Advertisement

ರಾಷ್ಟ್ರೀಯ ಹೆದ್ದಾರಿಯಲ್ಲಿ ಗುಂಡಿಗಳದ್ದೇ ಸವಾರಿ

12:28 AM Jul 20, 2023 | Team Udayavani |

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಈಗ ಗುಂಡಿಗಳದ್ದೇ ದರಬಾರು. ಬಹಳ ಕಡೆ ಇರುವ ಗುಂಡಿಗಳನ್ನು ತಪ್ಪಿಸಲು ಹೋಗುವ ವಾಹನ ಸವಾರರು ಅಪಘಾತಕ್ಕೆ ಸಿಲುಕುವುದು ಉಂಟು. ಮಳೆಗಾಲಕ್ಕೆ ಮುನ್ನ ರಸ್ತೆಗಳನ್ನು ದುರಸ್ತಿ ಮಾಡಬೇಕಿತ್ತು. ಕೆಲವು ಕಡೆ ತೇಪೆ ಹಾಕಿದರೂ ಮಳೆಗೆ ನಿಲ್ಲುವ ಸ್ಥಿತಿಯಲ್ಲಿಲ್ಲ. ಮಂಗಳವಾರವಷ್ಟೇ ಒಂದು ಅನಾಹುತ ಘಟಿಸಿದ್ದು, ಕೂಡಲೇ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ತನ್ನ ವ್ಯಾಪ್ತಿಯ ರಸ್ತೆಗಳ ಅಭಿವೃದ್ಧಿಗೆ ಕ್ರಮ ಕೈಗೊಳ್ಳಬೇಕಿದೆ. ಇಲ್ಲಿದೆ ದಕ್ಷಿಣ ಕನ್ನಡ ಜಿಲ್ಲೆಯ ಚಿತ್ರಣ.

Advertisement

ಎದ್ದು ಬಿದ್ದು ಸಾಗುವ ವಾಹನಗಳು!

ಬಂಟ್ವಾಳ: ಹೆದ್ದಾರಿ ಕಾಮಗಾರಿ ನಿರ್ವಹಿಸುತ್ತಿರುವ ಸಂಸ್ಥೆಯು ಕನಿಷ್ಠ ಪಕ್ಷ ಮಳೆಗಾಲದ ಸಂಚಾರಕ್ಕಾದರೂ ಸರ್ವೀಸ್‌ ರಸ್ತೆಯನ್ನು ಸಮರ್ಪಕಗೊಳಿಸಿಲ್ಲ. ಹಾಗಾಗಿ ಬಿ.ಸಿ.ರೋಡಿನಿಂದ ಅಡ್ಡಹೊಳೆವರೆಗೂ ವಾಹನಗಳು ಸರ್ಕಸ್‌ ಮಾಡುತ್ತಾ ಸಂಚರಿಸುವಂತಾಗಿದೆ.

ಕಳೆದ ವರ್ಷವೂ ಇದೇ ಸ್ಥಿತಿ ಇತ್ತು. ಆ ಸಮಸ್ಯೆ ಕಂಡಾದರೂ ಈ ಮಳೆಗಾಲಕ್ಕೆ ಸರಿಯಾಗುತ್ತದೆಂದು ಜನರು ನಿರೀಕ್ಷಿಸಿದ್ದರು. ಆದರೆ ಅದು ಹುಸಿಯಾದ ಪರಿಣಾಮ ಹೊಂಡ ಗುಂಡಿಗಳ ಜತೆಗೆ ನೀರು, ಕೆಸರು ತುಂಬಿದ ರಸ್ತೆಯಲ್ಲಿ ವಾಹನಗಳು ಸಾಗಬೇಕಿವೆ. ಹೆದ್ದಾರಿ ಬದಿಯ ಚರಂಡಿಯನ್ನೂ ಸಮರ್ಪಕಗೊಳಿಸದ ಪರಿಣಾಮ ಸಾಕಷ್ಟು ಕಡೆ ಕೃತಕ ನೆರೆಯ ಸಮಸ್ಯೆಯೂ ತಲೆದೋರಿದೆ.

