ರಿಪ್ಪನ್‌ಪೇಟೆ: ಜಾನಪದದ ಮೂಲಬೇರು ಇರುವುದು ಗ್ರಾಮೀಣ ಪ್ರದೇಶಗಳಲ್ಲಿ. ನಿಜವಾದ ಜಾನಪದರು ಅಕ್ಷರಸ್ಥರಲ್ಲ. ಅನಕ್ಷರಸ್ಥರಾದರೂ ವಿದ್ಯಾವಂತರಿಗಿಂತ ಹೆಚ್ಚಿನ ಜ್ಞಾನ ಜಾನಪದೀಯರಲ್ಲಿ ನಾವು ಕಾಣಬಹುದು ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು.
ಸಮೀಪದ ಹೆದ್ದಾರಿಪುರ ಗ್ರಾಪಂ ಆವರಣದಲ್ಲಿ ಕರ್ನಾಟಕ ಜಾನಪದ ಪರಿಷತ್, ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ, ಹೊಸನಗರ ತಾಲೂಕು ಜಾನಪದ ಉತ್ಸವ ಸಮಿತಿ, ಶಿವಮೊಗ್ಗ ನೆಹರು ಯುವ ಕೇಂದ್ರ, ನಾಡೋಜ ಡಾ| ಎಚ್.ಎಲ್.ನಾಗೇಗೌಡ ಸ್ಮರಣಾರ್ಥ ಜಾನಪದ ಲೋಕ ಬೆಳ್ಳಿಹಬ್ಬದ ಅಂಗವಾಗಿ ನಡೆದ ಜಿಲ್ಲಾ ಮಟ್ಟದ ಜಾನಪದ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಆಧುನಿಕತೆಯ ಭರಾಟೆಯಲ್ಲಿ ನಮ್ಮನ್ನು ನಾವು ಕಳೆದುಕೊಳ್ಳುತ್ತಿದ್ದೇವೆ. ಜನರ ನಡುವೆ ಬದುಕಬೇಕಾದ ನಾವು ಅಂತರ ಕಾಯ್ದುಕೊಳ್ಳುತ್ತಿರುವುದು ವಿಷಾದನೀಯ. ಅದರಲ್ಲೂ ಪ್ರಚಾರದ ಗೀಳಿನಿಂದ ನಮ್ಮ ನೈಜ ಕಲೆಯನ್ನು ಮರೆಮಾಚುತ್ತಿದ್ದೇವೆ.
ಈಗಲೂ ಗ್ರಾಮೀಣ ಪ್ರದೇಶಗಳಲ್ಲಿ ಸಾಕಷ್ಟು ಜನ ಕಲಾವಿದರು ಇದ್ದಾರೆ. ಅಂತಹವರನ್ನು ಗುರುತಿಸುವ ಕಾರ್ಯ ಅಗಬೇಕಿದೆ ಎಂದರು. ಇತ್ತೀಚಿನ ವರ್ಷಗಳಲ್ಲಿ ಯುವಜನಾಂಗ ಯುವಜನ ಮೇಳದಂತಹ ಕಾರ್ಯಕ್ರಮದಲ್ಲಿ ಭಾಗವಹಿಸದೇ ದೂರ ಉಳಿಯುತ್ತಿದ್ದು ಸರ್ಕಾರ ಈ ಬಗ್ಗೆ ಚಿಂತಿಸಿ ಶಾಲಾ ಮಟ್ಟದಲ್ಲಿ ಗ್ರಾಮೀಣ ಜನರಲ್ಲಿ ಅಡಗಿರುವ ಕಲೆಯನ್ನು ತಮ್ಮ ಮಕ್ಕಳಿಗೆ ಕಲಿಸುವ ಮೂಲಕ ಅವರಲ್ಲಿರುವ ಪ್ರತಿಭೆಯನ್ನು ಹೊರತರುವ ಕಾರ್ಯದಲ್ಲಿ ಮುಂದಾಗಿದ್ದಾರೆ. ಆದರೆ ಯುವಕರು- ಯುವತಿಯರು ತಮ್ಮ ಗ್ರಾಮೀಣ ಸಂಸ್ಕೃತಿಯನ್ನು ದೇಶ- ವಿದೇಶಗಳಲ್ಲಿ ಪರಿಚಯಿಸಲು ಕಲೆಗಿರುವ ಶಕ್ತಿ ಬೇರೆಯಾವುದಕ್ಕೂ ಇಲ್ಲ ಎಂಬುದನ್ನು ಮನಗಂಡು ಮೌಲ್ಯಯುತ ಕಲೆಯನ್ನು ಬದುಕಿನಲ್ಲಿ ಅಳವಡಿಸಿಕೊಳ್ಳುವ ಮೂಲಕ ದೇಶಿಯ ಸಂಸ್ಕೃತಿ- ಸಂಸ್ಕಾರವನ್ನು ಮುಂದಿನ ತಲೆಮಾರಿಗೆ ಪರಿಚಯಿಸುವ ಕಾರ್ಯವಾಗಲಿ ಎಂದರು.
ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ ಡಿ.ಮಂಜುನಾಥ ಮಾತನಾಡಿ, ನಿಂದಕರು ಇರಬೇಕು. ಆಗ ನಮ್ಮ ಕಾರ್ಯಕ್ರಮಗಳು ಸರಿಯಾಗಿ ನಡೆಯಲು ಮಾರ್ಗದರ್ಶಿಯಾಗುತ್ತದೆ. ಕಲೆಗೆ ಯಾವುದೇ ಜಾತಿ ಬೇಧ ಭಾವನೆ ಇಲ್ಲ. ಕಲಾವಿದರನ್ನು ಕೀಳಾಗಿ ಕಾಣದೆ ಗೌರವಿಸುವ ಕೆಲಸ ಮಾಡಬೇಕು. ನಮ್ಮೂರಿನ ಕಲೆಯನ್ನು ಉಳಿಸುವ ಪ್ರಯತ್ನದಲ್ಲಿ ನಾವು ಹೆಚ್ಚು ಕ್ರಿಯಾಶೀಲರಾಗಬೇಕು. ಕಲೆ ಯಾರೊಬ್ಬರ ಸ್ವತ್ತು ಅಲ್ಲ ಎಂದರು.
ಸಮ್ಮೇಳನ ಸರ್ವಾಧ್ಯಕ್ಷ ಹಿರಿಯ ಜನಪದ ಕಲಾವಿದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಗುಡ್ಡಪ್ಪ ಜೋಗಿ ಮಾತನಾಡಿ, ಅನಕ್ಷರಸ್ಥರಾಗಿದ್ದರೂ ನಮ್ಮ ಪೂರ್ವಜರು ನಡೆಸಿಕೊಂಡು ಬಂದ ಜೋಗಿ, ಗೀಗಿ ಪದವನ್ನು ಇಂದಿಗೂ ನಮ್ಮ ಕುಟುಂಬದವರು ಚಿಕ್ಕವಯಸ್ಸಿನಲ್ಲಿ ಹೇಳಿಕೊಟ್ಟಂತಹ ಹಾಡುಗಳನ್ನು ಹಾಡುತ್ತಾ ಮನೆ- ಮನೆಗಳಿಗೆ ಹೋಗಿ ನಮ್ಮ ಕಲಾವೃತ್ತಿಯನ್ನು ಪ್ರದರ್ಶಿಸಿದ್ದರ ಪರಿಣಾಮ ಇಂದಿಗೂ ಮಲೆನಾಡಿನ ಮನೆಮಾತಾಗಿ ಉಳಿಯುವಂತಾಗಿದೆ ಎಂದರು.
ಜಿಪಂ ಸದಸ್ಯರಾದ ಕಲಗೋಡು ರತ್ನಾಕರ್, ಶ್ವೇತಾ ಆರ್. ಬಂಡಿ, ತಾಪಂ ಮಾಜಿ ಅಧ್ಯಕ್ಷ ತೊರೆಗದ್ದೆ ವಾಸಪ್ಪ ಗೌಡ, ಎಪಿಎಂಸಿ ನಿರ್ದೇಶಕ ಬಂಡಿ ರಾಮಚಂದ್ರ, ಹೊಸನಗರ ತಾಲೂಕು ಜಾನಪದ ಪರಿಷತ್ ಅಧ್ಯಕ್ಷ ಎನ್. ಸತೀಶ್, ತಾಲೂಕು ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಗೌರವಾಧ್ಯಕ್ಷ ಎನ್. ಮಂಜುನಾಥ ಕಾಮತ್ ಇನ್ನಿತರರು ಇದ್ದರು.
ಇದೇ ಸಂದರ್ಭದಲ್ಲಿ ಜಂಬಳ್ಳಿ ಕಲಾತಂಡದವರಿಂದ ಪೂಜಾ ಕುಣಿತ ಮತ್ತು ಪೆರ್ಡೂರು ರಾಘವೇಂದ್ರ ಮಯ್ಯ. ಸುಧೀರ್‌ಭಟ್ ಯಲ್ಲಾಪುರ ರಾಘವೇಂದ್ರ ಹೆಗಡೆ, ಶ್ರೀನಿವಾಸ ಪ್ರಭು ಅವರಿಂದ ಯಕ್ಷ-ಗಾನ-ನಾಟ್ಯವೈಭವ ಪ್ರದರ್ಶನ ಜನಾಕರ್ಷಣೆ ಗಳಿಸಿತು.
ಎನ್. ಸತೀಶ್ ಸ್ವಾಗತಿಸಿದರು.ಕುಸುಗುಂಡಿ ನಾಗರಾಜ್ ವಂದಿಸಿದರು.