Advertisement

ಕುಂದಾಪುರ: ಬತ್ತುತ್ತಿರುವ ನದಿಗಳು; ಏರುತ್ತಿರುವ ಬಿಸಿಲ ಪ್ರಖರತೆ

04:13 PM May 24, 2023 | Team Udayavani |

ಕುಂದಾಪುರ: ತಾಲೂಕಿನ ನದಿಗಳು ಬತ್ತುತ್ತಿವೆ. ಬೇಸಗೆಯ ಪ್ರಖರತೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಧಾರಾಕಾರವಾಗಿ ಬರಬೇಕಿದ್ದ ಮಳೆ ಅಲ್ಲೋ ಇಲ್ಲೋ ಸ್ವಲ್ಪ ಸುರಿಸಿ ಮರೆಯಾಗುತ್ತದೆ. ತಾಲೂಕಿನ ನದಿಗಳು ಬತ್ತುತ್ತಿವೆ. ಅಕ್ರಮ ಮರಳು, ಅಣೆಕಟ್ಟು, ಎಲ್ಲೆಲ್ಲಿಗೋ ನೀರು ಒಯ್ಯುವ ಯೋಜನೆಗಳು, ಕಡಿದ ಕಾಡು, ಮಾಡಿದ ಕಾಂಕ್ರಿಟ್‌ ಕಟ್ಟಡಗಳು ನದಿನೀರನ್ನು ಆಳಕ್ಕಿಳಿಸಿದೆ.

Advertisement

ಬತ್ತಿದ ಹೊಳೆ
ಅನಾದಿಯಿಂದ ಸುಮಾರು 1985ರವರೆಗೂ ಬೇಸಗೆಯಲ್ಲಿ ತುಂಬಿ ಹರಿಯುತ್ತಿದ್ದ ಹಾಲಾಡಿ ಹೊಳೆ, ಆನಂತರ ಬಸವಳಿದದ್ದೇ ಇಲ್ಲ. ವರ್ಷದ ಎಲ್ಲವೂ ದಿನ, ಮೈ ತುಂಬಿ, ಇಕ್ಕೆಲಗಳಲ್ಲಿ ಹಸುರು ತುಂಬಿಸಿ ಹರಿಯುತ್ತಿತ್ತು. ಅನಂತರದಲ್ಲಿ ವಾರಾಹಿ ಎಡದಂಡೆ, ಬಲದಂಡೆ ಯೋಜನೆಗಳು, ಉಡುಪಿಗೆ, ಕಾರ್ಕಳಕ್ಕೆ ವಾರಾಹಿ ನೀರು ಎಂದು ಒಂದರ ಹಿಂದೆ ಒಂದು ಯೋಜನೆಗಳು ಸಾಕಾರಗೊಂಡು ಇನ್ನೂ ಒಂದೂ ಪೂರ್ಣವಾಗದೇ ಬೇಸಗೆಯ ನೀರಿನ ಹಾಹಾಕಾರ ಮರೆಯದಂತಾಯಿತು.

ನೀರಿಲ್ಲ
ವರ್ಷದಿಂದ ವರ್ಷಕ್ಕೆ ಏರು ತ್ತಿರುವ ತಾಪಮಾನ, ಪಶ್ಚಿಮ ಘಟ್ಟಗಳ ಕೆಳಗಿರುವ ಬಹು ತೇಕ ಎಲ್ಲ ನದಿಗಳ ಜೀವನಾಡಿಗಳಾದ ಶೋಲಾ ಅರಣ್ಯಗಳು ಮರೆಯಾ ಗುತ್ತಿರುವುದು ನೀರಿಂಗಲು ಕಾರಣ. ನದಿಯ ಸಾಮರ್ಥ್ಯ ಮೀರಿ ನೀರು ವಿತರಿಸ ಲಾಗುತ್ತಿದೆಯೋ ಎಂಬ ಸಂಶಯ ಬರುತ್ತಿದೆ ಎನ್ನುತ್ತಾರೆ ಸಂತೋಷ್‌ ಕೋಡಿ.

