Advertisement

ರಿಕ್ಷಾ ಚಾಲಕರ ಪುತ್ರನಿಗೆ ಐಪಿಸಿಸಿಯಲ್ಲಿ ರ್‍ಯಾಂಕ್‌

06:35 AM Aug 04, 2018 | Team Udayavani |

ಉಡುಪಿ: ಉಡುಪಿಯ ರಿಕ್ಷಾ ಚಾಲಕರ ಪುತ್ರನೊಬ್ಬ ಚಾರ್ಟರ್ಡ್‌ ಅಕೌಂಟೆಂಟ್‌ಗೆ ಪೂರ್ವಭಾವಿಯಾಗಿರುವ ಐಪಿಸಿಸಿ ಇಂಟರ್ನ್ಶಿಪ್‌ನಲ್ಲಿ ಅಖೀಲ ಭಾರತ ಮಟ್ಟದಲ್ಲಿ 41ನೆಯ ರ್‍ಯಾಂಕ್‌ ಗಳಿಸಿದ್ದಾರೆ. 

Advertisement

ಹಳೆಯ ಮತ್ತು ಹೊಸ ಸ್ಕೀಮ್‌ನಂತೆ ಒಟ್ಟು 75,000 ಜನರು ಪರೀಕ್ಷೆಗೆ ಕುಳಿತರೆ ಒಟ್ಟು ಪಾಸಾಗುವವರ ಪ್ರಮಾಣ ಶೇ.4ರಿಂದ 5. ಇದರಲ್ಲಿ ಗ್ರಾಮಾಂತರ ಭಾಗದ ಬಡ ವಿದ್ಯಾರ್ಥಿ ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾನೆ.
 
ಸರಕಾರಿ ಶಾಲೆಯಲ್ಲೇ ಓದು
ಈ ಹುಡುಗ ಪ್ರಾಥಮಿಕದಿಂದ  ಪದವಿ ವರೆಗೆ ಓದಿದ್ದು ಸರಕಾರಿ ಸಂಸ್ಥೆಗಳಲ್ಲಿ  ಕೊಡವೂರು ಮೂಡುಬೆಟ್ಟುವಿನ ಅಶೋಕ್‌ ಪಿ. ಕೋಟ್ಯಾನ್‌ ಮತ್ತು ಗಾಯತ್ರಿ ಕೋಟ್ಯಾನ್‌ ದಂಪತಿ ಪುತ್ರ ಅಶ್ವತ್ಥ್ ಎ. ಕೋಟ್ಯಾನ್‌ ಈ ಸಾಧನೆ ಮಾಡಿದವರು. ಅಶೋಕ್‌ ಕೋಟ್ಯಾನ್‌ ಅವರು ಅಜ್ಜರಕಾಡು ಆಸ್ಪತ್ರೆ ಎದುರಿನ ರಿಕ್ಷಾ ನಿಲ್ದಾಣದಲ್ಲಿ ರಿಕ್ಷಾ ಚಲಾಯಿಸುತ್ತಿದ್ದರೆ ತಾಯಿ ಬೀಡಿ ಕಟ್ಟುವವರು. 

ಅಣ್ಣ ಅವಿನಾಶ್‌ ಕೋಟ್ಯಾನ್‌ ಮೆಕಾನಿಕ್‌ ಆಗಿದ್ದಾರೆ. ಅಶ್ವತ್ಥ್ ಕೋಟ್ಯಾನ್‌ ಆದಿ ಉಡುಪಿ ಸರಕಾರಿ ಹಿ.ಪ್ರಾ.ಶಾಲೆ, ಸರಕಾರಿ ಪ್ರೌಢಶಾಲೆ, ಮಲ್ಪೆಯ ಸರಕಾರಿ ಪ.ಪೂ. ಕಾಲೇಜು, ತೆಂಕನಿಡಿಯೂರು ಸರಕಾರಿ ಕಾಲೇಜಿನಲ್ಲಿ ಶಿಕ್ಷಣ ಪಡೆದರು. ಸಿಎ ಪರೀಕ್ಷೆಗೆ ಕುಳಿತುಕೊಳ್ಳುವವರು ಸಾಮಾನ್ಯವಾಗಿ ಸಿಪಿಟಿ (ಪ್ರವೇಶ) ಪರೀಕ್ಷೆ ಬರೆಯುತ್ತಾರೆ. ಅಶ್ವತ್ಥ್ ಹೀಗೆ ಮಾಡದೆ ನೇರ ಐಪಿಸಿಸಿ ಪರೀಕ್ಷೆಗೆ ಕುಳಿತರು. ಇನ್ನಾರು ತಿಂಗಳಲ್ಲಿ ಅಂತಿಮ ಪರೀಕ್ಷೆಯನ್ನು ನೇರವಾಗಿ ಬರೆಯಬಹುದು ಎಂಬುದು ಇದಕ್ಕೆ ಕಾರಣ. ಪ್ರಸ್ತುತ ಇವರು ಉಡುಪಿಯ ಪ್ರಭಾಜಿತ್‌ ಆ್ಯಂಡ್‌ ಕಂಪೆನಿಯಲ್ಲಿ ಆರ್ಟಿಕಲ್‌ಶಿಪ್‌ ಮಾಡುತ್ತಿದ್ದಾರೆ. 

