Advertisement
ಬಸ್ಸು, ಲಾರಿ ಎಂದರೆ ಎಲ್ಲ ಮಕ್ಕಳಿಗೂ ಅಚ್ಚುಮೆಚ್ಚು. “ದೊಡ್ಡವರಾದ ಮೇಲೆ ಏನಾಗುತ್ತೀರಿ?’ ಎಂದು ಶಾಲೆಯ ತರಗತಿಯೊಂದರಲ್ಲಿ ಕೇಳಿದರೆ, ಹೆಚ್ಚಿನ ಮಕ್ಕಳು ಬಸ್ ಡ್ರೈವರ್ ಆಗುವ ತಮ್ಮ ಕನಸನ್ನು ಹೇಳಿಕೊಳ್ಳುತ್ತಾರೆ. ಬಹಳ ಚಿಕ್ಕಂದಿನಲ್ಲಿ ಕನಸು ಕಾಣುವಾಗ ಹೆಣ್ಣು -ಗಂಡು ಎಂಬ ಭೇದ ಇರುವುದಿಲ್ಲ, ನೋಡಿ. ಆರು ಚಕ್ರದ ಭಾರೀ ಬಸ್ಸನ್ನು ನಿರ್ವಹಿಸುವ ಡ್ರೈವರ್ ಆಗಲಿ, ಕಂಡಕ್ಟರ್ ಆಗಲಿ ಆಗಬೇಕು ಎಂದು ನಾನೂ ಕನಸು ಕಂಡಿದ್ದೆ.
Related Articles
Advertisement
ಬಸ್ಸಿನಲ್ಲಿ ಭಾರೀ ದೊಡ್ಡ ಜಗಳ ಆಗುವುದು ಯಾವುದಕ್ಕೆ ಅಂದುಕೊಂಡಿದ್ದೀರಿ? ಅದು ಬರೀ ಚಿಲ್ಲರೆ ವಿಷಯಕ್ಕೆ ಆಗುವ ಜಗಳ. ಬಸ್ ನಿರ್ವಾಹಕರು ತಕ್ಕ ಚಿಲ್ಲರೆ ವಾಪಸ್ ಕೊಡುವುದು ಎಲ್ಲ ಸಂದರ್ಭಗಳಲ್ಲಿ ಸಾಧ್ಯವಾಗುವುದಿಲ್ಲ. ಪ್ರಯಾಣಿಕರ ಬಳಿಯೂ ಸರಿಯಾದ ಮೊತ್ತ ಇರುವುದಿಲ್ಲ. ಆ ಸಂದರ್ಭವನ್ನು ಅರ್ಥಮಾಡಿಕೊಳ್ಳಬೇಕೇ ಹೊರತು, ಮತ್ತೇನೊ ಕಾರಣವೊಡ್ಡಿ ಜಗಳ ಬೆಳೆಸುತ್ತ ಹೋಗುವುದು ಸರಿಯಲ್ಲ. ಆದರೂ ಜಗಳಗಳು ಆಗಿಯೇ ಆಗುತ್ತದೆ. ಆದರೆ, ಹಿಂದಿನ ಕಾಲದಂತೆ ಈಗ, “ಸೀಟು ಕೊಡಿ’ ಎಂಬ ಕಾರಣಕ್ಕೆ ಹೆಚ್ಚು ಜಗಳ ಆಗುವುದಿಲ್ಲ. ಎಲ್ಲರೂ ತಮ್ಮ ತಮ್ಮ ಕೆಲಸಗಳ ದೃಷ್ಟಿಯಿಂದ ಬ್ಯುಸಿ ಇರುವಾಗ ಇಂತಹ ಜಗಳಗಳು ಸೃಷ್ಟಿಯಾಗುವುದು ಬಹಳ ಕಡಿಮೆ.
