Advertisement

Vishakapattana: ಋಷಿಕೊಂಡ ಅರಮನೆ ಈಗ ವಿವಾದದ ಕೆಂಡ!

12:53 PM Jun 20, 2024 | Team Udayavani |

ಆಂಧ್ರಪ್ರದೇಶದ ವಿಶಾಖಪಟ್ಟಣದ ಸಮುದ್ರ ತಟದಲ್ಲಿರುವ ಋಷಿಕೊಂಡ ಬೆಟ್ಟದ ನೆತ್ತಿಯ ಮೇಲೆ ಪ್ರವಾಸೋದ್ಯಮ ಇಲಾಖೆಯು ನಿರ್ಮಿಸಿರುವ ಐಷಾರಾಮಿ ಕಟ್ಟಡ ಅನಗತ್ಯ ಕಾರಣಕ್ಕೆ ಸುದ್ದಿಯಲ್ಲಿದೆ. ಪ್ರವಾಸೋದ್ಯಮ ಹೆಸರಿನಲ್ಲಿ ಸಿಎಂ ವಾಸ್ತವ್ಯಕ್ಕೆ ದುಂದುವೆಚ್ಚ ಮಾಡಿ ಕಟ್ಟಡ ನಿರ್ಮಾಣ ಮಾಡಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಆ ಕುರಿತು ಇಲ್ಲಿದೆ ಮಾಹಿತಿ.

Advertisement

ವಿಶಾಖಪಟ್ಟಣದ ಋಷಿಕೊಂಡ ಬೆಟ್ಟದ ನೆತ್ತಿಯ ಮೇಲೆ ಈ ವೈಎಸ್‌ಆರ್‌ ಕಾಂಗ್ರೆಸ್‌ ಪಾರ್ಟಿ ಸರ್ಕಾರ ನಿರ್ಮಾಣ ಮಾಡಿರುವ ವೈಭವೋಪೇತ ಕಟ್ಟಡವು ಈಗ ವಿವಾದದ ಕೇಂದ್ರಬಿಂದುವಾಗಿದೆ. ಮರಳಿ ಅಧಿಕಾರಕ್ಕೆ ಬರುವ ಆತ್ಮವಿಶ್ವಾಸದಿಂದಲೇ ತಮ್ಮ ವಾಸ್ತವ್ಯಕ್ಕಾಗಿ ಜಗನ್‌ ಮೋಹನ್‌ ರೆಡ್ಡಿ ಸುಮಾರು 500 ಕೋಟಿ ರೂ. ವೆಚ್ಚದಲ್ಲಿ ಐಷಾರಾಮಿ ಕಟ್ಟಡಗಳ ಸಂಕೀರ್ಣ ನಿರ್ಮಾಣ ಮಾಡಿದ್ದು, ಚರ್ಚೆಗೆ ಕಾರಣವಾಗಿದೆ.
ಈ ಕಟ್ಟಡಗಳ ವಿವರಗಳು, ಐಷಾರಾಮಿ ವ್ಯವಸ್ಥೆಗಳು ದಂಗುಬಡಿಸುವಂತಿವೆ. ವಿವಿಧ ಬ್ಲಾಕ್‌ಗಳಲ್ಲಿ ಹರಡಿಕೊಂಡಿರುವ ಈ ಕಟ್ಟಡಗಳು ಎಲ್ಲ ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿವೆ. ಇಲ್ಲಿರುವ ಬಾತ್‌ರೂಮ್‌ ಗಳು, ಟಬ್‌ಗಳಿಗಾಗಿಯೇ ಲಕ್ಷಾಂತರ ರೂಪಾಯಿ ವೆಚ್ಚ ಮಾಡಲಾಗಿದೆಯೆಂದರೆ, ಅದರ ವೈಭವದ ಸಣ್ಣ ಅಂದಾಜು ದೊರೆಯಬಹುದು! ಪ್ರವಾಸೋ ದ್ಯಮ ಉತ್ತೇಜನದ ಹೆಸರಿನಲ್ಲಿ ಜಗನ್‌ ತಮ್ಮ ಸ್ವಂತ ಬಳಕೆಗೆ ಜನರ ತೆರಿಗೆ ಹಣವನ್ನು ಪೋಲು ಮಾಡಿದ್ದಾರೆಂಬ ಎಂಬ ಆರೋಪವು ಗಂಭೀರ ಸ್ವರೂಪವನ್ನು ಪಡೆದುಕೊಳ್ಳುತ್ತಿದೆ. ಕಟ್ಟಡಗಳ ನಿರ್ಮಾಣಕ್ಕೆ ಸಂಬಂಧಿಸಿ ದಂತೆ ಸಾಕಷ್ಟು ಅವ್ಯವಹಾರಗಳು ನಡೆದಿವೆ ಎನ್ನಲಾಗಿದೆ.