ಈ ವರ್ಷದ ಪರಿಸ್ಥಿತಿ ನೋಡಿದರೆ, ಎಲ್ಲರ ನೀರಡಿಕೆ ಉಣಿಸುವ ಮಹದಾಸೆ, ವಾರಾಹಿಯ ಒಡಲು ಬರಿದಾಗಿಸಿ, ಕುಂದಗನ್ನಡದ ಹೊಳೆಯ ದಡದ ಜನರು ನೀರಿನ ಬವಣೆ ಪಡುತ್ತಾ, ತನ್ನ ಹಕ್ಕಿನ ಹೋರಾಟದೆಡೆಗೆ ಮನಸ್ಸು ಮಾಡುವ ಪರಿಸ್ಥಿತಿ ತಂದೊಡ್ಡಿದೆ. ಹೊಳೆ ಮತ್ತೂಮ್ಮೆ ಸಂದು ಕಡಿದಿದೆ. ಒಡಲು ಬರಿದಾಗಿದೆ ಮತ್ತು ನೀರಿನ ಹರಿವು ನಿಂತಿದೆ. ಪುನಃ 1985 ರ ಪೂರ್ವದ ಪರಿಸ್ಥಿತಿ ತಲುಪಿದೆ ಎನ್ನುತ್ತಾರೆ ವಿವೇಕ್‌ ಮಿತ್ಯಂತ. ಈಗಲೇ ಜಾಗರೂಕರಾಗುವುದು ಅಗತ್ಯ. ಹಾಲಾಡಿ ಹೊಳೆ ದಂಡೆಯ ಪಂಪ್‌ ಸೆಟ್‌ಗಳ ಪೈಪ್‌ಗ್ಳಿಗೆ ನೀರು ಸಿಗದೇ, ಹೊಳೆಯ ದಡದಲ್ಲಿ ತೋಡು ಮಾಡುವ ದೃಶ್ಯ ಪುನಃ ಆರಂಭ ವಾಗಿದೆ ಎಂದು ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ.

ಸದುಪಯೋಗ
ಈ ವರ್ಷದ ಬೇಸಗೆ ಪರಿಸ್ಥಿತಿಯಲ್ಲಿ ಹೊಳೆಯಲ್ಲಿ ನೀರಿನ ಹರಿವು ನಿಂತಿದೆ. ಸಮುದ್ರದ ಉಬ್ಬರದ ಸಮಯದಲ್ಲಿ ನೀರು ಹಾಲಾಡಿಯ ತನಕ ಒತ್ತಿ ನಿಲ್ಲುತ್ತಿದೆ. ಇದೇ ರೀತಿ ಆದರೆ, ಸೌಡದ ತನಕ, ಸಮುದ್ರದ ಉಪ್ಪು ನೀರು ಬರುವ ಆತಂಕ ವ್ಯಕ್ತವಾಗಿದೆ. ಹಾಲಾಡಿ, ಜನ್ನಾಡಿಗಳಲ್ಲಿ ಮಳೆಗಾಲದಲ್ಲಿ ಇರುವ ನೀರಿನ ತೋಡಿಗೆ ಕಾಲುವೆ ನೀರು ಹರಿಸಿ, ಸದುಪಯೋಗ ಮಾಡದೇ ನೀರು ಪೋಲಾಗುತ್ತಿದೆ. ಹವಾಮಾನ ವೈಪರೀತ್ಯ ಒಂದೆಡೆ ಆದರೆ ನದಿ ಮೂಲಗಳ ಮೇಲೆ ಆಗುತ್ತಿರುವ ಭೌಗೋಳಿಕ ಬದಲಾವಣೆ ಊಹೆಗೂ ಮೀರಿದ ಅನಾಹುತ ಸೃಷ್ಟಿಸಬಹುದು.

Advertisement

ಹೊರ ತಾಲೂಕಿಗೆ ನೀರು
ಜಪ್ತಿಯಿಂದ ವಾರಾಹಿ ನೀರು ಕುಂದಾಪುರ ನಗರಕ್ಕೆ ಬರುತ್ತದೆ. ಈ ಮೂಲಕ ನಗರದ ಜನರ ಕುಡಿಯುವ ನೀರಿನ ಸಮಸ್ಯೆ ನಿವಾರಣೆಯಾಗಿದೆ. ಅಷ್ಟೇ ಅಲ್ಲ ಪೈಪ್‌ ಲೈನ್‌ ಹಾದು ಬರುವ ಆನಗಳ್ಳಿ, ಬಸೂÅರು, ಬಳ್ಕೂರು, ಕೋಣಿ, ಹಂಗಳೂರು, ಕಂದಾವರ, ಕೋಟೇಶ್ವರ ಪಂಚಾಯತ್‌ಗೆ ನೀರು ನೀಡಲಾಗುತ್ತಿದೆ. ವಾರಾಹಿ ಇಷ್ಟು ಕಡೆಗಳ ಕುಡಿಯುವ ನೀರಿನ ದಾಹ ಕಡಿಮೆ ಮಾಡುತ್ತಿದೆ. ಎಡದಂಡೆ ಕಾಲುವೆ ಮೂಲಕ ಕೃಷಿಗೆ ನೀರುಣಿಸುತ್ತಿದೆ. ಹಾದು ಹೋಗುವ 10 ಪಂಚಾಯತ್‌ಗಳಿಗೆ ನೀರು ಕೊಡುವ ಮೂಲಕ ಉಡುಪಿಯ ನೀರಿನ ಕೊರತೆ ತಣಿಸುವ ಪ್ರಯತ್ನ ನಡೆಯುತ್ತಿದೆ. ಅದೂ ಪೂರ್ಣ ವಾಗಿಲ್ಲ. ಕಾರ್ಕಳ ತಾಲೂಕಿಗೆ ನೀರೊ ದಗಿಸುವ ಯೋಜನೆಗೆ ಮಂಜೂರಾತಿ ದೊರೆತಿದೆ. ಬಲದಂಡೆ ಕಾಮಗಾರಿ ನಡೆದಿಲ್ಲ.

