Advertisement

ಕುದರಿ ಮೇಲೆ ಸದಸ್ಯರ ಸವಾರಿ

01:22 PM Dec 09, 2017 | Team Udayavani |

ಧಾರವಾಡ: ನಿಗದಿತ ಸಮಯಕ್ಕೆ ಸಭೆಗೆ ಹಾಜರಾಗದ ತಹಶೀಲ್ದಾರ್‌ ಪ್ರಕಾಶ ಕುದರಿ ಅವರ ನಡವಳಿಕೆ ಖಂಡಿಸಿ ತಾಪಂ ಸರ್ವ ಸದಸ್ಯರು ಕೆಲ  ಇಲಾಖೆಯ ಪ್ರಗತಿ ಪರಿಶೀಲನೆ ಮಾಡದೇ ಸಾಮಾನ್ಯ ಸಭೆಯನ್ನು ಡಿ. 13ಕ್ಕೆ ಮುಂದೂಡಿದ ಘಟನೆ ಶುಕ್ರವಾರ ಇಲ್ಲಿನ ತಾಪಂ ಸಭಾಭವನದಲ್ಲಿ ನಡೆಯಿತು.

Advertisement

ತಹಶೀಲ್ದಾರ್‌ ಯಾಕೆ ಬಂದಿಲ್ಲ? ಇದು ಅವರು ಗೈರಾಗುತ್ತಿರುವ ಸತತ ಮೂರನೇ ಸಾಮಾನ್ಯ ಸಭೆ. ರೈತರ ಬೆಳೆವಿಮೆ  ಪರಿಹಾರ, ಪಡಿತರ ಚೀಟಿ ಹೀಗೆ ಎಲ್ಲದಕ್ಕೂ ಅವರಿಂದಲೇ ನಮಗೆ ಉತ್ತರ ಬೇಕು. ಅವರಿಲ್ಲ ಎಂದಾದ ಮೇಲೆ ಈ ಸಭೆಯನ್ನೇ ಮುಂದೂಡಿ ಎಂದು ತಾಪಂ  ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು. 

ತಾಪಂ ಅಧ್ಯಕ್ಷ ಮಲ್ಲನಗೌಡ ಭಾವಿಕಟ್ಟಿ ಹಾಗೂ ಇಒ ರುದ್ರಸ್ವಾಮಿ ಮಾತನಾಡಿ, ಕೋರ್ಟ್‌ ಕೇಸ್‌  ಇರುವುದರಿಂದ  ಅದನ್ನು ಮುಗಿಸಿಕೊಂಡು ಮಧ್ಯಾಹ್ನ 1:30ಕ್ಕೆ ತಹಶೀಲ್ದಾರ್‌ ಆಗಮಿಸುತ್ತಾರೆ ಎಂದು ಸಭೆಗೆ ತಿಳಿಸಿದರು. ಆಗ ತಹಶೀಲ್ದಾರ್‌ ಬಂದ  ಮೇಲೆಯೇ ಕಂದಾಯ ಇಲಾಖೆ, ಪಡಿತರ ಚೀಟಿ, ಬೆಳೆಹಾನಿ, ಬೆಳ ಪರಿಹಾರದ ವಿಷಯ ಚರ್ಚಿಸೋಣ ಎಂದು ಸದಸ್ಯರು ನಿರ್ಧರಿಸಿದರು.

ಮಧ್ಯಾಹ್ನ 2:30 ಆದರೂ ತಹಶೀಲ್ದಾರ್‌ ಸಭೆಗೆ ಹಾಜರಾಗದ್ದರಿಂದ ಅವರು  ಬಂದರೆ ಮಾತ್ರ ಸಭೆ ನಡೆಸಲು ಅವಕಾಶ ನೀಡಲಾಗುವುದು ಎಂದು ಸದಸ್ಯರು ಪಟ್ಟು  ಡಿದರು. ಈ ವೇಳೆ ಸಭೆಯಲ್ಲಿ  ಕೋಲಾಹಲ ಉಂಟಾಯಿತು. ಆಗ ಅಧ್ಯಕ್ಷರು ಹಾಗೂ ಇಒ ಸಭೆ ಮೊಟಕುಗೊಳಿಸಿದರು. 