ಸಂಜೆಯಾಯಿತೆಂದರೆ ಕುಡಿದ ಅಮಲಿನಲ್ಲಿ ಇರುವವರೂ ಬಸ್ಸು ಹತ್ತುತ್ತಾರೆ. ಅವರದ್ದೇ ಗುಂಗಿನಲ್ಲಿ ಇರುವವರು ಕೆಲವರಾದರೆ, ತೋಚಿದ್ದೆಲ್ಲ ಮಾತನಾಡುತ್ತ ಬೊಬ್ಬೆ ಹೊಡೆಯುವವರು ಹಲವರು. ಸುಮಾರು 20 ವರ್ಷಗಳ ನನ್ನ ಅನುಭವದಲ್ಲಿ ಇಂತಹ ಹಲವಾರು ಪ್ರಸಂಗಗಳನ್ನು ನಿಭಾಯಿಸಿದ್ದೇನೆ. ಆರಂಭದಲ್ಲಿ ಎಲ್ಲ ಸಂದರ್ಭಗಳನ್ನೂ ಎದುರಿಸುವ ಧೈರ್ಯವಿರಲಿಲ್ಲ. ಆದರೆ, ಬರಬರುತ್ತ ಮನಸ್ಸನ್ನು ಗಟ್ಟಿಮಾಡಿಕೊಂಡು ಧೈರ್ಯವಾಗಿ ಮಾತನಾಡಲು ಶುರು ಮಾಡಿದೆ. ಹಲವಾರು ಸಂದರ್ಭಗಳಲ್ಲಿ ಬಸ್ಸಿನ ಚಾಲಕರೂ ನನಗೆ ಬೆಂಬಲವಾಗಿ ನಿಂತಿದ್ದಾರೆ. ಈ ಭಾರತಿ ಬಸ್ಸಿನಲ್ಲಿ ಡ್ನೂಟಿಗೆ ಬರುವ ಡ್ರೈವರ್‌ಗಳು ಸಹೃದಯಿಗಳು. ಆದರೆ, ಬಸ್ ನಿಲ್ದಾಣಗಳಲ್ಲಿ ಎಲ್ಲರೂ ಮಹಿಳೆಯರ ಪರವಾಗಿಯೇ ನಿಲ್ಲುತ್ತಾರೆ ಎಂದೇನಿಲ್ಲವಲ್ಲ. ಬಾಗಲಕೋಟೆಯಿಂದ ನನ್ನೊಡನೆ ಉಡುಪಿಗೆ ಬಂದಿದ್ದ ಉಳಿದ ಹುಡುಗಿಯರು ಸ್ವಲ್ಪ ಕಾಲ ಕೆಲಸ ಮಾಡಿದರು. ಚುಡಾಯಿಸುವಿಕೆ, ಕೆಟ್ಟ ಮಾತುಗಳನ್ನು ಹೇಳುವುದು, ಅಪಹಾಸ್ಯ ಮಾಡುವುದು, ಹೆಣ್ಣು ಎಂಬ ಕಾರಣಕ್ಕೇ ನಿಂದಿಸುವ ಅನೇಕ ಪ್ರಕರಣಗಳು ನಡೆಯುತ್ತಿದ್ದವು. ಅವರೆಲ್ಲರೂ ಈ ಉಸಾಬರಿಯೇ ಬೇಡ ಎಂದು ತಮ್ಮೂರಿಗೆ ವಾಪಸು ಹೋದರು.
