ಬೆಂಗಳೂರು: ಲಿಂಗಾಯತ ಪ್ರತ್ಯೇಕ ಧರ್ಮ ವಿಚಾರ ಮುಂದಿಟ್ಟುಕೊಂಡು ವೀರಶೈವ ಮುಖಂಡರು ಹಾಗೂ ಮಠಾಧೀಶರು ಮಾತನಾಡುತ್ತಿರುವ ಧಾಟಿ ನೋಡಿದರೆ ಚುನಾವಣಾ ವೇಳೆ ರಾಜ್ಯದಲ್ಲಿ ಹಿಂಸಾಚಾರ ಮತ್ತು ಗಲಭೆ ಸೃಷ್ಟಿಯಾಗುವ ಲಕ್ಷಣಗಳು ಗೋಚರವಾಗುತ್ತಿವೆ ಎಂದು ಜಾಗತಿಕ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಎಸ್. ಎಂ. ಜಾಮದಾರ ಆತಂಕ ವ್ಯಕ್ತಪಡಿಸಿದ್ದಾರೆ.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶ್ರೀಶೈಲ ಮಠ ಹಾಗೂ ರಂಭಾಪುರಿ ಮಠದ ಶ್ರೀಗಳು ನೀಡಿರುವ ಹೇಳಿಕೆ ಜತೆಗೆ ವಿಜಯಪುರದಲ್ಲಿ ನಡೆದ ವೀರಶೈವ ಸಮಾವೇಶಲ್ಲಿ ದಿವ್ಯಾ ರಾಜೇಶ್ ಎಂಬುವರು ಪ್ರಚೋದನಕಾರಿ ಹೇಳಿಕೆ ನೀಡಿದ್ದಾರೆ.
ಕೆಲವೇ ದಿನಗಳಲ್ಲಿ ವಿಧಾನಸಭೆ ಚುನಾವಣೆ ಇರುವುದರಿಂದ ಇಂತಹ ಹೇಳಿಕೆಗಳು ಅಶಾಂತಿ ಮೂಡಿಸುತ್ತವೆ ಎಂದು ಹೇಳಿದರು.
ಮಠಾಧೀಶರ ಹೇಳಿಕೆ ಹಿನ್ನೆಲೆಯಲ್ಲಿ ಅಶಾಂತಿ ವಾತಾವರಣಕ್ಕೆ ಅವಕಾಶ ನೀಡದಂತೆ ಶಾಂತಿ ಸುವ್ಯವಸ್ಥೆ ಕಾಪಾಡಲು ಸೂಕ್ತ ಕ್ರಮ ಕೈಗೊಳ್ಳುವಂತೆ ರಾಜ್ಯ, ಕೇಂದ್ರ ಚುನಾವಣಾ ಆಯೋಗಕ್ಕೆ ನಾನು ಮನವಿ ಮಾಡುತ್ತೇನೆ ಎಂದರು. ನಮ್ಮ ಹೋರಾಟನವನ್ನು ಶ್ರೀಶೈಲ ಸ್ವಾಮೀಜಿಗಳು ದೇಶದ್ರೋಹದ ಚಟುವಟಿಕೆ ಎಂದು ಹೇಳಿದ್ದಾರೆ. ನಮ್ಮನ್ನು ಉಗ್ರರು, ತಾಲಿಬಾನಿಗಳಂತೆ ಬಿಂಬಿಸುತ್ತಿದ್ದಾರೆ. ಆದರೆ, ನಾವು ದೇಶದ್ರೋಹಿಗಳಲ್ಲ. ನಮ್ಮ ಹೋರಾಟ ಎಲ್ಲ ಹಂತಗಳಲ್ಲೂ ಶಾಂತಿ ಪಾಲನೆ ಮಾಡಿದ್ದೇವೆ. ರಂಭಾಪುರಿ ಶ್ರೀಗಳು ನನ್ನ ವಿರುದ್ಧ ಕೋರ್ಟ್ ಮೆಟ್ಟಿಲೇರುವುದಾಗಿ ಹೇಳಿದ್ದಾರೆ. ಇದು ಸ್ವಾಗತಾರ್ಹ ಎಂದು ಹೇಳಿದರು.