ಸಾಮಾನ್ಯವಾಗಿ ಯಾವುದೇ ಸಿನಿಮಾದಲ್ಲಿ ಕಲಾವಿದರು ಕ್ಯಾಮರ ಮುಂದೆ ಕೆಲಸ ಮಾಡಿದರೆ, ತಂತ್ರಜ್ಞರು ಕ್ಯಾಮರ ಹಿಂದೆ ಕೆಲಸ ಮಾಡುತ್ತಾರೆ. ಆದರೆ ರಿಷಭ್ ಶೆಟ್ಟಿ ಅಭಿನಯದ “ಹೀರೋ’ ಸಿನಿಮಾದಲ್ಲಿ ಹಾಗಲ್ಲ. ತುಂಬ ಅಪರೂಪವೆಂಬಂತೆ, ಕ್ಯಾಮರಾ ಮುಂದೆ ಕೆಲಸ ಮಾಡಿದವರೇ, ಕ್ಯಾಮರ ಹಿಂದೆ ಕೂಡ ಕೆಲಸ ಮಾಡಿದ್ದಾರೆ. ಇಡೀ ಸಿನಿಮಾ ತಂಡದಲ್ಲಿದ್ದ 24 ಜನರಲ್ಲಿ ಛಾಯಾಗ್ರಹಕ ರೊಬ್ಬರನ್ನು ಹೊರತುಪಡಿಸಿ, ಇನ್ನುಳಿದ 23 ಜನರೂ ತೆರೆ ಮುಂದೆ ಮತ್ತು ತೆರೆ ಹಿಂದೆ ಎರಡೂ ಕಡೆ ಕೆಲಸ ಮಾಡಿದ್ದಾರೆ. ಇದೇ “ಹೀರೋ’ ಸಿನಿಮಾದ ವಿಶೇಷತೆ.
ಅಂದಹಾಗೆ, ಇದಕ್ಕೆಲ್ಲ ಕಾರಣವಾಗಿದ್ದು ಕೋವಿಡ್! ಹೌದು, ಕೋವಿಡ್ ಲಾಕ್‌ಡೌನ್ ಸಡಿಲವಾಗುತ್ತಿದ್ದಂತೆ, ಸರ್ಕಾರ ಸಿನಿಮಾಗಳ ಚಿತ್ರೀಕರಣಕ್ಕೆ ಷರತ್ತುಬದ್ಧ ಅನುಮತಿ ನೀಡಿತ್ತು. ಇದೇ ಸಂದರ್ಭದಲ್ಲಿ “ಹೀರೋ’ ಚಿತ್ರತಂಡ ಕೂಡ ಚಿತ್ರೀಕರಣಕ್ಕೆ ಇಳಿದಿತ್ತು. ಕೋವಿಡ್ ಆತಂಕ ಸಹಜವಾಗಿಯೇ ಎಲ್ಲೆಡೆ ಇದ್ದ ಕಾರಣ ಅತಿ ಕಡಿಮೆ ಕಲಾವಿದರು ಮತ್ತು ತಂತ್ರಜ್ಞರನ್ನು ಬಳಸಿಕೊಂಡು “ಹೀರೋ’ ಶೂಟಿಂಗ್ ಪೂರ್ಣಗೊಳಿಸುವುದು ಚಿತ್ರತಂಡ ಮುಂದಿದ್ದ ದೊಡ್ಡ ಸವಾಲಾಗಿತ್ತು. ಆಗ ಇಡೀ ಚಿತ್ರತಂಡ ಒಗ್ಗಟ್ಟಾಗಿ ಇಂಥದ್ದೊಂದು “ಡಬಲ್ ರೋಲ್’ ಕಾರ್ಯಕ್ಕೆ ಮುಂದಾಯಿತು.
ಇದನ್ನೂ ಓದಿ:ತುಳು ಚಿತ್ರರಂಗ @50: ‘ಎನ್ನ ತಂಗಡಿ’ ಯಿಂದ ‘ಗಮ್ಜಾಲ್’ ವರೆಗೆ ಚಿತ್ರರಂಗ ನಡೆದು ಬಂದ ಪಯಣ
ಈ ಬಗ್ಗೆ ಮಾತನಾಡುವ ರಿಷಭ್ ಶೆಟ್ಟಿ, “ಕೋವಿಡ್ ಲಾಕ್‌ಡೌನ್ ಇದ್ದ ವೇಳೆ, ಏನೂ ಮಾಡೋಕೆ ಆಗದಂಥ ಸ್ಥಿತಿಯಲ್ಲಿ “ಹೀರೊ ಶೂಟಿಂಗ್ ಶುರು ಮಾಡಿದ್ದೆವು. ಆ ಸಮಯದಲ್ಲಿ ಕೇವಲ 24 ಜನರ ತಂಡ ಬೆಂಗಳೂರಿನಿಂದ ಹೊರಗೆ ಬೇರೊಂದು ಕಡೆಗೆ ಹೋಗಿ ಇಡೀ ಸಿನಿಮಾವನ್ನು ಮಾಡಿ ಮುಗಿಸಿದೆವು. ಅಲ್ಲಿ ನಮಗೆ ಬೇಕಾದ ಯಾವುದೇ ಸವಲತ್ತುಗಳಿರಲಿಲ್ಲ. ಹೀಗಿರುವಾಗ, ನಮಗೆ ಲಭ್ಯವಿದ್ದ ಅವಕಾಶ, ಸೌಲಭ್ಯಗಳನ್ನೇ ಬಳಸಿಕೊಂಡು ನಾವು ಅಂದುಕೊಂಡಂತೆ ಸಿನಿಮಾ ಮಾಡಿ ಮುಗಿಸಬೇಕಾಗಿತ್ತು. ಇದು ನಿಜಕ್ಕೂ ಒಂದು ಅದ್ಭುತ ಅನುಭವ’ ಎನ್ನುತ್ತಾರೆ.
