ಇತ್ತೀಚೆಗೆ ಕನ್ನಡ ಚಿತ್ರರಂಗದಲ್ಲಿ ಅಚ್ಚ ಕನ್ನಡದ ಶೀರ್ಷಿಕೆಗಳು ಜನಪ್ರಿಯವಾಗುತ್ತಿವೆ. ಆ ಸಾಲಿಗೆ ಇದೀಗ “ಸಾರ್ವಜನಿಕರಿಗೆ ಸುವರ್ಣಾವಕಾಶ’ ಚಿತ್ರವೂ ಸೇರಿದೆ. ರಿಷಿ ಈ ಚಿತ್ರದ ಹೀರೋ. ಅವರಿಗಿದು ನಾಲ್ಕನೇ ಸಿನಿಮಾ. ಇನ್ನು, ಈ ಚಿತ್ರಕ್ಕೆ “ಗುಳ್ಟು’ ಖ್ಯಾತಿಯ ಜನಾರ್ದನ್ ಚಿಕ್ಕಣ್ಣ ಹಾಗೂ ಎನ್.ಹರಿಕೃಷ್ಣ ಕಥೆ ಮತ್ತು ಚಿತ್ರಕಥೆ ಒದಗಿಸಿದ್ದಾರೆ. ಅನೂಪ್ ರಾಮಸ್ವಾಮಿ ನಿರ್ದೇಶಕರು.
ಪ್ರಶಾಂತ್‌ರೆಡ್ಡಿ, ದೇವರಾಜ್ ಆರ್., ಜನಾರ್ದನ್ ಚಿಕ್ಕಣ್ಣ ನಿರ್ಮಾಪಕರು. ಈಗಾಗಲೇ ಚಿತ್ರೀಕರಣ ಮುಗಿಸಿರುವ ಚಿತ್ರತಂಡ, ಇತ್ತೀಚೆಗೆ ಮೊದಲ ವಿಡಿಯೋ ಸಾಂಗ್ ಬಿಡುಗಡೆ ಮಾಡಿದ್ದು, ಎಲ್ಲೆಡೆಯಿಂದಲೂ ಉತ್ತಮ ಮೆಚ್ಚುಗೆ ಸಿಕ್ಕಿದೆ. ಇದು ಸಹಜವಾಗಿಯೇ ಚಿತ್ರತಂಡದ ಖುಷಿಗೆ ಕಾರಣವಾಗಿದೆ. ಮಿಥುನ್ ಮುಕುಂದನ್ ಸಂಗೀತವಿರುವ “ದೇವರೆ ದೇವರೆ..’ ಹಾಡನ್ನು ರ್ಯಾಪರ್ ಅಲೋಕ್ ಹಾಗು ನಿರ್ದೇಶಕ ಅನೂಪ್ ಬರೆದಿದ್ದಾರೆ.
ಈ ಚಿತ್ರದ ಮೊದಲ ವಿಡಿಯೋ ಹಾಡನ್ನು ಅಲೋಕ್ ಹಾಗು ಅರ್ಪಿತ್ ಹಾಡಿದ್ದಾರೆ. ಇಡೀ ಹಾಡಿಗೆ ಸೆಟ್ ಹಾಕಿ ಚಿತ್ರೀಕರಿಸಿದ್ದು, ಮೊದಲ ಬಾರಿಗೆ ಹೊಸ ಶೈಲಿಯ ರ್ಯಾಪರ್ ಹಾಡನ್ನು ಚಿತ್ರೀಕರಿಸಲಾಗಿದೆ. ಚೆನ್ನೈ ಮೂಲದ ಶ್ರೀಧರ್ ಈ ಹಾಡಿಗೆ ನೃತ್ಯ ಸಂಯೋಜಿಸಿದ್ದಾರೆ. ಚಿತ್ರದಲ್ಲಿ ನಾಯಕ ರಿಷಿ ಅವರಿಗೆ ಧನ್ಯಾ ಬಾಲಕೃಷ್ಣ ನಾಯಕಿಯಾಗಿದ್ದಾರೆ. ಇದು ಇವರ ಮೊದಲ ಚಿತ್ರ.
ಈ ಹಿಂದೆ ತಮಿಳು, ತೆಲುಗು ಹಾಗು ಮಲಯಾಳಂ ಚಿತ್ರಗಳಲ್ಲಿ ನಟಿಸಿದ್ದಾರೆ. “ಇದೊಂದು ಕಾಮಿಡಿ ಥ್ರಿಲ್ಲರ್ ಶೈಲಿಯ ಚಿತ್ರವಾಗಿದ್ದು, ನಾಯಕ ತನ್ನ ಜೀವನದಲ್ಲಿ ಗೊತ್ತಿಲ್ಲದಂತೆ ಸಮಸ್ಯೆಯೊಂದರಲ್ಲಿ ಸಿಲುಕಿಕೊಳ್ಳುತ್ತಾನೆ. ಅದರಿಂದ ಹೊರಬರಲು ಹೇಗೆಲ್ಲ ಹೆಣಗಾಡುತ್ತಾನೆ. ಅಂತಿಮವಾಗಿ ಏನಾಗುತ್ತದೆ? ಎಂಬುದುದೇ ಚಿತ್ರದ ಸಾರಾಂಶ. ನಾಯಕ ರಿಷಿ ಅವರಿಲ್ಲಿ ಅಂತಿಮ ವರ್ಷದ ಎಂಬಿಎ ಓದುತ್ತಿರುವ ಹುಡುಗನ ಪಾತ್ರ ನಿರ್ವಹಿಸಿದ್ದಾರೆ.
ನಾಯಕಿ ಧನ್ಯಾ ಅವರದು ಎಂಬಿಎ ಓದುತ್ತಿರುವ ಸಂಪ್ರದಾಯಸ್ಥ ಬ್ರಾಹ್ಮಣ ಮನೆತನದ ಹುಡುಗಿಯ ಪಾತ್ರವಂತೆ. ಉಳಿದಂತೆ ಚಿತ್ರದಲ್ಲಿ ದತ್ತಣ್ಣ, ರಂಗಾಯಣ ರಘು, ಮಿತ್ರ, ಶಾಲಿನಿ, ಜಯ, ಸಿದ್ದು ಮೂಲೆಮನೆ ಇತರರು ನಟಿಸಿದ್ದಾರೆ. ಚಿತ್ರಕೆಕ ವಿಘ್ನೇಶ್ ರಾಜ್ ಛಾಯಾಗ್ರಹಣವಿದೆ. ಶಾಂತ ಕುಮಾರ್ ಸಂಕಲನವಿದೆ. ವರದರಾಜ್ ಕಲಾ ನಿರ್ದೇಶನ ಮತ್ತು ವಿಕ್ರಂ ಮೋರ್ ಸಾಹಸ ನಿರ್ದೇಶನವಿದೆ. ಬೆಂಗಳೂರು ಮತ್ತು ವಯನಾಡು ಸುತ್ತಮುತ್ತ ಚಿತ್ರೀಕರಣ ನಡೆದಿದೆ.