ಕಡಬ: ಕಡಬ -ಪಂಜ ರಸ್ತೆಯಲ್ಲಿ ಸ್ಕೂಟಿ ಸವಾರನ ಮೇಲೆ ಮರ ಬಿದ್ದು ಸವಾರ ಸಾವಿಗೀಡಾದ ಪ್ರಕರಣಕ್ಕೆ ಸಂಬಂಧಿಸಿದಂತೆ ರಸ್ತೆ ಪಕ್ಕದ ಅಪಾಯಕಾರಿ ಮರಗಳನ್ನು ಕೂಡಲೇ ತೆರವುಗೊಳಿಸಬೇಕು ಮತ್ತು ಮೃತರ ಕುಟುಂಬಕ್ಕೆ ಸರಕಾರದಿಂದ ಸೂಕ್ತ ಪರಿಹಾರ ಒದಗಿಸಬೇಕು ಎಂದು ಅಗ್ರಹಿಸಿ ನ.2ರ ಶನಿವಾರ ಸಾರ್ವಜನಿಕರು ಅವಘಡ ಸಂಭವಿಸಿದ ಸ್ಥಳದಲ್ಲಿ ರಸ್ತೆತಡೆ ನಡೆಸಿ ಪ್ರತಿಭಟಿಸಿದರು.
ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಆಗಮಿಸಬೇಕೆಂದು ಪಟ್ಟು ಹಿಡಿದ ಸಾರ್ವಜನಿಕರು ರಸ್ತೆಗೆ ಅಡ್ಡಲಾಗಿ ಬಿದ್ದಿದ್ದ ಮರವನ್ನು ತೆರವುಗೊಳಿಸಲು ಅವಕಾಶ ನೀಡಲಿಲ್ಲ. ಅದರಿಂದಾಗಿ ಕಡಬ -ಪಂಜ ರಸ್ತೆಯಲ್ಲಿ ಸುಮಾರು ಎರಡೂವರೆ ತಾಸು ವಾಹನ ಸಂಚಾರ ಸ್ಥಗಿತಗೊಂಡಿತು.
ಪಂಜ ವಲಯ ಅರಣ್ಯಾಧಿಕಾರಿ ಸಂಧ್ಯಾ ಅವರು ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ, ಮಾತನಾಡಿ, ವಾರದೊಳಗೆ ಅಪಾಯಕಾರಿ ಮರಗಳನ್ನು ಗುರುತಿಸಿ ತೆರವುಗೊಳಿಸಲು ಕ್ರಮ ಕೈಗೊಳ್ಳಲಾಗುವುದು. ಮೃತ ವ್ಯಕ್ತಿಗೆ ಸರಕಾರದಿಂದ ಪರಿಹಾರ ಒದಗಿಸಲು ಪೂರಕ ವರದಿ ನೀಡಲಾಗುವುದು ಎಂದು ಭರವಸೆ ನೀಡಿದ ಬಳಿಕ ಪ್ರತಿಭಟನೆ ಹಿಂದೆಗೆದುಕೊಳ್ಳಲಾಯಿತು.
ಕಡಬ ಎಸ್.ಐ. ಅಭಿನಂದನ್ ಎಂ.ಎಸ್. ಹಾಗೂ ಅರಣ್ಯ ಇಲಾಖೆಯ ಸಿಬಂದಿಗಳು ಹಾಜರಿದ್ದರು.
ಸ್ಥಳೀಯ ಮುಂದಾಳುಗಳಾದ ಕೃಷ್ಣ ಶೆಟ್ಟಿ ಕಡಬ, ಫಝಲ್ ಕೋಡಿಂಬಾಳ, ರಘುರಾಮ ನಾಯ್ಕ್ ಕುಕ್ಕೆರೆಬೆಟ್ಟು, ಸೀತಾರಾಮ ಗೌಡ ಕೆ., ಅನೀಶ್ ಲೋಬೊ, ಬಾಲಕೃಷ್ಣ ಡಿ. ಕೆ., ಜಯಂತ ಕೆ., ಕೇಶವ ಬೇರಿಕೆ, ರಾಮಣ್ಣ ಜಾಲ್ತಾರು, ಮೋಹನ ಕೋಡಿoಬಾಳ, ರಾಧಕೃಷ್ಣ ಕೋಲ್ಪೆ ಮುಂತಾದವರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.
ನ.2ರ ಶನಿವಾರ ಬೆಳಗ್ಗೆ ಕಡಬ -ಪಂಜ ರಸ್ತೆಯಲ್ಲಿ ಎಡಮಂಗಲ ನಿವಾಸಿ ಸೀತಾರಾಮ ಗೌಡ ಅವರು ಸ್ಕೂಟಿಯಲ್ಲಿ ತೆರಳುತ್ತಿದ್ದ ವೇಳೆ ರಸ್ತೆ ಪಕ್ಕದ ಮರ ಉರುಳಿ ಬಿದ್ದು, ಮರದಡಿ ಸಿಲುಕಿ ಮೃತಪಟ್ಟಿದ್ದರು.