Advertisement

ಕೇಂದ್ರ ಗುಪ್ತಚರ ಮಾದರಿಯಲ್ಲಿ ರಾಜ್ಯ ಗುಪ್ತಚರ ವಿಭಾಗಕ್ಕೆ ಬಲ

12:18 AM Oct 11, 2019 | mahesh |

ಮಂಗಳೂರು: ಪೊಲೀಸ್‌ ಗುಪ್ತಚರ ವಿಭಾಗವನ್ನು ಕೇಂದ್ರ ಗುಪ್ತಚರ ವಿಭಾಗದ ಮಾದರಿಯಲ್ಲಿ ಬಲಪಡಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಇದೇ ರೀತಿ ಜನಸ್ನೇಹಿ ಪೊಲೀಸ್‌ ವ್ಯವಸ್ಥೆ ಅನುಷ್ಠಾನಕ್ಕೆ ಬಂದರೆ ಗುಪ್ತಚರ ವಿಭಾಗವನ್ನು ಇನ್ನಷ್ಟು ಬಲೆ ಪಡಿಸಲು ಸಾಧ್ಯವಿದೆ ಎಂದು ರಾಜ್ಯದ ನಿವೃತ್ತ ಡಿಜಿಪಿ, ಕರ್ನಾಟಕ ಗುಪ್ತಚರ ದಳದ ಮಾಜಿ ಮುಖ್ಯಸ್ಥ ಡಾ| ಡಿ.ವಿ. ಗುರುಪ್ರಸಾದ್‌ ಹೇಳಿದರು.

Advertisement

ಅವರು ಗುರುವಾರ ಮಂಗಳೂರು ಪೊಲೀಸ್‌ ಆಯುಕ್ತರ ಕಚೇರಿಯಲ್ಲಿ “ವೀರಪ್ಪನ್‌ ಕಾರ್ಯಾಚರಣೆ ಮತ್ತು ಗೂಢ ಚರ್ಯೆ’ ಎಂಬ ವಿಷಯದ ಕುರಿತು ಉಪನ್ಯಾಸ ಮತ್ತು ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ‌ರು. ಕೇಂದ್ರ ಮಾದರಿಯಲ್ಲಿ ಗುಪ್ತಚರ ಇಲಾಖೆ ಯನ್ನು ಬಲ ಪಡಿಸಲು 2018ರಲ್ಲಿ ಪ್ರತ್ಯೇಕ ಸಿಬಂದಿ ನೇಮಕ ವ್ಯವಸ್ಥೆ ಕೈಗೊಳ್ಳಲಾಗಿದೆ. ಇದರಿಂದಾಗಿ ರಾಜ್ಯ ಗುಪ್ತಚರ ಇಲಾಖೆ ಚೆನ್ನಾಗಿ ಬಲಗೊಳ್ಳಲಿದೆ ಎಂದರು.

ಮಾಹಿತಿಯನ್ನು ಪೊಲೀಸರೂ, ಪತ್ರಕರ್ತರೂ ಸಂಗ್ರಹಿಸುತ್ತಾರೆ. ಆದರೆ ವ್ಯತ್ಯಾಸ ಇರುತ್ತದೆ. ಗುಪ್ತಚರ ವ್ಯವಸ್ಥೆಯ ಮುಖ್ಯಸ್ಥರಿಗೆ ಮುಂದೇ ನಾಗಬಹುದು ಎನ್ನುವ ಕಲ್ಪನೆ ಇರಬೇಕು; ಮಾಹಿತಿಯನ್ನು ಕಲೆ ಹಾಕುವ ಕಲೆಯನ್ನು ಕರಗತ ಮಾಡಿಕೊಳ್ಳಬೇಕು ಎಂದರು.

