ಡೆಹ್ರಾಡೂನ್: ಶುಕ್ರವಾರ ಮುಂಜಾನೆ ಸಂಭವಿ ಸಿದ ಕಾರು ಅಪಘಾತದ ಬಳಿಕ ಡೆಹ್ರಾಡೂನ್‌ನ “ಮ್ಯಾಕ್ಸ್ ಹಾಸ್ಪಿಟಲ್’ಗೆ ದಾಖಲಾಗಿದ್ದ ರಿಷಭ್ ಪಂತ್ ಅವರ ಆರೋ ಗ್ಯದಲ್ಲಿ ಗಮನಾರ್ಹ ಚೇತರಿಕೆ ಕಂಡುಬಂದಿದೆ. ಹೀಗಾಗಿ ಅವರನ್ನು ತುರ್ತು ನಿಗಾ ಘಟಕದಿಂದ ಖಾಸಗಿ ವಾರ್ಡ್‌ಗೆ ಸ್ಥಳಾಂತರಿಸಲಾಗಿದೆ ಎಂದು ಆಸ್ಪತ್ರೆಯ ಪ್ರಕಟನೆ ತಿಳಿಸಿದೆ.
“ರಿಷಭ್ ಪಂತ್ ಆರೋಗ್ಯದಲ್ಲಿ ಸುಧಾರಣೆ ಕಂಡುಬಂದಿದೆ. ಹೀಗಾಗಿ ಅವರನ್ನು ರವಿವಾರ ಸಂಜೆ ಐಸಿಯುನಿಂದ ಖಾಸಗಿ ವಾರ್ಡ್‌ಗೆ ವರ್ಗಾಯಿಸಲಾಗಿದೆ. ಅವರ ಎಂಆರ್‌ಐ ಸ್ಕ್ಯಾನಿಂಗ್ ಬಗ್ಗೆ ಈವರೆಗೆ ಯಾವುದೇ ತೀರ್ಮಾನಕ್ಕೆ ಬರಲಾಗಿಲ್ಲ. ಕಾಲಿನ ನೋವು ವಾಸಿಯಾಗಬೇಕಷ್ಟೇ…’ ಎಂದು ಆಸ್ಪತ್ರೆಯ ಪ್ರಕಟನೆ ತಿಳಿಸಿದೆ.
ಉತ್ತರಾಖಂಡದ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ರವಿವಾರ ಆಸ್ಪತ್ರೆಗೆ ತೆರಳಿ ರಿಷಭ್ ಪಂತ್ ಆರೋಗ್ಯ ವಿಚಾರಿಸಿದರು. ಇದಕ್ಕೂ ಮುನ್ನ ಮಾಧ್ಯಮದವರೊಂದಿಗೆ ಮಾತಾಡಿದ ಡಿಡಿಸಿಎ ನಿರ್ದೇಶಕ ಶ್ಯಾಮ್ ಶರ್ಮ, ರಸ್ತೆಯಲ್ಲಿ ಭಾರೀ ಗಾತ್ರದ ಗುಂಡಿ ಇದ್ದುದೇ ಈ ಅಪಘಾತ ಸಂಭವಿಸಲು ಮುಖ್ಯ ಕಾರಣ ಎಂಬುದಾಗಿ ಹೇಳಿದ್ದರು.
ಎಚ್ಚರಿಕೆ: ಕಪಿಲ್ ಸಲಹೆ
ಹೊಸದಿಲ್ಲಿ: ರಸ್ತೆ ಅಪಘಾತಕ್ಕೆ ಸಿಲುಕಿದ ರಿಷಭ್ ಪಂತ್ ಚೇತರಿಸಿಕೊಳ್ಳುತ್ತಿರುವುದು ಸಮಾಧಾನಕರ ಸಂಗತಿ ಎಂಬುದಾಗಿ ಮಾಜಿ ನಾಯಕ ಕಪಿಲ್‌ದೇವ್ ಹೇಳಿದ್ದಾರೆ. ಈ ಸಂದರ್ಭದಲ್ಲಿ ಯುವ ಕ್ರಿಕೆಟಿಗರ ಪ್ರಯಾಣದ ಕುರಿತು ಅಮೂಲ್ಯ ಸಲಹೆಗಳನ್ನೂ ನೀಡಿದ್ದಾರೆ.
“ನೀವೇ ಕಾರು ಚಲಾಯಿಸಿಕೊಂಡು ಹೋಗುವುದು ಸೂಕ್ತವಲ್ಲ. ಇದಕ್ಕೆ ಪರಿಣಿತ ಚಾಲಕರನ್ನು ಇರಿಸಿಕೊಳ್ಳಿ. ನಿಮ್ಮ ಬಳಿ ಉತ್ತಮ ದರ್ಜೆಯ ಕಾರುಗಳು ಇರಬಹುದು. ಆದರೆ ನೀವೇ ಒಂಟಿಯಾಗಿ ಚಲಾಯಿಸಿಕೊಂಡು ಹೋಗುವುದು ಸರಿಯಲ್ಲ. ಇದು ನಿಮ್ಮ ಪಾಲಿನ ಹವ್ಯಾಸ ಆಗಿರಬಹುದು, ಅಥವಾ ಖುಷಿ ಕೊಡುವ ಸಂಗತಿ ಆಗಿರಬಹುದು. ನಿಮ್ಮ ವಯಸ್ಸಿನಲ್ಲಿ ಇವೆಲ್ಲ ಸಹಜ. ಆದರೆ ನಿಮಗೂ ಜವಾಬ್ದಾರಿ ಇದೆ ಎಂಬುದನ್ನು ಮರೆಯಬಾರದು. ನಿಮ್ಮ ಬಗ್ಗೆ ನೀವೇ ಎಚ್ಚರಿಕೆ ತೆಗೆದುಕೊಳ್ಳಬೇಕಿದೆ’ ಎಂದು ಕಪಿಲ್ ಹೇಳಿದರು.