ಕಂಡಕ್ಟರ್ ಎಂದರೆ ಬರೀ ಟಿಕೇಟ್ ಕೊಟ್ಟು ಹಣ ಸಂಗ್ರಹಿಸುವುದಷ್ಟೇ ಅಲ್ಲವಲ್ಲ. ಮನುಷ್ಯರೆಂದ ಮೇಲೆ ತಪ್ಪುಗಳಾಗುತ್ತವೆ. ಯಾವುದೋ ಕಾರಣಕ್ಕೆ ಬಸ್ಸು ಅಪಘಾತ ಆದಾಗ, ಪರಿಸ್ಥಿತಿ ನಿಭಾಯಿಸುವುದು ಸವಾಲೇ ಸರಿ. ಘಟನೆ ನಡೆದಾಗ, ಜನರೆಲ್ಲರೂ ಆತಂಕಗೊಳ್ಳುತ್ತಾರೆ. ಸಿಟ್ಟಿನಿಂದ ಡ್ರೈವರ್ ಮೇಲೇರಿ ಹೋಗುತ್ತಾರೆ. ಯಾರದ್ದು ತಪ್ಪು, ಸರಿ ಎಂದು ವಿವೇಚನೆಯಿಂದ ವರ್ತಿಸುವಷ್ಟು ತಾಳ್ಮೆ ಆ ಪರಿಸ್ಥಿತಿಯಲ್ಲಿ ಯಾರಿಗೂ ಇರುವುದಿಲ್ಲ. ಆಗೆಲ್ಲ ಕಂಡಕ್ಟರ್ ಮತ್ತು ಡ್ರೈವರ್ ನಿಜವಾಗಿಯೂ ಬಹಳ ತಾಳ್ಮೆಯಿಂದ ಇರಬೇಕಾಗುತ್ತದೆ. ನಾವು ಕೆಲಸ ಮಾಡುವ ಬಸ್ಸು ಮಾತ್ರವಲ್ಲ, ರಸ್ತೆ ಮೇಲೆ ನಡೆದ ಘಟನೆಗೂ ನಾವು ಸ್ಪಂದಿಸುವುದು ಧರ್ಮ ಅಲ್ಲವೆ?
ಕೆಲವು ಸಂದರ್ಭಗಳಲ್ಲಿ ನಾನು ಗಾಯಗೊಂಡವರಿಗೆ ನೆರವಾಗಿ, ಅವರನ್ನು ಆಸ್ಪತ್ರೆಗೆ ಸಾಗಿಸುವ ಕೆಲಸ ಮಾಡಿದ್ದೇನೆ. ನಮ್ಮ ಬಸ್ಸಿನ ಚಾಲಕರೂ ಎಷ್ಟೋ ಪರಿಸ್ಥಿತಿಗಳನ್ನು ನಿಭಾಯಿಸಲು ನನಗೆ ನೆರವಾಗಿದ್ದಾರೆ.
ಈ ಕೆಲಸ ಕಷ್ಟವಾದರೆ ಬಿಟ್ಟು ಬಾ- ಅಂತ ಈಗಲೂ ಅಮ್ಮ ಶಿವಲೀಲಾ ಮತ್ತು ಅಪ್ಪ ಗುರುಬಸವ ಹೇಳುತ್ತಾರೆ. ಮಗ ವಿನಾಯಕ ಈಗಾಗಲೇ ಬಸವೇಶ್ವರ ಕಾಲೇಜಿನಲ್ಲಿ 9ನೆಯ ತರಗತಿ ಓದುತ್ತಿದ್ದಾನೆ. ನನ್ನ ಅಪ್ಪ-ಅಮ್ಮ ಅಪ್ಪಟ ಕೃಷಿಕರು. ನಾನಂತೂ ಈ ವೃತ್ತಿಯ ಕಾರಣಕ್ಕಾಗಿ ಉಡುಪಿಯಲ್ಲಿಯೇ ಇದ್ದೇನೆ. ಬೆಳಗ್ಗೆ 6.40ಕ್ಕೆ ಬಸ್ಸನ್ನೇರಿದರೆ ಮತ್ತೆ ರಾತ್ರಿ 8 ಗಂಟೆಗೆ ಮನೆಬಾಗಿಲಿನಲ್ಲಿಯೇ ಬಸ್ಸಿನಿಂದ ಇಳಿಯುತ್ತೇನೆ. ರಜೆಗಳನ್ನು ಪಡೆದುಕೊಂಡು ಊರಿಗೆ ಹೋಗುವುದು, ಊರಿನಿಂದಲೂ ಮಗ, ಅಪ್ಪ, ಅಮ್ಮ, ಗಂಡ ಉಡುಪಿಗೆ ಬರುವುದು ಇದ್ದೇ ಇದೆ. ದೈನಂದಿನ ಪಯಣದ ಜೊತೆಗೆ ಬದುಕಿನ ಪಯಣವೂ ನಡೆದಿದೆ.
ರೇಖಾ ಬಾಗಲಕೋಟೆ