ಮಾಹಿತಿ ಸಂಗ್ರಹ ಕೇಂದ್ರ
ಪೊಲೀಸ್‌ ಠಾಣೆಗಳು ಮಾಹಿತಿ ಶೇಖರಣೆಯ ಮುಖ್ಯ ಕೇಂದ್ರಗಳಾಗಿವೆ. ಪೊಲೀಸ್‌ ಠಾಣೆಗಳು ಜನಸ್ನೇಹಿ ತಾಣಗಳಾದರೆ ಸಾರ್ವಜನಿಕರು ಠಾಣೆಗೆ ಭೇಟಿ ನೀಡುತ್ತಾರೆ, ವಿವಿಧ ಮಾಹಿತಿಗಳನ್ನು ಒದಗಿಸುತ್ತಾರೆ. ಪೊಲೀಸರು ನಮಗೆ ಸಹಾಯ ಮಾಡುವವರು ಎಂಬ ಭಾವನೆ ಜನರಲ್ಲಿ ಬಂದಾಗ ಜನರು ಠಾಣೆಗೆ ಭೇಟಿ ನೀಡುತ್ತಾರೆ. ಅಂತಹ ವಾತಾವರಣ ಸೃಷ್ಟಿಯಾಗ ಬೇಕು ಎಂದರು.

ಸಮಾಜದಲ್ಲಿ ಅಹಿತಕರ ಘಟನೆಗಳು ನಡೆದಾಗ ಗುಪ್ತಚರ ವ್ಯವಸ್ಥೆಯ ವೈಫಲ್ಯ ಎಂದು ಆರೋಪಿಸಲಾಗುತ್ತಿದೆ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, “ಗುಪ್ತಚರ ಇಲಾಖೆಯು ಗೂಬೆ ಕೂರಿಸುವ ಇಲಾಖೆಯಾಗಿದೆ. ಆದರೆ ಗುಪ್ತಚರ ಇಲಾಖೆ ಸಂಗ್ರಹಿಸುವ ಮಾಹಿತಿಯಿಂದ ಶೇ.99 ರಷ್ಟು ಸಂಭಾವ್ಯ ಅಹಿತಕರ ಘಟನೆಗಳನ್ನು ತಪ್ಪಿಸಲು ಸಾಧ್ಯವಾಗಿದೆ. ಮಾಹಿತಿ ಲಭ್ಯವಾಗದ ಪ್ರಮಾಣ ಶೇ.1 ರಷ್ಟು ಮಾತ್ರ ಇದ್ದರೂ ಅದನ್ನೇ ದೊಡ್ಡದು ಮಾಡಿ ಗುಪ್ತಚರ ವೈಫಲ್ಯ ಎಂದು ಆರೋಪಿಸಲಾಗುತ್ತದೆ ಎಂದರು.

Advertisement

ವೀರಪ್ಪನ್‌ನ ಕಾರ್ಯಾಚರಣೆಯನ್ನು ಮೆಲುಕು ಹಾಕಿದ ಡಾ| ಗುರುಪ್ರಸಾದ್‌, ಆತ ಬಹಳ ತೀಕ್ಷ್ಣ ಮತಿಯಾಗಿದ್ದ. ಉತ್ತಮ ಗುಪ್ತ ಚರ ಮಾಹಿತಿ ಸಂಗ್ರಹ ಕಲೆ ಆತನಲ್ಲಿತ್ತು. ಇದೇ ಕಾರಣದಿಂದ ಆತ ಹಲವು ಬಾರಿ ತಪ್ಪಿಸಿಕೊಂಡಿದ್ದ ಎಂದರು.
ಪೊಲೀಸ್‌ ಆಯುಕ್ತ ಡಾ| ಹರ್ಷ ಪಿ.ಎಸ್‌. ಸ್ವಾಗತಿಸಿದರು. ಸಂಚಾರ ದಕ್ಷಿಣ ಠಾಣೆಯ ಇನ್ಸ್‌ ಪೆಕ್ಟರ್‌ ಗುರುದತ್ತ ಕಾಮತ್‌ ವಂದಿಸಿದರು. ಡಿಸಿಪಿಗಳಾದ ಅರುಣಾಂಶುಗಿರಿ ಮತ್ತು ಲಕ್ಷ್ಮೀಪ್ರಸಾದ್‌ ವೇದಿಕೆಯಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next