ರಿಷಭ್ ಶೆಟ್ಟಿ ಹೇಳುವಂತೆ, “ನಮಗೆ ಸಿನಿಮಾವನ್ನು ಎಷ್ಟು ಕಡಿಮೆ ಜನರನ್ನು ಇಟ್ಟುಕೊಂಡು ಮಾಡಬೇಕಾಗಿತ್ತೋ, ಗುಣಮಟ್ಟದಲ್ಲಿ ಎಲ್ಲೂ ಕೊರತೆ ಯಾಗದಂತೆ ಸಿನಿಮಾ ಮಾಡುವುದು ಕೂಡ ಅಷ್ಟೇ ಮುಖ್ಯವಾಗಿತ್ತು. ಇಲ್ಲಿ ಸಿನಿಮಾಟೋಗ್ರಫರ್ ಒಬ್ಬರನ್ನು ಹೊರತುಪಡಿಸಿ, ಲೈಟ್ ಬಾಯ್ಸ, ಕುಕ್, ಮೇಕಪ್ ಮ್ಯಾನ್, ಕ್ಯಾಮರಾ ಅಸಿಸ್ಟೆಂಟ್‌ಗಳಿಂದ ಹಿಡಿದು ಸೆಟ್‌ನಲ್ಲಿ ಇದ್ದ ಪ್ರತಿಯೊಬ್ಬರೂ ಬೇರೆ ಬೇರೆ ಕ್ಯಾರೆಕ್ಟರ್‌ಗಳಿಗೆ ಬಣ್ಣ ಹಚ್ಚಿದ್ದಾರೆ. ಇನ್ನು ಆರ್ಟಿಸ್ಟ್‌ಗಳು ಕೂಡ ಅಷ್ಟೇ ಕ್ಯಾಮರಾ ಹಿಂದೆ ಎಲ್ಲ ಕೆಲಸವನ್ನೂ ಮಾಡಿದ್ದಾರೆ. ಆ್ಯಕ್ಟರ್ ಟೆಕ್ನೀಷಿಯನ್ಸ್ ಕೆಲಸ ಮಾಡಿದ್ದಾರೆ, ಟೆಕ್ನೀಷಿಯನ್ಸ್ ಆ್ಯಕ್ಟರ್ ಕೆಲಸ ಮಾಡಿದ್ದಾರೆ’ ಎನ್ನುತ್ತಾರೆ.
ಇದನ್ನೂ ಓದಿ:ಮಾಸ್ ಡೈಲಾಗ್ಸ್‌ನಲ್ಲಿ ಸ್ಟಾರ್ ಸಿನಿಮಾಗಳ ಅಬ್ಬರ
ರಿಷಭ್ ಅವರು ಹೇಳುವಂತೆ “ಹೀರೋ’ ಸಿನಿಮಾದ ಆರ್ಟಿಸ್ಟ್ ಮತ್ತು ಟೆಕ್ನೀಷಿಯನ್ಸ್‌ಗಳೇ ನಿಜವಾದ “ಹೀರೋ’ಗಳಂತೆ, “ಸೆಟ್‌ನಲ್ಲಿ ನಮ್ಮ ಟೀಮ್‌ನಲ್ಲಿದ್ದ 24ರಲ್ಲಿ 23 ಜನ ತೆರೆಮುಂದೆ, ತೆರೆಹಿಂದೆ ಎರಡೂ ಕಡೆ ಕೆಲಸ ಮಾಡಿದ್ದಾರೆ. ಇಷ್ಟು ಜನರಲ್ಲಿ ಯಾರೋ ಒಬ್ಬರು ಇಲ್ಲದಿದ್ದರೂ “ಹೀರೋ’ ಸಿನಿಮಾ ಇಷ್ಟು ಚೆನ್ನಾಗಿ ಬರಲು ಸಾಧ್ಯವಾಗುತ್ತಿರಲಿಲ್ಲ. ಒಂದರ್ಥದಲ್ಲಿ ಹೇಳಬೇಕು ಅಂದ್ರೆ ಇವರೇ “ಹೀರೋ’ ಸಿನಿಮಾದ ನಿಜವಾದ “ಹೀರೋ’ ಗಳು’ ಎನ್ನುವುದು ರಿಷಭ್ ಮಾತು. ಅಂದಹಾಗೆ, ಸಾಕಷ್ಟು ನಿರೀಕ್ಷೆ ಮೂಡಿಸಿರುವ ಹೀರೋ ಮಾರ್ಚ್ 5ರಂದು ತೆರೆಕಾಣುತ್ತಿದೆ. ಚಿತ್ರಕ್ಕೆ ಭರತ್ ರಾಜ್ ನಿರ್ದೇಶನವಿದೆ.
ಜಿ.ಎಸ್.ಕಾರ್ತಿಕ ಸುಧನ್