Advertisement

ಯೋಜನೆಗೆ ಎಟುಕದ ರಸ್ತೆಯ ಗುಂಡಿ,ಸಂಚಾರ ಸಂಕಟದಲ್ಲಿ ಸವಾರರು

12:31 AM Feb 27, 2020 | Sriram |

ಕಟಪಾಡಿ: ಒನ್‌ ಟೈಮ್‌ ಡೆವಲಪ್‌ಮೆಂಟ್‌ ಯೋಜನೆಯಡಿ 1 ಕೋಟಿ ರೂ. ವೆಚ್ಚದಲ್ಲಿ ಕಟಪಾಡಿ-ಕೋಟೆ -ಮಟ್ಟು ಸಂಪರ್ಕದ ಪ್ರಮುಖ ರಸ್ತೆಯೊಂದು ವಿಸ್ತರೀಕರಣಗೊಂಡರೂ ರಸ್ತೆಯ ಗುಂಡಿ ಮಾತ್ರ ಯೋಜನೆಯೊಳಗೆ ಎಟುಕದೆ ಇದ್ದು, ಸಂಚಾರಿಗಳ ಸಂಕಟ ಮತ್ತದೇ ರೀತಿಯಲ್ಲಿ ಮುಂದುವರಿದೆ ಎಂದು ವಾಹನ ಸವಾರರು, ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement

ಈ ಭಾಗದಲ್ಲಿ ಮಟ್ಟು ಭಾಗದ ಕೆನರಾ ಬ್ಯಾಂಕ್‌ ಬಳಿಯಲ್ಲಿ ಮತ್ತು ಕೋಟೆ ಗ್ರಾ.ಪಂ. ಅಧ್ಯಕ್ಷೆ ಮನೆಬಳಿಯ ರಸ್ತೆಯ ಮೇಲಿನ ಗುಂಡಿ ಮತ್ತು ಧೂಳಿನಿಂದ ಮುಕ್ತಿ ಕಾಣಲು ಹಾಗೂ ಸುಗಮ ಸಂಚಾರಕ್ಕಾಗಿ ಮತ್ತೆ ಟೆಂಡರ್‌ ಹಂತದಲ್ಲಿರುವ 1 ಕೋಟಿ ರೂ. ಅನುದಾನಕ್ಕಾಗಿ ಕಾಯಬೇಕಾದ ದುಸ್ಥಿತಿ ವಾಹನ ಸವಾರರಿಗೆ ಇದೀಗ ನುಂಗಲಾಗದ ಬಿಸಿ ತುಪ್ಪವಾಗಿ ಪರಿಣಮಿಸಿದೆ.

ತಾತ್ಕಾಲಿಕ ತೇಪೆಯಾದರೂ ಬೇಕಿತ್ತು
ಪ್ರಸ್ತುತ ಕೈಗೊಂಡ ರಸ್ತೆ ವಿಸ್ತರೀಕರಣ ಕಾಮಗಾರಿ ಕೊನೆಗೊಂಡ ಅನತಿ ದೂರದಲ್ಲಿಯೇ ಹೊಂಡ ಗುಂಡಿಯಿಂದ ಕೂಡಿ ಹಾಳಾದ ರಸ್ತೆಯು ಸವಾರರ, ಸಂಚಾರಿಗಳ ನಿದ್ದೆ ಕೆಡಿಸುತ್ತಿದೆ. ಕನಿಷ್ಠ ಪಕ್ಷ ತಾತ್ಕಾಲಿಕ ತೇಪೆ ಕೆಲಸವನ್ನಾದರೂ ಮಾಡಿ ಮಾನವೀಯತೆ ತೋರಬಹುದಿತ್ತು ಎಂದು ಸಾರ್ವಜನಿಕರು ತಮ್ಮ ಅಸಹನೆಯನ್ನು ವ್ಯಕ್ತಪಡಿಸುತ್ತಿದ್ದಾರೆ.

ಅರೆಬರೆ ಕಾಮಗಾರಿಯಿಂದ ಸ್ಥಗಿತಗೊಂಡು, ಮತ್ತೆ ಕೆಲಸ ಪುನರಾರಂಭಗೊಂಡು ಸಿದ್ಧಗೊಂಡ ರಸ್ತೆ ನೋಡುವಾಗ ತಲೆಗೆ ಎಳೆದರೆ ಕಾಲಿಗೆ ಬರಲಿಲ್ಲ ಎಂಬ ಪಾಡು ಕಂಡು ಬರುತ್ತಿದ್ದು, ಸಂಚಾರಿಗಳ ಸಂಚಾರಕ್ಕೆ ಸಂಕಟ ಮುಂದುವರಿಯುಂತಾಗಿದೆ
ಕಾಪು ಶಾಸಕ ಲಾಲಾಜಿ ಆರ್‌ ಮೆಂಡನ್‌ ಶಿಫಾರಸಿನ ಮೇರೆಗೆ ಹೆಚ್ಚುವರಿಯಾಗಿ 1 ಕೋಟಿ ರೂ. ಅನುದಾನವನ್ನು ಒದಗಿಸಿ ಉಳಿಕೆ ಕಾಮಗಾರಿಯನ್ನು ಮಟ್ಟು ಸೇತುವೆ ಬಳಿಯ ವರೆಗೆ ಪೂರ್ಣಗೊಳಿಸಲಾಗುತ್ತದೆ. ಇನ್ನೇನು 20-25 ದಿನಗಳೊಳಗಾಗಿ ಟೆಂಡರ್‌ ಪೂರ್ಣಗೊಳ್ಳುವ ಹಂತದಲ್ಲಿದೆ ಎಂದು ಎಂಜಿನಿಯರ್‌ ಮಾಹಿತಿ ನೀಡುತ್ತಿದ್ದಾರೆ.

