ರಿಪ್ಪನ್‌ಪೇಟೆ: ಇತಿಹಾಸ ಪ್ರಸಿದ್ಧ ಜೇನುಕಲ್ಲಮ್ಮ ದೇವಿಯ ಮಂಗಳವಾರದ ವಿಶೇಷ ಜಾತ್ರಾ ಕಾರ್ಯಕ್ರಮವು ದೇವಸ್ಥಾನದ ಪ್ರಧಾನ ಅರ್ಚಕ ಭಾಸ್ಕರ್ ಜೋಯ್ಸ ಅವರ ನೇತೃತ್ವದಲ್ಲಿ ಸಡಗರ- ಸಂಭ್ರಮದೊಂದಿಗೆ ಅದ್ಧೂರಿಯಾಗಿ ಜರುಗಿತು.
ವರ್ಷದ ಭಾದ್ರಪದ ಮಾಸದ ಕೃಷ್ಣ ಪಕ್ಷದ ಪಾಡ್ಯಮಿಯಿಂದ ಅಮಾವಾಸ್ಯೆಯವರೆಗೆ ಮಂಗಳವಾರ ಮತ್ತು ಶುಕ್ರವಾರ ಇಲ್ಲಿ ದೇವಿಯ ಜಾತ್ರಾ ಮಹೋತ್ಸವ ನಡೆಯುತ್ತದೆ.
ಇಲ್ಲಿಗೆ ಭಕ್ತರು ತಮ್ಮ ಹೊಲದಲ್ಲಿ ಹಾಕಲಾದ ಬೆಳೆಗಳಿಗೆ ರೋಗರುಜಿನ ಬಾರದಂತೆ ಮತ್ತು ಹೆಚ್ಚು ಇಳುವರಿ ಬರುವಂತೆ ಹಾಗೂ ಮಕ್ಕಳಿಗೆ ರೋಗ ರುಜನ ಹರಡದಂತೆ ಕಣ್ಣಿನ ದೋಷ ಮತ್ತು ಕಜ್ಜಿ ಇನ್ನಿತರ ಮಾರಕ ರೋಗಗಳು ಬಾರದಂತೆ ದೇವಿಗೆ ಹರಕೆ, ಕಾಣಿಕೆ, ಹಣ್ಣು- ಕಾಯಿ ಸಮರ್ಪಿಸುವುದು ಮತ್ತು ಹೆಣ್ಣು ಮಕ್ಕಳಿಗೆ ಮದುವೆಯಾಗಲಿ ಎಂದು, ಮಕ್ಕಳಿಲ್ಲದವರಿಗೆ ಮಕ್ಕಳ ಭಾಗ್ಯ ಕರುಣಿಸಲೆಂದು ಪ್ರಾರ್ಥಿಸಿದರೆ ಭಕ್ತರ ಬೇಡಿಕೆ ಈಡೇರುತ್ತದೆ ಎಂಬ ನಂಬಿಕೆ ಇದೆ.
ಭಕ್ತರು ತಮ್ಮ ಹೂಲದಲ್ಲಿ ಬೆಳೆದ ಶುಂಠಿ, ಮೆಕ್ಕೆಜೋಳ, ಅಕ್ಕಿ ಹೀಗೆ ಕಾಯಿ-ಬಾಳೆಗೊನೆ ತರಕಾರಿಯನ್ನು ತಂದು ದೇವಿಗೆ ಸಮರ್ಪಿಸಿ ಹೆಚ್ಚಿನ ಇಳುವರಿ ಬರುವಂತೆ ಮತ್ತು ಮಾರಕ ರೋಗ ಬಾರದಂತೆ ಕಾಪಾಡು ಎಂದು ಪ್ರಾರ್ಥಿಸಿದರು.
ಮಾಜಿ ಸಚಿವ ಕಾಗೋಡು ತಿಮ್ಮಪ್ಪ, ಕಿಮ್ಮನೆ ರತ್ನಾಕರ್ ಹಾಗೂ ಜಿಪಂ ಸದಸ್ಯೆ ಕಲಗೋಡು ರತ್ನಾಕರ್, ತಾಪಂ ಸದಸ್ಯ ಚಂದ್ರುಮೌಳಿ ಗೌಡ, ಕೋಡೂರು ಗ್ರಾಪಂನ ಕೆ.ವೈ. ಜಯಂತ್,ಎಪಿಎಂಸಿ ಅಧ್ಯಕ್ಷ ಎಚ್.ವಿ. ಈಶ್ವರಪ್ಪ, ಉಪಾಧ್ಯಕ್ಷ ಕುನ್ನೂರು ಮಂಜಪ್ಪ (ಕುಬೇರಪ್ಪ),ತಾಪಂ ಉಪಾಧ್ಯಕ್ಷೆ ಸುಶೀಲ ರಘುಪತಿ, ತಾಪಂ ಸದಸ್ಯ ಎನ್. ಚಂದ್ರೇಶ್, ಸುಧೀರ್ ಭಟ್, ತಾರಕೇಶ್ವರ ಗೌಡ, ಚಿದಂಬರ್, ವೇದಾಂತಪ್ಪ ಗೌಡ ಇನ್ನಿತರರು ಹಾಜರಿದ್ದು ದೇವಿಗೆ ವಿಶೇಷ ಪೂಜೆ ಸಲ್ಲಿಸಿ ದರ್ಶನ ಪಡೆದರು.