ಹಳಿ ತಪ್ಪಿದ ಯೋಜನೆ
ವಾರಾಹಿ ಯೋಜನೆ ಹಳಿ ತಪ್ಪುತ್ತಿದೆ. ಕೆಲವೇ ಕುಳಗಳ ಹೊಟ್ಟೆ ತುಂಬಿಸುತ್ತಿದೆ. ಬಲದಂಡೆ ಯೋಜನೆ ಗುರುತು ಹಾಕಿ ಇಪ್ಪತ್ತು ವರ್ಷಗಳೇ ಕಳೆದಿವೆ. ಆದರೆ ಕಾಮಗಾರಿ ಇನ್ನೂ ಪ್ರಾರಂಭಿಸಿಲ್ಲ. ವಾರಾಹಿ ಮೂಲ ಯೋಜನೆಯ ಪ್ರಕಾರ ಇದ್ದ ಕಾಮಗಾರಿಯನ್ನು ಪೂರ್ತಿ ಗೊಳಿಸದೆ ಬೇರೆ ಕಡೆ ನೀರು ತೆಗೆದುಕೊಂಡ ಹೋಗು ತ್ತಿರುವುದು ನದಿಯ ಒಸರು ಬದಲಾಗಲು ಕಾರಣವಾಗಿರಬಹುದು.

ಎಡದಂಡೆ ಮೊದಲಾಗಲಿ
ಕುಂದಾಪುರ ವಿಧಾನ ಸಭಾ ಕ್ಷೇತ್ರದ ರೈತರಿಗೆ, ಜನಸಾಮಾನ್ಯರಿಗೆ ಪಯೋಗವಾಗಬೇಕಾದರೆ ನನೆಗುದಿಗೆ ಬಿದ್ದಿರುವ ವಾರಾಹಿ ಎಡದಂಡೆ ಕಾಲುವೆಯ ಹಾಗೂ ಏತ ನೀರಾವರಿ ಕಾಮಗಾರಿಗೆ ವೇಗ ಕೊಡಬೇಕು. ಟೆಂಡರ್‌ ಆಗಿ ಇನ್ನೂ ಪ್ರಾರಂಭಗೊಳ್ಳದ ಕಾಲುವೆ ಕಾಮಗಾರಿ ಹಾಗೂ ಉಪ ಕಾಲುವೆ ಕಾಮಗಾರಿಗಳ ತ್ವರಿತ ಮುಕ್ತಾಯಕ್ಕೆ ನೂತನ ಶಾಸಕರು ಕ್ರಮವಹಿಸಲಿ.  -ಕೆ.ವಿಕಾಸ್‌ ಹೆಗ್ಡೆ, ಜಿಲ್ಲಾ ಕಾಂಗ್ರೆಸ್‌ ವಕ್ತಾರ

ಸದ್ಯ ಸಮಸ್ಯೆ ಇಲ್ಲ
ಪ್ರಸ್ತುತ ನಗರ ಹಾಗೂ ಇತರ ಪಂಚಾಯತ್‌ಗಳಿಗೆ ನೀರು ಸರಬರಾಜಾಗುತ್ತಿರುವಲ್ಲಿ ನೀರಿನ ಕೊರತೆ ಉಂಟಾಗಿಲ್ಲ. ಮುಂದಿನ ದಿನಗಳಲ್ಲಿ ಮಳೆಯಾಗಿ ನೀರು ತುಂಬಿ, ಯಾವುದೇ ಸಮಸ್ಯೆ ಉಂಟಾಗಲಾರದು ಎಂದು ನಂಬಿದ್ದೇವೆ.
-ಮಂಜುನಾಥ ಆರ್‌., ಮುಖ್ಯಾಧಿಕಾರಿ, ಪುರಸಭೆ

– ಲಕ್ಷ್ಮೀ ಮಚ್ಚಿನ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next