ಪ್ರಯತ್ನವೇ ಮುಖ್ಯ
“ನಮಗೆ ಹಣಕಾಸು ಮುಗ್ಗಟ್ಟು ಇದೆ. ಈಗ ಆರ್ಟಿಕಲ್‌ಶಿಪ್‌ ಮಾಡುತ್ತಿರುವುದರಿಂದ 1,000- 1,500 ರೂ. ಸ್ಟೈಫ‌ಂಡ್‌ ಸಿಗುತ್ತದೆ. ಇತ್ತೀಚೆಗೆ ಮನೆಯನ್ನು ನಿರ್ಮಿಸಿದ್ದರಿಂದ ಮನೆಯವರಿಗೆ ಅದರ ಸಾಲ ಹಿಂದಿರುಗಿಸುವ ಜವಾಬ್ದಾರಿಯೂ ಇದೆ. ನಾನು ನೇರವಾಗಿ ಪಾಸಾಗಬೇಕೆಂಬ ಬಯಕೆ ಹೊಂದಿದ್ದೆ ಅಷ್ಟೆ. ಫ‌ಲಿತಾಂಶ ನೋಡಿ ನನಗೇ ಅಚ್ಚರಿಯಾಯಿತು. ಸಿಎ ಉತ್ತೀರ್ಣರಾಗಬೇಕಾದರೆ ಕೇವಲ ಬುದ್ಧಿವಂತರಾದರೆ ಸಾಲದು, ಪ್ರಯತ್ನ ಮಾಡಲೇಬೇಕು’ ಎನ್ನುತ್ತಾರೆ ಅಶ್ವತ್ಥ್ ಕೋಟ್ಯಾನ್‌. 

ಇವರೊಬ್ಬ ಮಾಡೆಲ್‌
ಮನೆಯಲ್ಲಿ ಮೂಲ ಸೌಕರ್ಯಗಳು ಕಡಿಮೆ ಇದ್ದರೂ ಕಠಿನ ಶ್ರಮ ಮತ್ತು ಇಚ್ಛಾಬಲದ ಪ್ರಯತ್ನದಿಂದ ಹೇಗೆ ಸಾಧನೆ ಮಾಡಬಹುದು ಎನ್ನುವುದಕ್ಕೆ ಅಶ್ವತ್ಥ್ ಉದಾಹರಣೆ. ಸಣ್ಣ ಮನೆ, ಸಣ್ಣ ಆದಾಯವಿದ್ದರೂ ಪ್ರಯತ್ನಪಟ್ಟರೆ ಇಂತಹ ಸಾಧನೆ ಸಾಧ್ಯ. ಅಶ್ವತ್ಥ್ರಿಗೆ ಲೆಕ್ಕಪರಿಶೋಧಕರ ಸಂಸ್ಥೆ ಮತ್ತು ಆರ್ಟಿಕಲ್‌ಶಿಪ್‌ ಮಾಡುವ ಸಂಸ್ಥೆ ಎಲ್ಲ ಸಹಕಾರ ಕೊಟ್ಟಿದೆ.
– ಸುರೇಂದ್ರ ನಾಯಕ್‌,
ಅಧ್ಯಕ್ಷರು, ಭಾರತೀಯ ಲೆಕ್ಕಪರಿಶೋಧಕರ ಸಂಸ್ಥೆ, ಉಡುಪಿ ಶಾಖೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next