ಅನುಷ್ಠಾನಗೊಂಡ 1 ಕೋಟಿ ರೂ ಯೋಜನೆಯು ಶಾಶ್ವತ ಪರಿಹಾರ ಎಂದು ನಂಬಿದ ಜನರಲ್ಲಿ ಇದೀಗ ನಿರಾಸೆ ಕಂಡು ಬರುತ್ತಿದ್ದು, ಮತ್ತೆ 1 ಕೋಟಿ ರೂ. ಅನುದಾನವು ಟೆಂಡರ್‌ ಮುಗಿದು ಅಭಿವೃದ್ಧಿ ಕಾಮಗಾರಿ ಆರಂಭಗೊಳ್ಳುವರೆಗೆ ಸುಗಮ ಸಂಚಾರವನ್ನು ನಡೆಸಲು ರಸ್ತೆಯ ಗುಂಡಿ ಮುಚ್ಚಿ ತೇಪೆ ಕೆಲಸವನ್ನಾದರೂ ನಡೆಸಲಿ ಎಂದು ವಾಹನ ಸವಾರರು ಆಗ್ರಹಿಸುತ್ತಿದ್ದಾರೆ.

Advertisement

ಒನ್‌ ಟೈಮ್‌ ಡೆವಲಪ್‌ಮೆಂಟ್‌ ಯೋಜನೆ
ಒನ್‌ ಟೈಮ್‌ ಡೆವಲಪ್‌ಮೆಂಟ್‌ ಯೋಜನೆಯಡಿ ತಾಂತ್ರಿಕ ಮಂಜೂರಾತಿ ಪಡೆದು 1 ಕೋಟಿ ರೂ. ವೆಚ್ಚದಲ್ಲಿ 0 -1.4 ಕಿ.ಮೀ ರಸ್ತೆ ಅಭಿವೃದ್ಧಿ ಕಾಮಗಾರಿ ನಡೆದಿದೆ. 400 ಮೀ.ನಷ್ಟು ಭಾಗ ಕಾಂಕ್ರೀಟ್‌, ಒಂದು ಕಿ.ಮೀ.ನಷ್ಟು ಡಾಮರು ಹಾಕಲಾಗಿದೆ.

ಸುಗಮ ಸಂಚಾರ
ಪ್ರಯಾಣಿಕರು ಮತ್ತು ವಾಹನ ಸವಾರರನ್ನು ಹಿತದೃಷ್ಟಿಯಲ್ಲಿರಿಸಿಕೊಂಡು ಮುಂದಿನ 1 ಕೋಟಿ ರೂ. ಅನುದಾನ ಬರುವವರೆಗೆ ಹಾಳಾಗಿರುವ ರಸ್ತೆಯ ಭಾಗಕ್ಕೆ ಪ್ಯಾಚ್‌ ವರ್ಕ್‌ ನಡೆಸಿ ಸುಗಮ ಸಂಚಾರಕ್ಕೆ ಅನುಕೂಲವನ್ನು ಕಲ್ಪಿಸಲಿ.
– ಗುರು ಸುವರ್ಣ,ಕಟಪಾಡಿ

ಕಾಮಗಾರಿಗೆ ಪ್ರಯತ್ನ
ಹೆಚ್ಚುವರಿ 1 ಕೋಟಿ ರೂ. ಅನುದಾನದ ಯೋಜನೆಯು ಟೆಂಡರ್‌ ಹಂತದಲ್ಲಿದ್ದು, ಪ್ರಕ್ರಿಯೆ ಪೂರ್ಣಗೊಂಡ ಕೂಡಲೇ ಮತ್ತೆ ವಿಸ್ತರೀಕರಣದ ಕಾಮಗಾರಿಗಳನ್ನು ಕೈಗೆತ್ತಿಕೊಂಡು ಪೂರೈಸಲಾಗುತ್ತದೆ. ಅದುವರೆಗೆ ಜಲ್ಲಿ ಅಥವಾ ಡಾಮರು ಮಿಕ್ಸ್‌ನ್ನು ರಸ್ತೆಯ ಗುಂಡಿಗೆ ಅಳವಡಿಸಲು ಪ್ರಯತ್ನಿಸುತ್ತೇನೆ.
– ಸವಿತಾ ಆರ್‌, ಅಸಿಸ್ಟೆಂಟ್‌ ಎಂಜಿನಿಯರ್‌ ಲೋಕೋಪಯೋಗಿ ಇಲಾಖೆ

Advertisement

Udayavani is now on Telegram. Click here to join our channel and stay updated with the latest news.

Next