ಬಿ.ಸಿ.ರೋಡಿನಿಂದ ಪಾಣೆಮಂಗಳೂರಿನ ನೆಹರೂ ನಗರದವರೆಗೆ ಹೆದ್ದಾರಿ ಕಾಮಗಾರಿ ಇನ್ನೂ ಪ್ರಾರಂಭ ವಾಗಿಲ್ಲ. ಆದರೂ ಇರುವ ಹೊಂಡಗಳು ವಾಹನಗಳ ಸವಾರರಿಗೆ ಅಪಾಯಕಾರಿಯಾಗಿ ಪರಿಣಮಿಸಿದೆ. ಸೇತುವೆಯ ಪಕ್ಕದಲ್ಲಿರುವ ದೊಡ್ಡ ಹೊಂಡವೊಂದು ದ್ವಿಚಕ್ರ ವಾಹನಗಳಿಗೆ ಅತ್ಯಂತ ಅಪಾಯಕಾರಿಯಾಗಿದೆ. ಇಲ್ಲಿ ನಿತ್ಯವೂ ಸಾಕಷ್ಟು ಬೈಕ್‌-ಸ್ಕೂಟರ್‌ಗಳು ಬೀಳುತ್ತಿವೆ.
ಪಾಣೆಮಂಗಳೂರಿನಿಂದ ಕಲ್ಲಡ್ಕದವರೆಗೂ ಹೆದ್ದಾರಿ ಸ್ಥಿತಿ ಹೇಳುವಂತೆಯೆ ಇಲ್ಲ. ಸರ್ವೀಸ್‌ ರಸ್ತೆಯಲ್ಲಿ ಹೊಂಡಗಳಿಗೆ ಹುಡಿಜಲ್ಲಿಯನ್ನು ಹಾಕಿದರೆ ಎರಡೇ ದಿನಗಳಲ್ಲಿ ಎದ್ದು ಹೋಗುತ್ತಿದೆ. ಪಾಣೆಮಂಗಳೂರು, ಮೆಲ್ಕಾರ್‌, ಮಾಣಿಗಳಲ್ಲಿ ನಿರ್ಮಾಣಗೊಂಡಿರುವ ಅಂಡರ್‌ಪಾಸ್‌ನೊಳಗೆ ನೀರು ನಿಂತು ಅಯೋಮಯವಾಗಿದೆ.

Advertisement

ಕಲ್ಲಡ್ಕದ ಬಳಿಕ ಕೊಂಚಮಟ್ಟಿಗೆ ಕಾಂಕ್ರೀಟ್‌ ರಸ್ತೆಗಳು ನಿರ್ಮಾಣವಾಗಿದ್ದು, ನಿಟ್ಟುಸಿರು ಬಿಡುವಂತಾಗಿದೆ. ಕಾಂಕ್ರೀಟ್‌ ಆಗದೇ ಇರುವ ಕಡೆಯ ಲೆಕ್ಕವನ್ನು ವಿವರಿಸುವಂತೆಯೇ ಇಲ್ಲ. ಕಲ್ಲಡ್ಕದಲ್ಲಿ ನಿರ್ಮಾಣವಾಗುತ್ತಿರುವ ಫ್ಲೈಓವರ್‌ನಿಂದಾಗಿ ಎರಡೂ ಬದಿಯ ಸರ್ವೀಸ್‌ ರಸ್ತೆಯ ಮಧ್ಯೆ ಕೆಸರು, ನೀರು ನಿಂತು ಕೆರೆಯಂತಾಗಿದೆ.

