ಕಾಬೂಲ್ : ಅಫ್ಘಾನಿಸ್ಥಾನದ ಆಡಳಿತವನ್ನು ತಮ್ಮ ಕೈಗೆ ತೆಗೆದುಕೊಂಡ ತಾಲಿಬಾನ್ ಮುಖಂಡರು ಮೊದಲ ಬಾರಿಗೆ ಮಾಧ್ಯಮಗೋಷ್ಠಿ ನಡೆಸಿದ್ದಾರೆ.
ಮಾಧ್ಯಮಗಳ ಮುಂದೆ ಹಾಜರಾದ ತಾಲಿಬಾನ್ ವಕ್ತಾರ ಜಬೀಹುಲ್ಹಾ ಮಜ್ಹೀದ್, ತಮ್ಮ ಆಡಳಿತ ವೈಖರಿ ಬಗ್ಗೆ ಹೇಳಿಕೊಂಡರು.
“ಈ ದೇಶದ ಮಹಿಳೆಯರು ಆತಂಕ ಪಡುವ ಅಗತ್ಯವಿಲ್ಲ. ಷರಿಯಾ ಕಾನೂನಿನ ಚೌಕಟ್ಟಿನಲ್ಲಿ ಎಲ್ಲ ಹಕ್ಕುಗಳನ್ನು ಮಹಿಳೆಯರಿಗೆ ಕಲ್ಪಿಸುತ್ತೇವೆ. ಮಹಿಳೆಯರಿಗೆ ಉತ್ತಮ ಆರೋಗ್ಯ ಮತ್ತು ಶಿಕ್ಷಣ ನೀಡುತ್ತೇವೆ. ಮಹಿಳೆಯರ ವಿರುದ್ಧ ಯಾವುದೇ ದೌರ್ಜನ್ಯಗಳಿಗೆ ಅವಕಾಶ ನೀಡುವುದಿಲ್ಲ” ಎಂದು ಜಬೀಹುಲ್ಹಾ ಮಜ್ಹೀದ್ ಹೇಳಿದ್ದಾರೆ.
ಮಾಧ್ಯಮಗಳಿಗೂ ಕೆಲವೊಂದು ನಿರ್ದೇಶನ ನೀಡಿರುವ ಜಬೀಹುಲ್ಲಾ, ಇಸ್ಲಾಮಿಕ್ ಮೌಲ್ಯಗಳಿಗೆ ವಿರುದ್ಧವಾದ ಸುದ್ದಿಗಳನ್ನು ಬಿತ್ತರಿಸಬಾರದು. ಸುದ್ದಿಗಳು ನಿಷ್ಪಕ್ಷಪಾತವಾಗಿರಬೇಕು ಹಾಗೂ ರಾಷ್ಟ್ರೀಯ ಹಿತಾಸಕ್ತಿಗಳಿಗೆ ವಿರುದ್ಧವಾದ ಸುದ್ದಿಗಳನ್ನು ಯಾರೂ ಪ್ರಸಾರ ಮಾಡಬಾರದು ಎಂದಿದ್ದಾರೆ.
“ನಾವು ಯಾವುದೇ ದೇಶದೊಂದಿಗೆ ಯಾವುದೇ ಯುದ್ಧವನ್ನು ಪುನರಾವರ್ತಿಸಲು ಬಯಸುವುದಿಲ್ಲ.ನಾವು ಶಾಂತಿಯುತವಾಗಿ ಬದುಕಲು ಬಯಸುತ್ತೇವೆ ಎಂದಿರುವ ಅವರು, ಎಮಿರೇಟ್ಸ್ ಪಡೆಗಳು ಕಾಬೂಲ್‌ಗೆ ಪ್ರವೇಶಿಸಿದ ವೇಳೆ ಕೆಲವು ಗಲಭೆಕೋರರು ಇದ್ದರು. ಅವರ ವಿರುದ್ಧ ಕಾದಾಟದಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಲಿಲ್ಲ. ದಿನದಿಂದ ದಿನಕ್ಕೆ ಹೆಚ್ಚಿನ ಭದ್ರತೆಗಳು ಇರುತ್ತವೆ ಎಂದಿದ್ದಾರೆ.