Advertisement

ಕಷ್ಟಪಟ್ಟರೆ ಯಶಸ್ಸು ಖಚಿತ: ರಿಷಬ್‌ ಕಿವಿಮಾತು

02:48 PM Nov 29, 2019 | sudhir |

ಕುಂದಾಪುರ: ಸಿನೆಮಾ ರಂಗಕ್ಕೆ 15 ವರ್ಷಗಳ ಹಿಂದೆ ಪ್ರಶಾಂತ್‌ ಶೆಟ್ಟಿಯಾಗಿ ಹೋದೆ. ಆದರೆ ಕಳೆದ 3 ವರ್ಷಗಳಿಂದಷ್ಟೇ ಈ ಕ್ಷೇತ್ರದಲ್ಲಿ ಒಬ್ಬ ಗುರುತಿಸುವಂತ ವ್ಯಕ್ತಿಯಾಗಿದ್ದೇನೆ. ಸಾಮಾನ್ಯ ಪ್ರಶಾಂತ್‌ ಶೆಟ್ಟಿಯು ಸಿನೆಮಾ ರಂಗದ ರಿಷಬ್‌ ಶೆಟ್ಟಿಯಾಗಿ ಈಗ ನಿಮ್ಮ ಮುಂದೆ ನಿಂತಿರುವುದರ ಹಿಂದೆ ಅನೇಕ ಕಷ್ಟ, ಸವಾಲುಗಳಿದ್ದವು. ಯಶಸ್ಸು ಪಡಬೇಕಾದರೆ ಕಷ್ಟಪಡಲೇ ಬೇಕು. ಯಾವುದು ಅಷ್ಟು ಸುಲಭದಲ್ಲಿ ಹಾಗೂ ವೇಗವಾಗಿ ಒಲಿಯುವುದಿಲ್ಲ.

Advertisement

ಯುವಕರೇ ಕಷ್ಟಪಡಿ. ಖಂಡಿತ ತಡವಾಗಿಯಾದರೂ ಸಾಧನೆ ನಿಮ್ಮದಾಗುತ್ತದೆ ಎಂದು ಪ್ರತಿಭಾವಂತ ನಟ, ನಿರ್ದೇಶಕ ಕೆರಾಡಿಯ ರಿಷಬ್‌ ಶೆಟ್ಟಿ ಹೇಳಿದರು.

ರವಿವಾರ ಇಲ್ಲಿನ ಭಂಡಾರ್‌ಕಾರ್ ಕಾಲೇಜಿನ ಆರ್‌.ಎನ್‌. ಶೆಟ್ಟಿ ಸಭಾಭವನದಲ್ಲಿ ಕುಂದಪ್ರಭ ಸಹಯೋಗದಲ್ಲಿ ನಡೆದ ಡಾ| ಎ. ರಂಜಿತ್‌ ಕುಮಾರ್‌ ಶೆಟ್ಟಿಯವರ “ನೆನಪಿನಾಳದಿಂದ’ ಪುಸ್ತಕ ಬಿಡುಗಡೆಗೊಳಿಸಿ, ಹುಟ್ಟೂರ ಸಮ್ಮಾನ ಸ್ವೀಕರಿಸಿದ ಬಳಿಕ ಅವರು ತಮ್ಮ ಬಾಲ್ಯದಿಂದ ಇಲ್ಲಿಯವರೆಗಿನ ನೆನಪಿನ ಬುತ್ತಿಯನ್ನು ತೆರೆದಿಟ್ಟ ರೀತಿಯಿದು. ಜಾದೂಗಾರ ಓಂಗಣೇಶ್‌ ಉಪ್ಪುಂದ ಅವರ ಸಹಕಾರದೊಂದಿಗೆ ವಿಶಿಷ್ಟ ರೀತಿಯಲ್ಲಿ ಬಿಡುಗಡೆ ಮಾಡಲಾಯಿತು.

ಸಿನೆಮಾ ಇಂಡಸ್ಟಿÅಗೆ ಹೋದ ಆರಂಭದಲ್ಲಿಯೇ ದೊಡ್ಡದೊಂದು ಬಾವಿಗೆ ಬಿದ್ದಿದ್ದೆ. ಆದರೆ ಸತತ ಪರಿಶ್ರಮ, ಛಲ, ಹಠವೇ ನನ್ನನ್ನು ಈ ಮಟ್ಟಕ್ಕೆ ಬೆಳೆಸಿದೆ. ಹೆಚ್ಚಿನೆಲ್ಲ ಚಿತ್ರಗಳಿಗೆ ನನ್ನ ಸುತ್ತಮುತ್ತಲಿನ ಸಂಗತಿ, ಈ ಊರೇ ಪ್ರೇರಣೆ ಎಂದವರು ತಿಳಿಸಿದರು.