ಇನ್ನೂ ಇವೆ ಜೀವ ಹಿಂಡುವ ಗುಂಡಿಗಳು

ಪಣಂಬೂರು: ಮುಕ್ಕದಿಂದ ನಂತೂರುವರೆಗೆ ಇರುವ ಹೊಂಡಗಳ ಮುಚ್ಚುವ ಕಾರ್ಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಆರಂಭಿಸಿದ್ದರೂ ಮಂಗಳವಾರ ಬೈಕಂಪಾಡಿ ಪೆಟ್ರೋಲ್‌ ಬಂಕ್‌ ಒಂದರ ಬಳಿ ಹೊಂಡ ತಪ್ಪಿಸಲು ಯತ್ನಿಸಿದ ವಾಹನ ಸವಾರರೊಬ್ಬರು ಸಾವನ್ನಪ್ಪಿದರು. ಇಲಾಖೆಯ ವಿಳಂಬ ಧೋರ ಣೆಯೇ ಈ ಘಟನೆಗೆ ಕಾರಣ ಎಂದು ವಿವಿಧ ಸಂಘ -ಸಂಸ್ಥೆಗಳು ಆರೋಪಿಸಿದ್ದವು.

ಹೆದ್ದಾರಿಯಲ್ಲಿ ವಿವಿಧೆಡೆ ಇನ್ನೂ ಹೊಂಡ ಗಳಿದ್ದು, ದ್ವಿಚಕ್ರವಾಹನ ಸವಾರರಿಗಂತೂ ಸಿಂಹ ಸ್ನಪ್ಪ. ಹೊಂಡ ಕಂಡೊಡನೆ ವಾಹನ ಸವಾರರು ಅದನ್ನು ತಪ್ಪಿಸಲು ಪ್ರಯತ್ನಿಸಿ ಅಪಘಾತಕ್ಕೆ ಸಿಲುಕುತ್ತಿದ್ದಾರೆ. ಅದರಲ್ಲೂ ಹೊಂಡಗಳಲ್ಲಿ ನೀರು ನಿಂತರೆ ತಿಳಿಯುವುದಿಲ್ಲ. ವಾಹನ ಸವಾರರಿಗೆ ಗುಂಡಿಗಳಲ್ಲಿ ಬೀಳುವ ಅಪಾಯ ಹೆಚ್ಚು. ಅದೃಷ್ಟವಶಾತ್‌ ಹಿಂದೆ ಘನ ವಾಹನ ಇದ್ದರೆ ಬದುಕುವ ಸಾಧ್ಯತೆಯೇ ಕಡಿಮೆ ಎಂಬುದು ಹಲವು ಸಾರ್ವಜನಿಕರ ಟೀಕೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಕೋಟ್ಯಾಂತರ ರೂ.ವೆಚ್ಚ ಮಾಡಿ ರಸ್ತೆ ನಿರ್ಮಿಸಿ, ನಿವಹಣೆಗೆ ಆದ್ಯತೆ ನೀಡುತ್ತಿಲ್ಲ ಎಂಬ ಸಂಶಯ ವ್ಯಕ್ತವಾಗಿದೆ.

ಅರೆಬರೆ ಕಾಮಗಾರಿಯೇ ಕಿರಿಕಿರಿ
ಮಂಗಳೂರು ನಗರದಲ್ಲಿ ಹಾದು ಹೋಗುವ ಹೆದ್ದಾರಿಯಲ್ಲಿ ಹೊಂಡಗಳಿಗೆ ಬರವಿಲ್ಲ. ನಗರದ ಕೆಪಿಟಿ ಜಂಕ್ಷನ್‌, ನಂತೂರು ಪ್ರದೇಶದಲ್ಲಿ ರಸ್ತೆ ಪೂರ್ತಿ ಗುಂಡಿ ಬಿದ್ದ ಕಾರಣ ವಾಹನಗಳ ಸಂಚಾರ ದುಸ್ತರವೆನಿಸಿದೆ. ಕೆಪಿಟಿ ಜಂಕ್ಷನ್‌ನಲ್ಲಿ ಕೆಪಿಟಿ, ಸಕೀìಟ್‌ ಹೌಸ್‌, ಎ.ಜೆ. ಆಸ್ಪತ್ರೆ ಮತ್ತು ನಂತೂರು ಕಡೆಗೆ ರಸ್ತೆ ಕವಲೊಡೆಯುತ್ತದೆ. ಇಲ್ಲಿನ ಸಿಗ್ನಲ್‌ ದೀಪದ ಕೆಳಗೇ ರಸ್ತೆ ಗುಂಡಿಯಿಂದ ಕೂಡಿದೆ. ಸಿಗ್ನಲ್‌ ಅಳವಡಿಸಿದ ಬಳಿಕ ಸದಾ ಟ್ರಾಫಿಕ್‌ ಜಾಮ್‌ ಉಂಟಾಗುತ್ತಿದ್ದು, ಇದೀಗ ಗುಂಡಿ ಕಾರಣದಿಂದ ಸುಗಮ ವಾಹನ ಸಂಚಾರ ಮತ್ತಷ್ಟು ಕಷ್ಟವೆನಿಸಿದೆ.

