ರಾಜ್ ಕೋಟ್: ಮಹೇಂದ್ರ ಸಿಂಗ್ ಧೋನಿ ಅವರ ಉತ್ತರಾಧಿಕಾರಿಯೆಂದೇ ಬಿಂಬಿಸಲಾಗಿದ್ದ ರಿಷಭ್ ಪಂತ್ ಮತ್ತೆ ವಿಕೆಟ್ ಹಿಂದೆ ವಿಫಲರಾಗಿದ್ದಾರೆ. ಬಾಂಗ್ಲಾ ವಿರುದ್ಧದ ಎರಡನೇ ಟಿ ಟ್ವೆಂಟಿ ಪಂದ್ಯದಲ್ಲೂ ಪಂತ್ ನಿರಾಸೆ ಅನುಭವಿಸಿದ್ದಾರೆ.
ಹೊಸದಿಲ್ಲಿ ಪಂದ್ಯದಲ್ಲಿ ಡಿಆರ್ ಎಸ್ ಮೇಲ್ಮನವಿ ವೇಳೆ ಕೆಟ್ಟ ನಿರ್ಣಯ ತೆಗೆದುಕೊಂಡಿದ್ದ ರಿಷಭ್ ರಾಜ್ ಕೋಟ್ ಪಂದ್ಯದಲ್ಲೂ ಎಡವಟ್ಟು ಮಾಡಿಕೊಂಡರು.
ಪಂದ್ಯದ ಆರನೇ ಓವರ್ ವೇಳೆ ಪಂತ್ ಈ ತಪ್ಪು ಮಾಡಿದರು. ಯುಜುವೇಂದ್ರ ಚಾಹಲ್ ಎಸೆದ ಬೌಲಿಂಗ್ ನಲ್ಲಿ ಬಾಂಗ್ಲಾ ಆರಂಭಿಕ ಆಟಗಾರ ಲಿಟನ್ ದಾಸ್ ಮುನ್ನುಗ್ಗಿ ಬಾರಿಸಲು ಮುಂದಾದರು. ಆದರೆ ಚೆಂಡು ತಪ್ಪಿ ವಿಕೆಟ್ ಕೀಪರ್ ಪಂತ್ ಬೊಗಸೆ ಕೈ ಸೇರಿತ್ತು. ಪಂತ್ ಮಿಂಚಿನ ವೇಗದಲ್ಲಿ ಸ್ಟಂಪ್ ಎಗರಿಸಿದ್ದರು ಕೂಡಾ. ಆದರೆ ಥರ್ಡ್ ಅಂಪೈರ್ ನಾಟ್ ಔಟ್ ಎಂದರು. ಕಾರಣ ಇಷ್ಟೇ, ಸ್ಟಂಪ್ ನ್ನು ದಾಟುವ ಮೊದಲೇ ಚೆಂಡನ್ನು ಪಂತ್ ಹಿಡಿದು ವಿಕೆಟ್ ಗೆ ತಾಗಿಸಿದ್ದರು. ಹೀಗಾಗಿ ನಾಟ್ ಔಟ್ ಎಂದು ತೀರ್ಪು ನೀಡಲಾಗಿತ್ತು.
ರಿಷಭ್ ಪಂತ್ ಅಜಾಗರೂಕತೆಯ ಆಟ ಕ್ರೀಡಾಭಿಮಾನಿಗಳನ್ನು ಕೆರಳಿಸಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಅಪಹಾಸ್ಯ ಮಾಡಿದ್ದಾರೆ.