ವೈಭವದ ಸಂಕೇತ ಋಷಿಕೊಂಡ ಅರಮನೆ!

ಋಷಿಕೊಂಡ ಬೆಟ್ಟದ ನೆತ್ತಿಯ ಮೇಲಿನ 61 ಎಕರೆ ವಿಸ್ತೀರ್ಣದ ಜಾಗದ 9.8 ಎಕರೆ ಪ್ರದೇಶದ 1,41,433 ಚದರ ಮೀಟರ್‌ (15.22 ಲಕ್ಷ ಚ.ಅಡಿ) ಪ್ರದೇಶದಲ್ಲಿ 12 ಬೆಡ್‌ರೂಮ್‌ಗಳ ಕಟ್ಟಡವು ವೈಭವೋಪೇತ ಅರಮನೆಯ ಸಂಕೇತವಾಗಿದೆ. ಈ ಸಂಕೀರ್ಣವು ಒಟ್ಟು ಮೂರು ಕಟ್ಟಡಗಳನ್ನು ಹೊಂದಿದೆ. ಇದಕ್ಕಾಗಿ ಅಂದಾಜು ವೆಚ್ಚ 500 ಕೋಟಿ ವೆಚ್ಚ ಮಾಡಲಾಗಿದೆ. ಇಲ್ಲಿರುವ ಕೆಲವು ಬಾತ್‌ರೂಂಗಳೇ 480 ಚದರ ಅಡಿಗಳಷ್ಟು ವಿಸ್ತಾರವಾಗಿವೆ! ಪ್ರವಾಸೋದ್ಯಮಕ್ಕೆ ಈ ಕಟ್ಟಡವನ್ನು ನಿರ್ಮಾಣ ಮಾಡಿದ್ದರೆ 7,266 ಚದರ ಮೀಟರ್‌ನಷ್ಟು ವಿಸ್ತಾರದ ಮೀಟಿಂಗ್‌ ಹಾಲ್‌ ಅಗತ್ಯವಿರಲಿಲ್ಲ ಎಂಬುದು ಟಿಡಿಪಿ ವಾದವಾಗಿದೆ.

