ಮುಂಬೈ: ಪ್ಲೇ ಆಫ್ ಟಿಕೆಟ್ ಖಾತ್ರಿ ಪಡಿಸಲು ಗೆಲ್ಲಲೇ ಬೇಕಾದ ಪಂದ್ಯವನ್ನು ಡೆಲ್ಲಿ ಕ್ಯಾಪಿಟಲ್ಸ್ ಕಳೆದುಕೊಂಡಿದೆ. ಮುಂಬೈ ವಿರುದ್ಧ ಶನಿವಾರ ರಾತ್ರಿ ನಡೆದ ಪಂದ್ಯದಲ್ಲಿ ರಿಷಭ್ ಪಂತ್ ಬಳಗ ಐದು ವಿಕೆಟ್ ಅಂತರದಿಂದ ಸೋಲನುಭವಿಸಿದೆ.
ಗೆಲ್ಲಬಹುದಾಗಿದ್ದ ಪಂದ್ಯವನ್ನು ಡೆಲ್ಲಿ ಕ್ಯಾಪಿಟಲ್ಸ್ ತಂಡ ಕಳಪೆ ಫೀಲ್ಡಿಂಗ್ ಮತ್ತು ಕಳಪೆ ಡಿಆರ್ ಎಸ್ ನಿರ್ಧಾರದಿಂದ ಸೋಲಬೇಕಾಯಿತು. ಮುಂಬೈ ಬ್ಯಾಟರ್ ಟಿಮ್ ಡೇವಿಡ್ ವಿರುದ್ಧ ಡಿಆರ್ ಎಸ್ ತೆಗೆದುಕೊಳ್ಳದೇ ಇದ್ದಿದ್ದು ಡೆಲ್ಲಿ ತಂಡಕ್ಕೆ ದುಬಾರಿಯಾಯಿತು.
ಶನಿವಾರ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ನ ಟಿಮ್ ಡೇವಿಡ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ರಿಷಭ್ ಪಂತ್ ಡಿಆರ್‌ಎಸ್ ಬಳಸದಿರುವ ಕಾರಣವನ್ನು ಬಹಿರಂಗಪಡಿಸಿದ್ದಾರೆ.
“ಏನೋ ತಾಗಿದೆ ಎಂದು ನಾನು ಭಾವಿಸಿದೆ. ಆದರೆ ಸರ್ಕಲ್ ನಲ್ಲಿ ನಿಂತಿದ್ದ ಎಲ್ಲರಿಗೂ ಮನವರಿಕೆಯಾಗಲಿಲ್ಲ. ಹೀಗಾಗಿ ನಾನು ಮೇಲ್ಮನವಿ ಸಲ್ಲಿಸಲಿಲ್ಲ” ಎಂದು ಪಂತ್ ಪಂದ್ಯದ ಬಳಿಕ ಹೇಳಿದರು.
“ಇದು ಒತ್ತಡದ ಬಗ್ಗೆ ಅಲ್ಲ. ನಾವು ಉತ್ತಮ ಕಾರ್ಯನಿರ್ವಹಣೆ ಮತ್ತು ಯೋಜನೆಯನ್ನು ಮಾಡಬಹುದಿತ್ತು. ತಪ್ಪುಗಳಿಂದ ಕಲಿಯಬೇಕು ಮತ್ತು ಮುಂದಿನ ವರ್ಷ ಬಲಶಾಲಿಯಾಗಿ ಹಿಂತಿರುಗಬೇಕು. ಇಂದು ನಾವು 5-7 ರನ್ ಕಡಿಮೆ ಗಳಿಸಿದೆವು. ಆದರೆ ನಾವು ನಿಜವಾಗಿಯೂ ಚೆನ್ನಾಗಿ ಬೌಲ್ ಮಾಡಿದ್ದೇವೆ. ನಾವು ಪಂದ್ಯಾವಳಿಯ ಉದ್ದಕ್ಕೂ ಚೆನ್ನಾಗಿ ಬೌಲ್ ಮಾಡಿದ್ದೇವೆ, ಆದರೆ ಕೊನೆಗೆ ಇಬ್ಬನಿ ಕಾಡಿತು. ಕೊನೆಯಲ್ಲಿ ಮತ್ತು ನಾವು ನಮ್ಮ ಯೋಜನೆಗೆ ತಕ್ಕಂತೆ ಬೌಲಿಂಗ್ ಮಾಡಲಿಲ್ಲ” ಎಂದು ಪಂತ್ ಮುಂಬೈ ವಿರುದ್ಧ ಸೋಲಿನ ಕಾರಣ ತಿಳಿಸಿದರು.
ಇದನ್ನೂ ಓದಿ:ಹೈದರಾಬಾದ್-ಪಂಜಾಬ್ ಲಾಸ್ಟ್ ಶೋ; ಇಂದು ಕೊನೆಯ ಲೀಗ್ ಪಂದ್ಯ ; ಕೇವಲ ಔಪಚಾರಿಕ ಮುಖಾಮುಖಿ
ಡೆಲ್ಲಿ ಸೋಲಿನೊಂದಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ನಾಲ್ಕನೇ ತಂಡವಾಗಿ ಪ್ಲೇ ಆಫ್ ಗೆ ಎಂಟ್ರಿ ನೀಡಿತು. ಗುಜರಾತ್ ಟೈಟಾನ್ಸ್, ರಾಜಸ್ಥಾನ ರಾಯಲ್ಸ್, ಲಕ್ನೋ ಸೂಪರ್ ಜೈಂಟ್ಸ್ ಪ್ಲೇ ಆಫ್ ಪ್ರವೇಶಿಸಿದ ಇತರ ತಂಡಗಳು.