“ನಿಮ್ಮನೇಲಿ ವ್ಯಾಲೆಂಟೈನ್ಸ್ ಡೇ ಆಚರಿಸ್ತೀರಾ …’ ಹೀಗೆ ಒಂದಷ್ಟು ಫನ್ನೀ ಡೈಲಾಗ್ ಬಿಡುತ್ತಲೇ ಇಷ್ಟವಾಗುವ ಪರ್ಮಿ ಈಗ ಹ್ಯಾಪಿ ಮೂಡ್‌ನಲ್ಲಿದ್ದಾನೆ…! ಯಾವ ಪರ್ಮಿ ಅನ್ನೋ ಗೊಂದಲಬೇಡ. ಇದು “ಆಪರೇಷನ್ ಅಲಮೇಲಮ್ಮ’ ಪರ್ಮಿ ನ್ಯೂಸು. ಹೌದು, ಆ ಚಿತ್ರದ ಹೀರೋ ರಿಷಿ ಈಗ ಖುಷಿಯಲ್ಲಿದ್ದಾರೆ. ಅದಕ್ಕೆ ಕಾರಣ, ಅವರ ಮೊದಲ “ಆಪರೇಷನ್’ ಸಕ್ಸಸ್ ಆಗಿದ್ದು, ಹಾಗೇ ಅವರನ್ನು ಹುಡುಕಿ ಬರುತ್ತಿರುವ ಹೊಸ ಕಥೆಗಳು. ರಿಷಿ ಕೈಯಲ್ಲೀಗ ಒಂದಲ್ಲ, ಎರಡಲ್ಲ, ಮೂರು ಚಿತ್ರಗಳಿವೆ. ಅದೇ ಈ ಹೊತ್ತಿನ ಸುದ್ದಿ.
ಈ ಕುರಿತು ಮಾತನಾಡುವ ರಿಷಿ, “ನನ್ನ ಮೊದಲ ಚಿತ್ರ “ಆಪರೇಷನ್ ಅಲಮೇಲಮ್ಮ’. ಎಲ್ಲೆಡೆಯಿಂದ ಸಖತ್ ರೆಸ್ಪಾನ್ಸ್ ಸಿಕ್ಕಿದೆ. ಮೊದಲ ಬಾಲ್‌ನಲ್ಲೇ ಸಿಕ್ಸರ್ ಬಾರಿಸಿದ ಖುಷಿ ನನ್ನದು. ಇನ್ನು, ಇದಾದ ಮೇಲೆ ಹೇಮಂತ್ ರಾವ್ ನಿರ್ದೇಶನದ “ಕವಲುದಾರಿ’ಯಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ. ಖುಷಿಯ ವಿಷಯವೆಂದರೆ, ಆ ಚಿತ್ರಕ್ಕೆ ಪುನೀತ್ ರಾಜ್‌ಕುಮಾರ್ ಹಾಗೂ ಕಾರ್ತಿಕ್ ಗೌಡ ನಿರ್ಮಾಣವಿದೆ. ಅಲ್ಲಿ ನಾನೊಬ್ಬ ಇನ್ಸ್ ಪೆಕ್ಟರ್ ಪಾತ್ರ ನಿರ್ವಹಿಸುತ್ತಿದ್ದೇನೆ. ಆ ಚಿತ್ರದಲ್ಲಿ ಹೊಸಬರೇ ಹೆಚ್ಚು ಕಾಣಿಸಿಕೊಳ್ಳಲಿದ್ದಾರೆ. ಅದೊಂದು ಔಟ್ ಅಂಡ್ ಔಟ್ ಥ್ರಿಲ್ಲರ್ ಸಿನಿಮಾ. ಹೊಸಬರಿದ್ದರೂ, ನುರಿತ ಕಲಾವಿದರ ದಂಡು ಜಾಸ್ತಿ ಇರಲಿದೆ. ಇನ್ನು, ಅಲ್ಲಿ ನಾಯಕಿ ಹೊಸಬರಾಗಿರುತ್ತಾರೆ. ಆ ಪಾತ್ರಕ್ಕೆ ಹೆಚ್ಚು ಆದ್ಯತೆ ಇಲ್ಲವಾದರಿಂದ, ನನ್ನ ಪಾತ್ರಕ್ಕೆ ಒಂದಷ್ಟು ಜವಾಬ್ದಾರಿ ಹೆಚ್ಚಿದೆ. ಇನ್ನು, “ಗೋಧಿ ಬಣ್ಣ ಸಾಧಾರಣ ಮೈಕಟ್ಟು’ ಟೀಮ್ ಈ ಚಿತ್ರಕ್ಕೂ ಕೆಲಸ ಮಾಡಲಿದೆ. ಚರಣ್‌ರಾಜ್ ಸಂಗೀತ ಮಾಡಿದರೆ, ಅದ್ವೆ„ತ ಗುರುಮೂರ್ತಿ ಅವರು ಕ್ಯಾಮೆರಾ ಹಿಡಿಯುತ್ತಿದ್ದಾರೆ. ಆಗಸ್ಟ್ ಎರಡನೇ ವಾರದಲ್ಲಿ ಚಿತ್ರೀಕರಣ ಶುರುವಾಗಲಿದೆ. ಮೊದಲ ವಾರದಲ್ಲಿ ಟೈಟಲ್ ಟೀಸರ್ ರಿಲೀಸ್ ಮಾಡಲಿದ್ದು, ಅಲ್ಲಿ ಸಿನಿಮಾದ ಫ್ಲೇವರ್ ಹೇಗಿರುತ್ತೆ ಅನ್ನೋದು ಗೊತ್ತಾಗುತ್ತೆ’ ಎಂದು ವಿವರ ಕೊಡುತ್ತಾರೆ ರಿಷಿ.