ಕಳಿಂಗ ಬ್ಲಾಕ್‌ನ ಮೊದಲನೇ ಮಹಡಿಯಲ್ಲಿ ಅಲಂಕಾರಿಕ ಷಾಂಡಿಲಿಯರ್‌ (ಗೊಂಚಲದೀಪ) ಬೆಲೆಯೇ 2 ಲಕ್ಷ ರೂ.! ಕಾರಿಡಾರ್‌ ಗಳಲ್ಲೂ ಇದೇ ರೀತಿಯ ಷಾಂಡಿಲಿಯರ್‌ಗಳನ್ನು ಹಾಕಲಾಗಿದೆ. ದುಬಾರಿ ಮಾರ್ಬಲ್‌ಗ‌ಳನ್ನು ಬಳಸಲಾಗಿದೆ. ಕಳಿಂಗ ಬ್ಲಾಕ್‌ನಲ್ಲಿ ವಾಲ್‌-ಟು-ವಾಲ್‌ ಸ್ಕ್ರೀನ್‌ ಹೋಮ್‌ ಥಿಯೇಟರ್‌ ಕೂಡ ಇದೆ. ಗಜಪತಿ ಮತ್ತು ವೆಂಗಿ ಬ್ಲಾಕ್‌ ಗಳಲ್ಲೂ ಇದೇ ರೀತಿಯ ಸೌಲಭ್ಯಗಳನ್ನು ಕಾಣಬಹುದು. ಒಳಾಂಗಣ ವಿನ್ಯಾಸಕ್ಕಾಗಿ 33 ಕೋಟಿ ರೂ.ವೆಚ್ಚ ಮಾಡಲಾಗಿದೆ. ಇಡೀ ಸಂಕೀರ್ಣದಲ್ಲಿ ಬಾತ್‌ರೂಮ್‌ಗಳು ಮತ್ತು ಸೆಂಟ್ರಲ್‌ ಏರ್‌ಕಂಡೀಷಿನಿಂಗ್‌ ಸೌಲಭ್ಯಗಳಿವೆ. ಸಮುದ್ರಮುಖೀಯಾ ಡೈನಿಂಗ್‌ ಹಾಲ್‌ ಇದ್ದು, 12 ಕೋಣೆಗಳಲ್ಲೂ ದುಬಾರಿ ಬೆಡ್‌ ಗಳಿವೆ ಮತ್ತು ಬಾತ್‌ರೂಮ್‌ಗಳಲ್ಲಿ ಸ್ಪಾ ಸೌಲಭ್ಯವೂ ಇದೆ.

Advertisement

ಏನೇನು ಸೌಲಭ್ಯಗಳು?

ಋಷಿಕೊಂಡದ ನೆತ್ತಿಯ ಮೇಲೆ ಒಟ್ಟು 7 ಬ್ಲಾಕ್‌ಗಳಿದ್ದು, ಅವುಗಳಿಗೆ ವೆಂಗಿ ಎ, ವೆಂಗಿ ಬಿ, ಕಳಿಂಗ, ಗಜಪತಿ ಮತ್ತು ವಿಜಯನಗರ ಎ, ಬಿ, ಸಿ ಎಂದು ಹೆಸರಿಸಲಾಗಿದೆ. ಪ್ರತಿ ಬ್ಲಾಕ್‌ ನಲ್ಲೂ ಬಾಂಕ್ವೆಟ್‌ ಹಾಲ್‌, ಗೆಸ್ಟ್‌ ರೂಮ್ಸ್‌, ರೆಸ್ಟೋರೆಂಟ್ಸ್‌, ವಿಲ್ಲಾ ಸೂಟ್‌ಗಳು, ಸ್ಪಾ, ಫಿಟ್ನೆಸ್‌ ಸೆಂಟರ್‌, ಇಂಡೋರ್‌ ಗೇಮ್ಸ್‌, ಬ್ಯಾಕ್‌ ಆಫೀಸ್‌ಗಳಿವೆ. ಒಂದು ಬ್ಲಾಕ್‌ನಲ್ಲಿ ಬಿಸಿನೆಸ್‌ ಹೊಟೇಲ್‌ ಇದ್ದರೆ, ಮತ್ತೂಂದರಲ್ಲಿ ಕಾನ್ಫರೆನ್ಸ್‌ ಹಾಲ್‌ಗ‌ಳಿವೆ. ಜೊತೆಗೆ ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿದೆ.