ಪ್ರತೀ ವರ್ಷದಂತೆ ಈ ವರ್ಷವೂ ನಂತೂರು ಜಂಕ್ಷನ್‌ ನಲ್ಲಿ ಗುಂಡಿಗಳು ಉಂಟಾಗಿವೆ. ಬಿಕರ್ನಕಟ್ಟೆ ಕಡೆಗೆ ತೆರಳುವ ತಿರುವಿನಲ್ಲಿ ಒಂದು ಬದಿ ಪೂರ್ತಿಯಾಗಿ ಗುಂಡಿ ಆಗಿ, ಸಂಚಾರವೇ ಕಷ್ಟ. ಬಿಕರ್ನಕಟ್ಟೆ ಜಂಕ್ಷನ್‌, ಪಡೀಲ್‌, ಪಡೀಲ್‌ ಅಂಡರ್‌ಪಾಸ್‌ ಬಳಿಯೂ ಗುಂಡಿಗಳಿಗೆ ಕೊರತೆ ಇಲ್ಲ.
ಅರೆ-ಬರೆ ಕಾಮಗಾರಿ
ಮಳೆಗಾಲಕ್ಕೂ ಮುನ್ನ ನಗರದಲ್ಲಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿರ್ವಹಣೆ ದೃಷ್ಟಿಯಿಂದ ಮೇಲ್ಪದರ ಡಾಮರು ಹಾಕುವ ಬದಲು ಗುಂಡಿಗಳಿಗೆ ಮಾತ್ರ ತೇಪೆ ಹಾಕಲಾಗಿತ್ತು. ಮಳೆ ಬಂದು ತೇಪೆ ಕೊಚ್ಚಿ ಹೋದ ಬಳಿಕ ಜಲ್ಲಿ, ಜಲ್ಲಿ ಹುಡಿ, ಕಾಂಕ್ರೀಟ್‌ ಹುಡಿ, ಮಣ್ಣಿನಿಂದ ಮುಚ್ಚಲಾಗಿದೆ. ಅದೂ ಸಹ ಒಂದೇ ಮಳೆಗೆ ಕೊಚ್ಚಿ ಹೋಗಿದ್ದು, ಮತ್ತೆ ಗುಂಡಿಗಳು ಬಾಯ್ದೆರೆದು ಕೊಂಡಿವೆ.

ಪ್ರಾಧಿಕಾರವು ಮೂರು ದಿನಗಳ ಹಿಂದೆ ಕೂಳೂರು, ಪಣಂಬೂರು ಭಾಗದಲ್ಲಿ ಹೊಂಡ ಮುಚ್ಚುತ್ತಿದೆ.
ಮಳೆ ಕಡಿಮೆಯಾದೊಡನೆ ಕಾಮಗಾರಿ ಆರಂಭಿಸಿದ್ದೇವೆ. ಶೀಘ್ರವೇ ಎಲ್ಲ ಗುಂಡಿಗಳನ್ನು ಮುಚ್ಚಲಾಗುವುದು.
– ಅಬ್ದುಲ್‌ ಜಾವೇದ್‌ ಆಜ್ಮಿ, ಪ್ರಾಜೆಕ್ಟ್ ಡೈರೆಕ್ಟರ್‌

 

Advertisement

Udayavani is now on Telegram. Click here to join our channel and stay updated with the latest news.

Next