ಹಾಗಾದರೆ, ರಿಷಿ ಇನ್ನು ಯಾವ ಚಿತ್ರ ಒಪ್ಪಿಕೊಂಡಿದ್ದಾರೆ? ಇದಕ್ಕೆ ಉತ್ತರ, ಜಯಣ್ಣ ಬ್ಯಾನರ್‌ನಲ್ಲೊಂದು “ಮಹಾರಥಿ’ ಚಿತ್ರ ಮಾಡುತ್ತಿದ್ದಾರೆ. ರಿಷಿ ಅವರಿಗೊಂದು ಜಯಣ್ಣ ಕಥೆ ಕೇಳಿಸಿದ್ದೇ ತಡ, ರಿಷಿ ಖುಷಿಯಿಂದಲೇ ಒಪ್ಪಿಕೊಂಡು ಆ ಸಿನಿಮಾ ಮಾಡೋಕೆ ರೆಡಿಯಾಗಿದ್ದಾರೆ. ಅಂದಹಾಗೆ, ವೀರೇಂದ್ರ ಶೆಟ್ಟಿ ಎಂಬುವರು ಆ ಚಿತ್ರ ನಿರ್ದೇಶನ ಮಾಡುತ್ತಿದ್ದಾರೆ. ತುಳುವಿನ “ಚಾಲಿಪೋಲಿಲು’ ಚಿತ್ರ ಮಾಡಿದ್ದ ಅವರು, ಪಕ್ಕಾ ಮನರಂಜನೆಯ ಕಥೆಯೊಂದನ್ನು ಹೇಳಿದ್ದಾರೆ. ಅದೊಂದು ಅದ್ಭುತ ಹಾಸ್ಯಮಯ ಸಿನಿಮಾ. “ಕವಲು ದಾರಿ’ ಬಳಿಕ ಆ ಚಿತ್ರ ಮಾಡುತ್ತಿದ್ದಾರೆ. ಜಯಣ್ಣ ಬ್ಯಾನರ್‌ನ ಸಿನಿಮಾ ನಂತರ “ಆಪರೇಷನ್ ಅಲಮೇಲಮ್ಮ-2′ ಮಾಡಲಿದ್ದಾರಂತೆ ರಿಷಿ.
ಇದಷ್ಟೇ ಅಲ್ಲ, ರಿಷಿ ಕಳೆದ ಎರಡು ತಿಂಗಳಿನಿಂದಲೂ ಸುಮಾರು ಇಪ್ಪತ್ತು ಕಥೆಗಳನ್ನು ಕೇಳಿದ್ದಾರಂತೆ. ಆದರೆ, ಅವರು ಕೇಳಿದ ಕಥೆಗಳೆಲ್ಲವೂ ಬಹುತೇಕ ಹೊಸಬರದ್ದೇ. ಸದ್ಯಕ್ಕೆ ಕೈಯಲ್ಲಿರುವ ಮೂರು ಸಿನಿಮಾ ಮುಗಿಸಿದ ಬಳಿಕವಷ್ಟೇ ಬೇರೆ ಕಥೆಗಳನ್ನು ಒಪ್ಪುವುದಾಗಿ ಹೇಳುವ ಅವರು, ನವೆಂಬರ್‌ವರೆಗೂ ಯಾವುದನ್ನೂ ಒಪ್ಪುವುದಿಲ್ಲ. ಆ ಬಳಿಕ ಕೆಲ ಕಥೆಗಳಿಗೆ ಸಹಿ ಹಾಕುತ್ತೇನೆ ಎನ್ನುತ್ತಾರೆ. “ನನಗೆ ಇದುವರೆಗೆ ಎಲ್ಲಾ ತರಹದ ಕಥೆಗಳೂ ಬರುತ್ತಿವೆ. ಹೆಚ್ಚು ಹಾರರ್ ಕಥೆಗಳೇ ಬಂದಿವೆ. ಆದರೆ, ವೈಯಕ್ತಿಕವಾಗಿ ನನಗೆ ಹಾರರ್ ಕಥೆಗಳು ಇಷ್ಟವಿಲ್ಲ. ಬೇರೆ ರೀತಿಯ ಕಥೆ ಇದ್ದರೆ, ಪಾತ್ರದಲ್ಲಿ ವಿಭಿನ್ನತೆ ಎನಿಸಿದರೆ ಖಂಡಿತವಾಗಿ ಮಾಡ್ತೀನಿ. ಎಷ್ಟೋ ಜನ “ಅಲಮೇಲಮ್ಮ’ ನೋಡಿ, ನೀವು ಲೋಕಲ್ ಮಾಸ್ ಕಾಮಿಡಿ ಪಾತ್ರಕ್ಕೆ ಸೂಟ್ ಅಂತಾರೆ. ಕೆಲವು ಬೇರೆ ಭಾಷೆಯ ಕೆಲ ನಟರಿಗೆ ಹೋಲಿಸುತ್ತಿದ್ದಾರೆ. ಆದರೆ, ಅವರೆಲ್ಲರೂ ಸೀನಿಯರ್. ನನ್ನನ್ನು ಅವರಿಗೆ ಹೋಲಿಸುವುದು ಸರಿಯಲ್ಲ. ನಾನಿನ್ನೂ ಪ್ರೂವ್ ಮಾಡೋಕೆ ಐದಾರು ವರ್ಷ ಬೇಕು. ಆದರೆ, ಆನ್‌ಲೈನ್ ಕಾಮೆಂಟ್ಸ್ ನೋಡಿ ಖುಷಿಯಂತೂ ಆಗಿದೆ’ ಎನ್ನುತ್ತಾರೆ ರಿಷಿ.
“ನನಗೆ ಆಫ್ಬೀಟ್ ಸಿನಿಮಾ ಅಂದರೆ ಇಷ್ಟ. ಕಲಾತ್ಮಕ, ಕಮರ್ಷಿಯಲ್ ಎಂಬುದನ್ನು ನಂಬೋದಿಲ್ಲ. ಸಿನಿಮಾ ಸಿನಿಮಾನೇ. ಕಥೆಯಲ್ಲಿ ಹೊಸತಿದ್ದರೆ ಸಾಕು. ನನ್ನ ಮುಂದಿನ ಸಿನಿಮಾಗಳೆಲ್ಲವೂ ಕಥೆಯಲ್ಲಿ ಗಟ್ಟಿಯಾಗಿರುತ್ತವೆ ಎಂಬ ಮಾತು ಕೊಡ್ತೀನಿ. ಇನ್ನೊಂದು ಸ್ಕ್ರಿಪ್ಟ್ ಕೂಡ ಬಂದಿದೆ. ಬಹುಶಃ ಅದು ಕನ್ನಡ ಸಿನಿಮಾರಂಗಕ್ಕೆ ಬೇರೆಯದ್ದೇ ಸಿನಿಮಾ ಎನಿಸಿಕೊಳ್ಳಲಿದೆ. ಅದು ಬಾಲಿವುಡ್‌ನ ಪ್ರೊಡಕ್ಷನ್‌ನಿಂದ ಬಂದ ಕಥೆ. ಇಸ್ಲಾಂವುದ್ದೀನ್ ಎಂಬುವರು ಕಥೆ ಹೇಳಿದ್ದಾರೆ. ಅವರು ಶೇಖರ್ ಕಪೂರ್ ಬಳಿ ಕೆಲಸ ಮಾಡಿದ್ದರು. ಈಗ ಅವರು ಹೇಳಿದ ಕಥೆಯನ್ನು ಕನ್ನಡದಲ್ಲಿ ಮಾಡಬೇಕು ಅಂದುಕೊಂಡಿದ್ದಾರೆ. ಸದ್ಯ ನನ್ನ ಕೈಯಲ್ಲಿರುವ ಮೂರು ಚಿತ್ರ ಮುಗಿಸಿ, ಆಮೇಲೆ ಆ ಸಿನಿಮಾ ಮಾಡ್ತೀನಿ. ಅದಲ್ಲದೆ, ಮತ್ತೂಂದು ಸ್ಕ್ರಿಪ್ಟ್ ಕೂಡ ಕೇಳಿದ್ದೇನೆ. ಅದು “ಉಳಿದವರು ಕಂಡಂತೆ’, “ರಾಮಾ ರಾಮಾ ರೇ’ ಸಿನಿಮಾ ಜಾನರ್‌ಗೆ ಸೇರಿದಂತಹ ಕಥೆ. ಅದಕ್ಕಾಗಿ ನಾನು ಕಾಯುತ್ತಿದ್ದೇನೆ ಎಂದಷ್ಟೇ ಹೇಳುತ್ತಾರೆ ರಿಷಿ.
ವಿಜಯ್ ಭರಮಸಾಗರ