2021ರಿಂದಲೇ ವಿವಾದ ಶುರು

ಋಷಿಕೊಂಡ ಬೆಟ್ಟದ ಮೇಲಿರುವ ಹರಿಥಾ ರೆಸಾರ್ಟ್‌ ಮರಅಭಿವೃದ್ಧಿ ಮಾಡುವುದಾಗಿ 2021ರಲ್ಲಿ ವೈಎಸ್‌ಆರ್‌ಸಿಪಿ ಸರ್ಕಾರವು ಘೋಷಿಸಿತು. ಪರಿಸರ ನಿಯಮಗಳನ್ನು ಉಲ್ಲಂಘಿಸಿ ಈ ಅಭಿವೃದ್ಧಿ ಕಾರ್ಯವನ್ನು ಕೈಗೊಳ್ಳಲಾಗುತ್ತಿದೆ ಎಂದು ಅಂದು ವಿರೋಧ ಪಕ್ಷದ ಸ್ಥಾನದಲ್ಲಿದ್ದ ಟಿಡಿಪಿ ಮತ್ತು ಜನಸೇನಾ ಪಕ್ಷಗಳು ಆರೋಪಿಸಿದ್ದವು. ಕಾಮಗಾರಿ ನಡೆಯುವ ಸ್ಥಳಕ್ಕೆ ಪ್ರತಿಪಕ್ಷದ ನಾಯಕರು ಮುತ್ತಿಗೆ ಹಾಕಿದ್ದರು. ಸರ್ಕಾರವು ಪ್ರತಿಭಟನೆಗಳನ್ನು ಹತ್ತಿಕ್ಕಿತ್ತು. ಅಲ್ಲದೇ, ಜನಸೇನಾ ನಾಯಕರೊಬ್ಬರು, ಪರಿಸರ ನಿಯಮಗಳನ್ನು ಮೀರಿ ಯೋಜನೆ ಕೈಗೊಳ್ಳಲಾಗುತ್ತಿದೆ ಎಂದು ಆರೋಪಿಸಿ ಹೈಕೋರ್ಟ್‌ಮೆಟ್ಟಿಲೇರಿದ್ದರು. ಈ ಕುರಿತು ಸಮಿತಿ ರಚಿಸಿ, ತನಿಖೆ ನಡೆಸುವಂತೆ ಕೋರ್ಟ್‌ ಹೇಳಿತ್ತು.

ಸಿಎಂ ವಾಸಕಾಗಿ ಅರಮನೆ ನಿರ್ಮಾಣ?

ಎರಡನೇ ಬಾರಿಗೆ ಅಧಿಕಾರಕ್ಕೆ ಮರಳುವ ಆತ್ಮ ವಿಶ್ವಾಸ ಹೊಂದಿದ್ದ ಜಗನ್‌ಮೋಹನ್‌ ರೆಡ್ಡಿ ಅವರು ವಿಶಾಖಪಟ್ಟಣ ನಗರವನ್ನು ಆಂಧ್ರದ ಕಾರ್ಯಾಂಗದ ರಾಜಧಾನಿಯಾಗಿ ಘೋಷಿಸಿದ್ದರು. ಈ ಕಾರಣಕ್ಕಾಗಿಯೇ ಋಷಿಕೊಂಡ ನೆತ್ತಿಯ ಮೇಲಿನ ರೆಸಾರ್ಟ್‌ ಮರುಅಭಿವೃದ್ಧಿ ನೆಪದಲ್ಲಿ ತಮಗಾಗಿ ವೈಭವೋಪೇತ ಅರಮನೆ ಕಟ್ಟಿಸಿಕೊಂಡಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿವೆ.

