Advertisement

‘ಬಹುರಾಷ್ಟ್ರೀಯ ಕಂಪೆನಿಗಳಿಂದ ರಿಕ್ಷಾ ಚಾಲಕರ ಉದ್ಯೋಗಕ್ಕೆ ತೊಂದರೆ’

01:42 PM Nov 26, 2017 | |

ಬಲ್ಮಠ: ಶಿಕ್ಷಿತ ನಿರುದ್ಯೋಗಿಗಳು ರಿಕ್ಷಾ ಚಾಲಕವೃತ್ತಿಯನ್ನು ನಂಬಿಕೊಂಡು ಜೀವನ ನಿರ್ವಹಣೆಯ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ಆದರೆ ಪ್ರಸ್ತುತ ಬಹುರಾಷ್ಟ್ರೀಯ ಓಲಾ- ಉಬಾರ್‌ ಕಂಪನಿಗಳು ಕಾನೂನು ಬಾಹಿರವಾಗಿ ಓಲಾ-ಉಬಾರ್‌ ಓಡಿಸುವುದರ ಮೂಲಕ ರಿಕ್ಷಾ ಚಾಲಕರ ಉದ್ಯೋಗಕ್ಕೆ ಕುತ್ತು ತರುತ್ತಿದ್ದಾರೆ ಎಂದು ದಲಿತ ಸಂಘಟನೆಗಳ ಒಕ್ಕೂಟದ ಮುಖಂಡ ಅಶೋಕ್‌ ಕೊಂಚಾಡಿ ಆಪಾದಿಸಿದರು.

Advertisement

ನಗರದಲ್ಲಿ ಓಲಾ-ಉಬರ್‌ ಕಾರುಗಳ ಕಾನೂನು ಬಾಹಿರ ಓಡಾಟವನ್ನು ವಿರೋಧಿಸಿ ಮಂಗಳೂರು ನಗರ ಅಟೋರಿಕ್ಷಾ ಚಾಲಕ-ಮಾಲಕರ ಒಕ್ಕೂಟದ ನೇತೃತ್ವದಲ್ಲಿ ನಗರದ ಡಾನ್‌ ಬಾಸ್ಕೋ ಹಾಲ್‌ನಲ್ಲಿ ಶನಿವಾರ ನಡೆದ ರಿಕ್ಷಾ ಚಾಲಕರಿಂದ ಪ್ರತಿಭಟನೆ ಮತ್ತು ಸಮಾಲೋಚನಾ ಸಭೆಯಲ್ಲಿ ಅವರು ಮಾತನಾಡಿದರು.

ಮಂಗಳೂರಿನಲ್ಲಿ ಸುಮಾರು 6ಸಾವಿರಕ್ಕೂ ಅಧಿಕ ರಿಕ್ಷಾಗಳು ಓಡಾಟ ನಡೆಸುತ್ತಿವೆ. ರಿಕ್ಷಾ ಓಡಿಸಿ ಬರುವ ಅಲ್ಪಸ್ವಲ್ಪ ಆದಾಯದೊಂದಿಗೆ ಮನೆ ನಿರ್ವಹಣೆಯ ಜವಾಬ್ದಾರಿಯನ್ನು ಚಾಲಕರು ನಿಭಾಯಿಸಬೇಕು. ಆದರೆ ನಗರದಲ್ಲಿ ಓಲಾ-ಉಬರ್‌ಗಳು ಕಾನೂನು ಬಾಹಿರವಾಗಿ ಓಡಾಟದಲ್ಲಿ ತೊಡಗಿರುವುದರಿಂದ ರಿಕ್ಷಾ ಚಾಲಕರ ಆದಾಯಕ್ಕೆ ತೊಂದರೆಯಾಗುತ್ತಿದೆ. ರಿಕ್ಷಾ ಚಾಲಕರು ಒಗ್ಗಟ್ಟಾಗಿ, ತಾಂತ್ರಿಕವಾಗಿಯೂ ಸಮರ್ಥರಾಗುವುದರೊಂದಿಗೆ ಓಲಾ-ಉಬರ್‌ಗೆ ಸಡ್ಡು ಹೊಡೆಯಬೇಕಾದ ಅವಶ್ಯವಿದೆ ಎಂದರು.

ಅಟೋರಿಕ್ಷಾ ಚಾಲಕರು ಹೇಳಿದಲ್ಲಿಗೆ ಬರುವುದಿಲ್ಲ ಮತ್ತು ಅಧಿಕ ದರ ವಸೂಲಿ ಮಾಡುತ್ತಾರೆ ಎಂಬ ಆರೋಪ ಸಾರ್ವಜನಿಕ ವಲಯದಲ್ಲಿದೆ. ಇಂತಹ ಆರೋಪ ಬಾರದಂತೆ ಸ್ವಯಂ ಜಾಗೃತಿಗೊಳ್ಳುವುದರೊಂದಿಗೆ ಓಲಾ-ಉಬರ್‌ ಕಾರುಗಳು ಅಳವಡಿಸಿರುವ ತಾಂತ್ರಿಕತೆಯನ್ನು ರಿಕ್ಷಾದಲ್ಲಿಯೂ ಅಳವಡಿಸಿಕೊಳ್ಳಬೇಕು. ಇದರಿಂದ ಆಟೋರಿಕ್ಷಾಗಳ ಸೇವೆ ಜನರಿಗೆ ಇನ್ನಷ್ಟು ಹತ್ತಿರವಾಗುವಂತೆ ಮಾಡಬಹುದು ಎಂದರು.