ಕುದರಿ ತರಾಟೆಗೆ: ಸಭೆ ಮೊಟಕುಗೊಳಿಸುವಂತೆ ಸದಸ್ಯರು ಆಗ್ರಹಿಸುತ್ತಿದ್ದಂತೆ ತಹಶೀಲ್ದಾರ್‌ ಪ್ರಕಾಶ ಕುದರಿ ಆಗಮಿಸಿದರು. ಅವರನ್ನು ತೀವ್ರ ತರಾಟೆಗೆ  ತೆಗೆದುಕೊಂಡ ಸದಸ್ಯರು, ಸತತ ಮೂರು ಸಭೆಗೆ ಗೈರಾಗಿ ತಾಪಂ ಅಧ್ಯಕ್ಷರಿಗೆ ಹಾಗೂ ಸದಸ್ಯರಿಗೆ ಅವಮಾನ ಮಾಡಿದ್ದೀರಿ. ಬೆಳಗ್ಗೆ ಸಭೆಗೆ ಬರಬೇಕಾದ  ನೀವು ಮುಗಿದ ಮೇಲೆ ಏಕೆ ಬಂದಿದ್ದೀರಿ. ತಾಲೂಕಿನಾದ್ಯಂತ ಜನರು ಪಡಿತರ ಚೀಟಿ, ಬೆಳೆ ಪರಿಹಾರ ಸಮಸ್ಯೆ ಬಗೆಹರಿಸುತ್ತಿಲ್ಲ.

Advertisement

ಮುಂದಿನ ಸಭೆಗಾದ್ರೂ  ಬನ್ನಿ ಎಂದು ಖಾರವಾಗಿ ನುಡಿದರು. ಸದಸ್ಯರ ಪ್ರಶ್ನೆಗೆ ಯಾವುದೇ ಪ್ರತಿಕ್ರಿಯೆ ನೀಡದೇ ತಹಶೀಲ್ದಾರ್‌ ಕುದರಿ ಸುಮ್ಮನೆ ನಿಂತಿದ್ದರು. ಆಗ ಮಧ್ಯ  ಪ್ರವೇಶಿಸಿದ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಇಒ ಸರ್ವ ಸದಸ್ಯರನ್ನು ಸಮಾಧಾನಪಡಿಸಿ ಸಭೆಯನ್ನು ಡಿ. 13ಕ್ಕೆ ಮುಂದೂಡಿದ ಬಗ್ಗೆ ಮತ್ತೂಮ್ಮೆ  ಪ್ರಸ್ತಾಪಿಸಿದರು. 

ಪ್ರಗತಿ ಪರಿಶೀಲನೆ: ಹಿಂಗಾರಿ ಬೆಳೆ ವಿಮೆ ತುಂಬುವ ಅವಧಿ ಮುಗಿದು ಹೋಗಿದ್ದು, ಸರಿಯಾಗಿ ಮಾಹಿತಿ ಇಲ್ಲದೇ ಅನೇಕರು ಬೆಳೆ ವಿಮೆ ತುಂಬಿಲ್ಲ. ಈ  ವಿಷಯದಲ್ಲಿ ಗ್ರಾಮ ಸೇವಕರು ಪ್ರಚಾರ ಮಾಡಿರಲಿಲ್ಲ ಆರೋಪಿಸಿದರು. ಅದಕ್ಕೆ ಪ್ರತಿಕ್ರಿಯಿಸಿದ ಕೃಷಿ ಇಲಾಖೆ ಅಧಿಕಾರಿ ಹಿರೇಮಠ, ನಾವು ಪ್ರತಿ  ಗ್ರಾಮಕ್ಕೂ ಬೆಳೆ ವಿಮೆ ತುಂಬುವ ಬಗ್ಗೆ ಕರಪತ್ರ ಹಂಚಿದ್ದೇವೆ.

ಈ ಹಿಂದಿನ ಬೆಳೆ ವಿಮೆ ಪರಿಹಾರ ವಿತರಣೆಗೆ ಇನ್ಸೂರೆನ್ಸ್‌ ಕಮಿಟಿ ನೇಮಿಸಲಾಗಿದ್ದು,  ಅದರಿಂದ ವರದಿ ಬಂದ ನಂತರ ವಿಮೆ ಹಣ ರೈತರ ಖಾತೆಗೆ ಜಮೆ ಆಗಲಿದೆ ಎಂದು ತಿಳಿಸಿದರು. ತಾಪಂ ಉಪಾಧ್ಯಕ್ಷ ಮುತ್ತಪ್ಪ ನಾಯ್ಕರ, ಸ್ಥಾಯಿ ಸಮಿತಿ  ಅಧ್ಯಕ್ಷ ಫ‌ಕ್ಕೀರಪ್ಪ ಬುಡ್ಡಿಕಾಯಿ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next