ಜನರ ದುಡ್ಡು ಪೋಲು: ಟಿಡಿಪಿ ಆರೋಪ  

ಪ್ರವಾಸೋದ್ಯಮ ಅಭಿವೃದ್ಧಿಗೆಂದು ನೀಡಿದ್ದ ಅನುಮತಿಯನ್ನು ಜಗನ್‌ ದುರುಪಯೋಗಪಡಿಸಿ ಕೊಂಡಿದ್ದಾರೆ. ಸಾರ್ವಜನಿಕರ ಹಣ ಬಳಸಿಕೊಂಡು ಋಷಿ ಕೊಂಡ ಬೆಟ್ಟದ “ಅರಮನೆ’ ನಿರ್ಮಿಸಿದ್ದಾರೆ. ಇರಾಕ್‌ ಸರ್ವಾಧಿಕಾರಿ ಸದ್ದಾಂ ಹುಸೇನ್‌ ಹಾಗೂ ಕರ್ನಾಟಕದ ಗಾಲಿ ಜನಾ ರ್ದನ ರೆಡ್ಡಿ ಅವರ ಅರಮನೆಯ ರೀತಿಯ ಅರಮನೆಯನ್ನು ಜಗನ್‌ ಪ್ರವಾಸೋದ್ಯಮದ ಹೆಸರಿನಲ್ಲಿ ಬೆಟ್ಟದ ಮೇಲೆ ನಿರ್ಮಿಸಿ, “ಸಿಎಂ ಕ್ಯಾಂಪ್‌ ಆಫೀಸ್‌’ ಮಾಡಿಕೊಳ್ಳಲು ಯೋಜಿಸಿ ದ್ದರು ಎಂದು ಟಿಡಿಪಿ ಗಂಭೀರ ಆರೋಪ ಮಾಡಿದೆ.

“ಪ್ರವಾಸೋದ್ಯಮಕಾಗಿ ನಿರ್ಮಾಣ”

ಟಿಡಿಪಿಯ ಎಲ್ಲ ಆರೋಪಗಳನ್ನು ತಳ್ಳಿ ಹಾಕಿರುವ ಜಗನ್‌ ಪಕ್ಷ, ಋಷಿಕೊಂಡ ಕಟ್ಟಡವು ಸರ್ಕಾರಕ್ಕೆ ಸೇರಿದೆ. ಅವುಗಳನ್ನು ಹೇಗೆ ಬಳಕೆ ಮಾಡಿಕೊಳ್ಳಬೇಕು ಎಂಬುದು ಹಾಲಿ ಸರ್ಕಾರಕ್ಕೆ ಬಿಟ್ಟ ವಿಷಯವಾಗಿದೆ. ಗಣ್ಯರು ಭೇಟಿ ನೀಡಿದಾಗ ಉಳಿದುಕೊಳ್ಳಲು ನಿರ್ಮಿಸಲಾಗಿದೆ. ಈ ವಿಷಯದಲ್ಲಿ ಹಾಲಿ ಸರ್ಕಾರವು ಜನರಿಗೆ ತಪ್ಪು ಮಾಹಿತಿಯನ್ನು ನೀಡುತ್ತಿದೆ ಎಂದು ಆರೋಪಿಸಿದೆ.

ಎಲ್ಲಿದೆ ಋಷಿಕೊಂಡ?:

ಆಂಧ್ರಪ್ರದೇಶದ ಪ್ರಮುಖ ವಿಶಾಖಪಟ್ಟಣಂ ಸಮುದ್ರದ ತಟದಲ್ಲಿ ಋಷಿಕೊಂಡ ಬೆಟ್ಟವಿದೆ. ಇಲ್ಲಿರುವ ಬೀಚ್‌ ಕೂಡ ಆಕರ್ಷಣೀಯ ವಾಗಿದ್ದು, ಜಲಕ್ರೀಡೆಗಳಿಗೆ ಪ್ರಸಿದ್ಧಿಯಾಗಿದೆ. ಹೆಚ್ಚಿನ ಪ್ರವಾಸಿಗರನ್ನು ಸೆಳೆಯುತ್ತದೆ. ಹೈದ್ರಾಬಾದ್‌ನಿಂದ 651 ಕಿ.ಮೀ. ಮತ್ತು ಅಮರಾವತಿ ಯಿಂದ 414 ಕಿ.ಮೀ. ದೂರದಲ್ಲಿದೆ ಋಷಿಕೊಂಡ.

Advertisement

Udayavani is now on Telegram. Click here to join our channel and stay updated with the latest news.

Next