ನವದೆಹಲಿ: ಟೀಮ್ ಇಂಡಿಯಾ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ರಿಷಭ್ ಪಂತ್ ಅಪಘಾತದ ಬಳಿಕ ಚೇತರಿಕೆ ಆಗುತ್ತಿದ್ದಾರೆ. ಈ ವರ್ಷ ಏಕದಿನ ವಿಶ್ವಕಪ್ ಹಾಗೂ ಏಷ್ಯಾಕಪ್ ಗೆ ಪಂತ್ ಲಭ್ಯವಾಗಬಹುದು ಎನ್ನುವ ನಿರೀಕ್ಷೆಯಲ್ಲಿ ಇದ್ದ ಕ್ರಿಕೆಟ್ ಪ್ರೇಮಿಗಳಿಗೆ ನಿರಾಶೆಯಾಗುವ ಅಪ್ಡೇಟ್ ವೊಂದು ಹೊರಬಿದ್ದಿದೆ.
ಡಿ.30, 2022 ರಂದು ರಿಷಭ್ ಅವರ ಕಾರು ಅಪಘಾತಕ್ಕೀಡಾಗಿ ಅವರಿಗೆ ಗಂಭೀರ ಸ್ವರೂಪದ ಗಾಯಗಳಾಗಿತ್ತು. ಇದಾದ ಬಳಿಕ ಪಂತ್ ಚೇತರಿಕೆ ಆಗುತ್ತಿದ್ದಾರೆ. ಇತ್ತೀಚೆಗೆ ತಮ್ಮ ಐಪಿಎಲ್ ತಂಡ ಡೆಲ್ಲಿ ಕ್ಯಾಪಿಟಲ್ಸ್ ಪಂದ್ಯವನ್ನು ನೋಡಲು ಬಂದಿದ್ದರು.
ಪಂತ್ ಸಂಪೂರ್ಣವಾಗಿ ಚೇತರಿಕೆ ಆಗಲು ಇನ್ನೂ 7-8 ತಿಂಗಳು ಬೇಕಾಗಬಹುದು. ಅವರು ಏಕದಿನ ವಿಶ್ವಕಪ್ ಹಾಗೂ ಏಷ್ಯಾಕಪ್ ಎರಡು ಮಹತ್ವದ ಟೂರ್ನಿಯಿಂದ ಹೊರ ಬಿದ್ದಿದ್ದಾರೆಂದು ಕ್ರಿಕ್ ಬಜ್ ವರದಿ ಮಾಡಿದೆ.
ಇದನ್ನೂ ಓದಿ: ಸೀಮೆಎಣ್ಣೆ ಪೂರೈಕೆಯಾಗದೆ ಎರಡು ತಿಂಗಳು: ಸಂಕಷ್ಟದಲ್ಲಿ ನಾಡದೋಣಿ ಮೀನುಗಾರರು
ಪಂತ್ ವೇಗವಾಗಿ ಚೇತರಿಕೆ ಆಗುತ್ತಿದ್ದಾರೆ. ಆದರೆ ಕ್ರಿಕೆಟ್ ಗೆ ಫಿಟ್ ಆಗಲು 7-8 ತಿಂಗಳುಗಳು ಬೇಕಾಗುತ್ತದೆ. ಇದಲ್ಲದೆ ಅವರು ವಿಕೆಟ್ ಕೀಪಿಂಗ್ ಮಾಡಲು ಇನ್ನೂ ಹೆಚ್ಚು ಸಮಯ ತೆಗೆದುಕೊಳ್ಳಬಹುದು ಎಂದು ವರದಿ ತಿಳಿಸಿದೆ.
ಏಷ್ಯಾಕಪ್ ಸೆಪ್ಟೆಂಬರ್ ನಲ್ಲಿ ನಡೆಯಲಿದ್ದು, ಆ ಬಳಿಕ ಏಕದಿನ ವಿಶ್ವಕಪ್ ಅಕ್ಟೋಬರ್ – ನವೆಂಬರ್ ನಲ್ಲಿ ನಡೆಯಲಿದೆ.
ರಿಹ್ಯಾಬ್‌ಗಾಗಿ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಗೆ ತೆರಳಿದ ನಂತರವೇ ಅವರ ವಾಪಸಾತಿಯ ನಿಖರವಾದ ಸಮಯ ತಿಳಿಯಲಿದೆ ಎಂದು ವರದಿ ಹೇಳಿದೆ.