ಲಂಡನ್: ಏಷ್ಯಾದ ಅತೀ ದೊಡ್ಡ ರಾಷ್ಟ್ರವೆನಿ ಸಿರುವ ಚೀನ, ಬ್ರಿಟನ್ ಸೇರಿದಂತೆ ಜಗತ್ತಿನ ಎಲ್ಲ ರಾಷ್ಟ್ರಗಳ ಭದ್ರತೆಗೆ ಹಾಗೂ ಸಮೃದ್ಧತೆಗೆ ಸವಾಲು ಎಸೆಯು ವಂಥ ದೇಶವಾಗಿ ಬೆಳೆದಿದೆ. ಹೀಗೆಂದು ಬ್ರಿಟನ್ ಪ್ರಧಾನಿ ಹುದ್ದೆಯ ರೇಸ್‌ನಲ್ಲಿರುವ ರಿಷಿ ಸುನಕ್ ಹೇಳಿದ್ದಾರೆ. ಅದರ ಪ್ರಾಬಲ್ಯ ತಡೆವ ನಿಟ್ಟಿನಲ್ಲಿ ನ್ಯಾಟೋ ಮಾದರಿಯ ಹೊಸ ಮೈತ್ರಿಕೂಟ ರಚನೆಯ ಪ್ರಸ್ತಾಪವೂ ತಮ್ಮ ಕಾರ್ಯ ಸೂಚಿಯಲ್ಲಿದೆ ಎಂದಿದ್ದಾರೆ.
ಅಮೆರಿಕದಿಂದ ಭಾರತದವರೆಗೆ ತಾನು ಯಾರ ಮೇಲೆ ಕೆಂಗಣ್ಣಿಟ್ಟಿದೆಯೋ ಆ ದೇಶಗಳನ್ನು ಚೀನ ಒಂದಲ್ಲ ಒಂದು ರೀತಿ ಕಾಡುತ್ತಲೇ ಬಂದಿದ್ದು, ಇದಕ್ಕೆ ಅನೇಕ ಸಾಕ್ಷ್ಯಾಧಾರಗಳಿವೆ ಎಂದಿದ್ದಾರೆ.
ಸೋಮವಾರ ಲಂಡನ್‌ನಲ್ಲಿ ಆಯೋಜಿಸಲಾಗಿದ್ದ ಚುನಾವಣ ಪ್ರಚಾರ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ತಾವು ಪ್ರಧಾನಿಯಾದ ಮೇಲೆ ಬ್ರಿಟನ್‌ನ ರಕ್ಷಣೆಗೆ ತಾವು ಕೈಗೊಳ್ಳುವ ಕ್ರಮಗಳ ಬಗ್ಗೆ ಪ್ರಸ್ತಾಪಿಸಿದರು. “ಚೀನವು, ಬ್ರಿಟನ್ ಸೇರಿದಂತೆ ವಿಶ್ವದ ಅನೇಕ ರಾಷ್ಟ್ರಗಳಿಗೆ ಸೈಬರ್ ಭಯೋತ್ಪಾದನೆಯನ್ನು ಹರಡುತ್ತಿದೆ. ಆ ಮೂಲಕ ಎಲ್ಲ ದೇಶಗಳ ಭದ್ರತೆಗೆ ಅದು ಸವಾಲು ಹಾಕಿದೆ. ಜಗತ್ತಿನ ಎಲ್ಲ ರಾಷ್ಟ್ರಗಳು ಚೀನದ ಈ ಭೀತಿಯನ್ನು ಒಗ್ಗಟ್ಟಿನಿಂದ ಹಿಮ್ಮೆಟ್ಟಿಸಬೇಕಿದೆ’ ಎಂದು ಅವರು ಕರೆ ಕೊಟ್ಟಿದ್ದಾರೆ.
ಅನಂತರ ಮಾತು ಮುಂದುವರಿಸಿದ ಅವರು, “ಯುನೈಟೆಡ್ ಕಿಂಗ್‌ಡಮ್ ನಲ್ಲಿ ಚೀನದ ತತ್ವಜ್ಞಾನಿ ಕನ್‌ಫ್ಯೂಶಿಯಸ್ ಹೆಸರಿನ ಸುಮಾರು 30 ಬೋಧನಾ ಸಂಸ್ಥೆಗಳಿವೆ. ಚೀನ ಮೂಲದ ಧರ್ಮ ಪ್ರಸರಣ ಸಂಸ್ಥೆಯೊಂದರ ಶಾಖೆಗಳು ಇಷ್ಟು ಸಂಖ್ಯೆಯಲ್ಲಿರುವುದು ಕೇವಲ ನಮ್ಮಲ್ಲಿ ಮಾತ್ರ. ನಾನು ಅಧಿಕಾರಕ್ಕೆ ಬಂದರೆ ಅವೆಲ್ಲವನ್ನೂ ಮುಚ್ಚಿಸುತ್ತೇನೆ’ ಎಂದು ಆಶ್ವಾಸನೆ ನೀಡಿದ್ದಾರೆ.