ಸೊಪ್ಪು, ತೆರಕು, ಜೇನು ಹೀಗೆ ಹಲವು ಉಪಯೋಗ ವೃಕ್ಷಗಳ ಹೆಚ್ಚಳದಿಂದ ಸಾಧ್ಯವಿದೆ.

-ಶಿವಾನಂದ ಕಳವೆ

ಕಾಡು ತೋಟ- 23. ಮುಂದಿನ ಭಾಗ- ಮೌಲ್ಯವರ್ಧನೆಯಲ್ಲಿ ಮಾರುಕಟ್ಟೆ ಕೌಶಲ

Advertisement

Udayavani is now on Telegram. Click here to join our channel and stay updated with the latest news.

Next