ಲಕ್ನೋ : ಹರಿಯಾಣದ ಜನಪ್ರಿಯ ನರ್ತಕಿ ಮತ್ತು ಬಿಗ್ ಮಾಸ್ ಸೀಸನ್ 11ರ ಸ್ಪರ್ಧಿ ಸಪ್ನಾ ಚೌಧರಿ ಅವರ ಕಾನ್ಪುರ ನತ್ಯ ಕಾರ್ಯಕ್ರಮ ಭಾರೀ ವಿವಾದಕ್ಕೆ ಕಾರಣವಾಗಿದೆ.
ಸಪ್ನಾ ಚೌಧರಿ ಅವರ ನೃತ್ಯ ಕಾರ್ಯಕ್ರಮದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯ ಕೆಲ ಗಂಭೀರ ಸಮಸ್ಯೆಗಳು ತೋರಿ ಬಂದ ಹಿನ್ನೆಲೆಯಲ್ಲಿ ಭಾರತೀಯ ಜನತಾ ಪಕ್ಷದೊಳಗೇ ಈಗ ಒಡಕು ಕಂಡು ಬಂದಿರುವುದಾಗಿ ಮಾಧ್ಯಮ ವರದಿಗಳು ಹೇಳಿವೆ.
ನೃತ್ಯ ಕಾರ್ಯಕ್ರಮದ ಟಿಕೆಟ್‌ನಲ್ಲಿ ಉತ್ತರ ಪ್ರದೇಶ ಮುಖ್ಯ ಮಂತ್ರಿ ಯೋಗಿ ಆದಿತ್ಯ ನಾಥ್ ಅವರ ಚಿತ್ರವಿದೆ. ಜೆತೆಗೆ ಬಿಜೆಪಿ ಶಾಸಕಿ ನಿಲೀಮಾ ಕಟಿಯಾರ್ ಮತ್ತು ಕಾನ್ಪುರ ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷ ಸುರೇಂದ್ರ ಮೈಥಾನಿ ಅವರ ಚಿತ್ರಗಳೂ ಇವೆ. ಈ ರೀತಿ ಮುಖ್ಯಮಂತ್ರಿಗಳ ಚಿತ್ರ ಒಂದು ಯಃಕಶ್ಚಿತ ನೃತ್ಯ ಕಾರ್ಯಕ್ರಮಕ್ಕೆ ಬಳಕೆಯಾಗಿರುವ ಬಗ್ಗೆಯೂ ಪಕ್ಷದೊಳಗೆ ಅಸಮಾಧಾನ ಭುಗಿಲೆದ್ದಿದೆ.
ಆದರೆ ಕಾನ್ಪುರ ಮೇಯರ್ ಪ್ರಮೀಳಾ ಪಾಂಡೆ ಅವರ ಪ್ರಕಾರ ಮಾಧ್ಯಮಗಳು ಅತ್ಯಂತ ಸಣ್ಣ ವಿಷಯವನ್ನು ಪರ್ವತದಷ್ಟು ದೊಡ್ಡದು ಮಾಡಿ ದುಲಾಭ ಪಡೆಯುತ್ತಿವೆ ಎಂದು ದೂರಿದ್ದಾರೆ. ಪ್ರಮೀಳಾ ಪಾಂಡೆ ಅವರು ನೃತ್ಯ ಕಾರ್ಯಕ್ರಮಕ್ಕೆ ಮುನಿಸಿಪಲ್ ಕಾರ್ಪೊರೇಶನ್ ಗ್ರೌಂಡನ್ನು ಉಚಿತವಾಗಿ ಒದಗಿಸಿ ಕಾರ್ಯಕ್ರಮದ ಉದ್ಘಾಟನೆಯನ್ನೂ ನೆರವೇರಿಸಿದ್ದಾರೆ ಎಂಬ ಆರೋಪಗಳೂ ಕೇಳಿ ಬಂದಿವೆ.
ಎಲ್ಲದಕ್ಕೂ ಮಿಗಿಲಾದ ವಿಚಿತ್ರ ಸಂಗತಿ ಎಂದರೆ ಈ ನೃತ್ಯ ಕಾರ್ಯಕ್ರಮವನ್ನು ಏರ್ಪಡಿಸಿದವರು ಕಾನ್ಪುರದ ಕಾಕಾದೇವ್ ಪ್ರದೇಶದಲ್ಲಿ ಕ್ಲಿನಿಕ್ ಹೊಂದಿರುವ ಡಾ. ಆನಂದ್ ಝಾ ಎನ್ನುವವರು.
ಇವರನ್ನು ಸಿಎಂ ಯೋಗಿ ಆದಿತ್ಯನಾಥ್ ಅವರು ಈಚೆಗೆ ಸಮ್ಮಾನಿಸಿದ್ದು ಅದರ ಸ್ಮರಣಾರ್ಥ, ಗುಹ್ಯ ರೋಗಿಗಳ ಸಹಾಯಾರ್ಥವಾಗಿ ಅವರು ಈ ಕಾರ್ಯಕ್ರಮವನ್ನು ಏರ್ಪಡಿಸಿರುವುದಾಗಿ ವರದಿಯಾಗಿದೆ.