ಎಆರ್‌ಸಿಎಸ್‌ ಮಂಗಳೂರು ಇದರ ಪ್ರ.ಕಾರ್ಯದರ್ಶಿ ಸುಭಾಷ್‌ ಕಾವೂರು ವಿಚಾರ ಮಂಡನೆ ಮಾಡಿದರು. ಆನ್‌ ಲೈನ್‌ ನೆಟ್‌ವರ್ಕ್‌ ಕಾರುಗಳ ತಂತ್ರಜ್ಞಾನದ ಕುರಿತು ಮಂಗಳೂರಿನ ಟ್ಯಾಕ್ಟರ್‌ ಸೊಲ್ಯೂಶನ್‌ ಪ್ರೈ. ಸಂಸ್ಥೆಯ ವಿಮರ್ಶ್‌ ಶೆಟ್ಟಿ ಸುರತ್ಕಲ್‌, ಮುಂಬಯಿಯ ಸಂಪರ್ಕ್‌ ಇನ್ಫೋಟೈನ್‌ಮೆಂಟ್‌ ಪ್ರೈ ಸಂಸ್ಥೆಯ ರೋನಿ ಫೆರ್ನಾಂಡಿಸ್‌, ಬೆಂಗಳೂರಿನ ಟೆಲಿ ಮ್ಯಾಟಿಕ್ಸ್‌ ಫಾರ್‌ ಯುನ ಜೀತು ನಯ್ನಾರ್‌, ರಮೇಶ್‌ ಕುಮಾರ್‌ ಮಾತನಾಡಿದರು. ಮಂಗಳೂರು ನಗರ ಆಟೋ ರಿಕ್ಷಾ ಚಾಲಕ ಮಾಲಕರ ಒಕ್ಕೂಟದ ಅಧ್ಯಕ್ಷ ಮಹಮ್ಮದ್‌ ಇರ್ಫಾನ್‌ ಅಧ್ಯಕ್ಷತೆ ವಹಿಸಿದ್ದರು. ಮಂಗಳೂರು ಅಭಿವೃದ್ಧಿ ಶಿಕ್ಷಣ ಸೇವಾ ಸಂಸ್ಥೆಯ ಮುಖ್ಯಸ್ಥೆ ಮರ್ಲಿನ್‌ ಮಾರ್ಟಿಸ್‌, ಮಂಗಳೂರು ಲಯನ್ಸ್‌ ಕ್ಲಬ್‌ ಅಧ್ಯಕ್ಷ ವೆಂಕಟೇಶ್‌ ಬಾಳಿಗ, ಉದ್ಯಮಿ ಎನ್‌. ಟಿ. ರಾಜ, ಎಂ. ದೇವದಾಸ್‌, ಅಶೋಕ್‌ ಕುಮಾರ್‌ ಶೆಟ್ಟಿ ಬೋಳಾರ, ಅರುಣ್‌ ಕುಮಾರ್‌, ಯೋಗೇಂದ್ರ, ಮೋಹನ್‌ ಉಪಸ್ಥಿತರಿದ್ದರು.

Advertisement

ನಷ್ಟದಲ್ಲಿ ಚಾಲಕರು
ಕಡಿಮೆ ದರ ಸೇರಿದಂತೆ ನಾನಾ ರೀತಿಯ ಆಫರ್‌ಗಳನ್ನು ನೀಡಿ ಸಾರ್ವಜನಿಕರನ್ನು ಆಕರ್ಷಿಸುವ ಓಲಾ-ಉಬರ್‌ ಕಂಪೆನಿ ತನ್ನಲ್ಲಿ ದುಡಿಯುವ ಚಾಲಕರಿಗೆ ವಂಚಿಸುತ್ತಿದೆ. ಚಾಲಕರಿಗೆ ಬೇಕಾದ ಸೌಲಭ್ಯಗಳನ್ನು ನೀಡದೇ ಸತಾಯಿಸುತ್ತಿರುವುದರಿಂದ ಈಗಾಗಲೇ ಅವರು ನಷ್ಟದ ಹಾದಿಯಲ್ಲಿದ್ದಾರೆ. ಅದರೊಂದಿಗೆ ಪ್ರಸ್ತುತ ರಿಕ್ಷಾ ಚಾಲಕರ ಆದಾಯಕ್ಕೂ ತೊಂದರೆ ಮಾಡುತ್ತಿರುವುದರಿಂದ ರಿಕ್ಷಾ ಚಾಲಕರು ಎಚ್ಚೆತ್ತುಕೊಳ್ಳಬೇಕಿದೆ ಎಂದು ಅವರು ಹೇಳಿದರು.
ಅಶೋಕ್‌ ಕೊಂಚಾಡಿ
 ದಲಿತ ಸಂಘಟನೆಗಳ ಒಕ್ಕೂಟದ ಮುಖಂಡ

Advertisement

Udayavani is now on Telegram. Click here to join our channel and stay updated with the latest news.

Next