“ಅಮ್ಮನೆದುರು ಸಮ್ಮಾನ; ವಿಶೇಷ’
ಅಮ್ಮ ಹಾಗೂ ಅಣ್ಣನ ಎದುರು ಈ ಸಮ್ಮಾನ ಸ್ವೀಕರಿಸುತ್ತಿರುವುದು ನನ್ನ ಬದುಕಿನ ಅವಿಸ್ಮರಣೀಯ ಸಂಗತಿಗಳಲ್ಲಿ ಒಂದು. ಅಮ್ಮ ರತ್ನಾವತಿ (ಬೆಳ್ಳಿಯಕ್ಕ) ಹಾಗೂ ನನಗೆ ಡಾ| ರಾಜ್‌ ಕುಮಾರ್‌ ಚಿತ್ರಗಳೆಂದರೆ ಬಲು ಇಷ್ಟ. ಅವರ ಚಿತ್ರಗಳು ಕೂಡ ನನಗೆ ಪ್ರೇರಣೆ. ಶಾಲಾ – ಕಾಲೇಜು ದಿನಗಳಲ್ಲಿ “ಕಿರಿಕ್‌’ ವಿದ್ಯಾರ್ಥಿಯಾಗಿದ್ದ ನನಗೆ ಋಣಾತ್ಮಕ ವಿಚಾರಗಳಿಗೆ ಬಳಕೆಯಾಗುತ್ತಿದ್ದ ನನ್ನ ಶಕ್ತಿ- ಸಾಮರ್ಥ್ಯವನ್ನು ಧನಾತ್ಮಕವಾಗಿ ಬಳಸುವಂತೆ ಪ್ರೇರೇಪಿಸಿದ ವಸಂತ್‌ ಬನ್ನಾಡಿ, ಸುಜಯೀಂದ್ರ ಹಂದೆ, ದೋಮ ಚಂದ್ರಶೇಖರ್‌ ಅವರಂತಹ ಗುರುಗಳಿಂದ ಈ ಮಟ್ಟಕ್ಕೆ ಬೆಳೆಯಲು ಸಹಕಾರಿಯಾಯಿತು ಎನ್ನುವುದಾಗಿ ರಿಷಬ್‌ ಆ ದಿನಗಳನ್ನು ನೆನಪು ಮಾಡಿಕೊಂಡರು.

Advertisement

ಅಭಿನಂದನಾ ಮಾತುಗಳನ್ನಾಡಿದ ಪ್ರೊ| ಮೊಳಹಳ್ಳಿ ಬಾಲಕೃಷ್ಣ ಶೆಟ್ಟಿ ವೈದ್ಯರೊಬ್ಬರು ತಮ್ಮ ವೃತ್ತಿಜೀವನದಲ್ಲಾದ ಅನೇಕ ಮಹಾನ್‌ ಸಂಗತಿಗಳನ್ನು ಬರಹದ ರೂಪದಲ್ಲಿ ತೆರೆದಿಡಲು ವಿಶೇಷವಾದ ಶಕ್ತಿ ಬೇಕು ಎಂದ ಅವರು, ಪುಸ್ತಕದಲ್ಲಿರುವ ಕೆಲವೊಂದು ಸ್ವಾರಸ್ಯಕರ ವಿಚಾರಗಳನ್ನು ಹೇಳಿದರು.
ಮೂಡುಬಿದಿರೆಯ ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ| ಎಂ. ಮೋಹನ ಆಳ್ವ ಅಧ್ಯಕ್ಷತೆ ವಹಿಸಿದ್ದರು.

ಜಯಂತಣ್ಣನಿಗಾಗಿ ಕಾದಂಬರಿಯ ದ್ವಿತೀಯ ಮುದ್ರಣವನ್ನು ಕೂಡ ಅನಾವರಣಗೊಳಿಸಲಾಯಿತು.

ಕುಂದಪ್ರಭದ ಸಂಪಾದಕ ಯು.ಎಸ್‌. ಶೆಣೈ ಸ್ವಾಗತಿಸಿ ದರು. ಡಾ| ರಂಜಿತ್‌ ಕುಮಾರ್‌ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು.

“ಜಯಂತಣ್ಣನಿಗಾಗಿ ಕಾದಂಬರಿ ಸಿನೆಮಾ’
ಸದ್ಯ “ಕಥಾಸಂಗಮ’ ಚಿತ್ರದ ಕೆಲಸದಲ್ಲಿ ತೊಡಗಿಸಿಕೊಂಡಿದ್ದು, ಡಿಸೆಂಬರ್‌ ಆರಂಭದಲ್ಲಿ ಬಿಡುಗಡೆಗೊಳ್ಳಲಿದೆ. ಡಾ| ರಂಜಿತ್‌ ಕುಮಾರ್‌ ಅವರು ವೈದ್ಯರ ಅನುಭವ, ಸವಾಲುಗಳ ಕುರಿತಾಗಿ ಬರೆದ “ಜಯಂತಣ್ಣನಿಗಾಗಿ’ ಕಾದಂಬರಿ ಆಧಾರಿಸಿ ಸಿನೆಮಾವನ್ನು ಮಾಡುತ್ತೇನೆ. ಈ ಬಗ್ಗೆ ಮುಂದಿನ ವರ್ಷದ ಕೊನೆಯಲ್ಲಿ ಅಧಿಕೃತವಾಗಿ ಘೋಷಣೆ ಮಾಡುತ್ತೇನೆ. ಸಾಧ್ಯವಾದರೆ ರಕ್ಷಿತ್‌ ಶೆಟ್ಟಿಯನ್ನು ಸೇರಿಸಿಕೊಂಡು ಮೌಲ್ಯಯುತ ವೈದ್ಯರ ಸೇವೆಯನ್ನು ಗಮನದಲ್ಲಿಟ್ಟುಕೊಂಡು ಒಂದು ಒಳ್ಳೆಯ ಸಿನೆಮಾವನ್ನು ಮಾಡುತ್ತೇನೆ ಎನ್ನುವುದಾಗಿ ರಿಷಬ್‌ ಶೆಟ್ಟಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next