Advertisement

ವೈಚಾರಿಕತೆ ಮೇಲೆ ದಾಳಿ ಅಪಾಯ

05:31 PM Mar 13, 2018 | Team Udayavani |

ರಾಯಚೂರು: ದೇಶದಲ್ಲಿ ಕೋಮು ಶಕ್ತಿಗಳ ಅಟ್ಟಹಾಸ ದಿನೇದಿನೆ ಹೆಚ್ಚುತ್ತಿದ್ದು, ವಿಚಾರವಾದಿ, ಚಿಂತಕರು, ಲೇಖಕರನ್ನು ಗುರಿಯಾಗಿಸಿ ದಾಳಿ ಮಾಡುತ್ತಿವೆ.

Advertisement

ವಿಚಾರವಾದಿಗಳ ಕೊಲೆ ದೇಶದ ಭವಿಷ್ಯಕ್ಕೆ ಅಪಾಯಕಾರಿ ಎಂದು ಅಖೀಲ ಭಾರತ ಕ್ರಾಂತಿಕಾರಿ ಕಿಸಾನ್‌ ಸಭಾ ಪ್ರಧಾನ ಕಾರ್ಯದರ್ಶಿ ಪ್ರದೀಪಸಿಂಗ್‌ ಠಾಕೂರ್‌ ಆತಂಕ ವ್ಯಕ್ತಪಡಿಸಿದರು.

ನಗರದ ವೀರಾಂಜನೇಯ ಮುನ್ನೂರಕಾಪು ಕಲ್ಯಾಣ ಮಂಟಪದಲ್ಲಿ ಸೋಮವಾರದಿಂದ ಶುರುವಾದ ಅಖೀಲ
ಭಾರತ ಕ್ರಾಂತಿಕಾರಿ ಕಿಸಾನ್‌ ಸಭಾ 2ನೇ ರಾಷ್ಟ್ರೀಯ ಸಮ್ಮೇಳನದ ಎರಡನೇ ದಿನದ ಸಮಾರಂಭದಲ್ಲಿ ಅವರು ಮಾತನಾಡಿದರು. 

ಲೇಖಕರಾದ ಪನ್ಸಾರೆ, ದಾಬೋಲ್ಕರ್‌, ಎಂ.ಎಂ.ಕಲಬುರ್ಗಿ, ಗೌರಿ ಲಂಕೇಶ, ಮುಜಫರ್‌ ಅಲ್ಲಂಗಿರಿ ಅಂಥವರ
ಕೊಲೆಯಾಗಿದೆ. ಮತ್ತೂಂದು ಕಡೆ ಲೆನಿನ್‌, ಅಂಬೇಡ್ಕರ್‌, ಪೆರಿಯಾರ್‌ ಪ್ರತಿಮೆಗಳನ್ನು ಕೋಮು ಶಕ್ತಿಗಳು ಧ್ವಂಸಗೊಳಿಸಿವೆ. ಸಿದ್ಧಾಂತಗಳ ಮೇಲೆ ನಡೆಯುತ್ತಿರುವ ದಾಳಿಗಳ ವಿರುದ್ಧ ಎಲ್ಲರೂ ಒಗ್ಗೂಡಿ ಹೋರಾಡಲು ಮುಂದಾಗಬೇಕು ಎಂದರು. 

ಆಳುವ ಸರ್ಕಾರಗಳು ಜವಾಬ್ದಾರಿಹೀನವಾಗಿ ವರ್ತಿಸುತ್ತಿವೆ. ರೈತರ ಸರಣಿ ಆತ್ಮಹತ್ಯೆಗಳು ನಡೆದರೂ ಸ್ಪಂದಿಸುತ್ತಿಲ್ಲ.
ಬೆಂಬಲ ಬೆಲೆ ನೀಡುತ್ತಿಲ್ಲ, ಸಾಲ ಮನ್ನಾ ಮಾಡುತ್ತಿಲ್ಲ. ದಲಿತ, ಆದಿವಾಸಿಗಳ ಭೂಮಿ ಮತ್ತು ವಸತಿ ಸಮಸ್ಯೆಗಳ ಬಗ್ಗೆಯೂ ಕಾಳಜಿ ವಹಿಸಿಲ್ಲ. ಕೇವಲ ಬಂಡವಾಳಶಾಹಿ ಪರ ಯೋಜನೆ ಜಾರಿಗೊಳಿಸುತ್ತಿವೆ. ಇಂಥ ಕ್ರಮಗಳ ವಿರುದ್ಧ ರೈತ ಸಂಘಟನೆಗಳು ಹೋರಾಟಕ್ಕೆ ಮುಂದಾಗಿದ್ದಾರೆ ಎಂದರು. 

Advertisement

ಎಐಕೆಕೆಎಸ್‌ ರಾಷ್ಟ್ರಾಧ್ಯಕ್ಷ ಬಾಬುರಾಮ್‌ ಶರ್ಮಾ ಮಾತನಾಡಿ, ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ, ಬಡಜನರಿಗೆ ವಸತಿ, ರೈತರಿಗೆ ಭೂಮಿ ಹಂಚಿಕೆಗಾಗಿ ಸರ್ಕಾರಗಳು ಪರ್ಯಾಯ ಕೃಷಿ ನೀತಿ ಜಾರಿಗೆ ತರಬೇಕು ಎಂದರು. 

ಟಿಯುಸಿಐ ರಾಜ್ಯ ಉಪಾಧ್ಯಕ್ಷ ಚಿನ್ನಪ್ಪ ಕೊಟ್ರಿಕಿ, ಸಿಪಿಐ(ಎಂಎಲ್‌) ರಾಜ್ಯ ಕಾರ್ಯದರ್ಶಿ ಬಿ.ರುದ್ರಯ್ಯ, ಜಿಲ್ಲಾ
ಕಾರ್ಯದರ್ಶಿ ಕೆ.ನಾಗಲಿಂಗಸ್ವಾಮಿ, ಆರ್‌ ವೈಎಫ್‌ಐ ರಾಜ್ಯ ಕಾರ್ಯದರ್ಶಿ ನಾಗರಾಜ ಪೂಜಾರ, ಆರ್‌.ಸಿ.ಎಫ್‌. ಬಿ.ಎನ್‌.ಯರದಿಹಾಳ, ವಿದ್ಯಾರ್ಥಿ ಸಂಘಟನೆಯ ಕಿರಣಕುಮಾರ, ಮಹಿಳಾ ಸಂಘಟನೆಯ ಚನ್ನಮ್ಮ, ವೆಲ್ಲು ತಮಿಳುನಾಡು ಮಾತನಾಡಿದರು. ರೈತ ಸಂಘದ ರಾಜ್ಯ ಕಾರ್ಯದರ್ಶಿ ಡಿ.ಎಸ್‌.ನಿರ್ವಾಣಪ್ಪ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next