ಉಡುಪಿ: ಬಾಡಿಗೆಗೆ ವಾಹನ ನೀಡುವ ಬೌನ್ಸ್ ದ್ವಿಚಕ್ರ ವಾಹನ ಪರವಾನಿಗೆ ರದ್ದು ಪಡಿಸಬೇಕು. ಇದರಿಂದ ನಮಗೆ ತೊಂದರೆಯಾಗುತ್ತಿದ್ದು, ಜೀವನ ಸಾಗಿಸಲು ಕಷ್ಟವಾಗುತ್ತಿದೆ ಎಂದು ರಿಕ್ಷಾ ಚಾಲಕರು ಅಳಲು ತೋಡಿಕೊಂಡರು. ರಿಕ್ಷಾ ಚಾಲಕರು ಮತ್ತು ಮಾಲಕರ ಪರವಾಗಿ ಶಾಸಕ ಕೆ. ರಘುಪತಿ ಭಟ್, ಜಿಲ್ಲಾಧಿಕಾರಿಗಳಲ್ಲಿ ಬೌನ್ಸ್ ಸ್ಕೂಟರ್ ಬಾಡಿಗೆ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಆಗ್ರಹಿಸಿದರು.
ಮಣಿಪಾಲದ ಸಾರ್ವಜನಿಕ ಪ್ರದೇಶ ದಲ್ಲಿ ನಿಲ್ಲಿಸಲಾಗಿದ್ದ 9 ಬೌನ್ಸ್ ದ್ವಿಚಕ್ರ ವಾಹನಗಳನ್ನು ಜಪ್ತಿ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಹೇಳಿದರು.
ಜಿಲ್ಲಾಧಿಕಾರಿ ಕಚೇರಿ ಮುಂಭಾಗ ದಲ್ಲಿ ಸೋಮವಾರ ಉಡುಪಿ ವಲಯ ರಿಕ್ಷಾ ಚಾಲಕರು ಮತ್ತು ಮಾಲಕರ ಸಂಘದ ಪ್ರತಿಭಟನೆಯಲ್ಲಿ ಮನವಿ ಸ್ವೀಕರಿಸಿ ಅವರು ಮಾತನಾಡಿದರು.
ಪ್ರಾದೇಶಿಕ ಸಾರಿಗೆ ಅಧಿಕಾರಿ ರಾಮಕೃಷ್ಣ ರೈ, ನಗರಸಭೆಯ ಪೌರಾಯುಕ್ತ ಆನಂದ್ ಕಲ್ಲೋಳಿಕರ್, ಬಿಜೆಪಿ ನಗರಾಧ್ಯಕ್ಷ ಮಹೇಶ್ ಠಾಕೂರ್, ನಗರಸಭಾ ಸದಸ್ಯ ಮಂಜುನಾಥ್ ಮಣಿಪಾಲ, ಮಾಜಿ ನಗರಸಭೆ ಸದಸ್ಯ ಕೃಷ್ಣಮೂರ್ತಿ ಆಚಾರ್ಯ, ಮಣಿಪಾಲ ಯೂನಿ ಯನ್‌ನ ಪ್ರದೀಪ್ ಪೂಜಾರಿ, ಹರೀಶ್ ಪೂಜಾರಿ, ಬ್ಲಾಕ್ ಯೂತ್ ಕಾಂಗ್ರೆಸ್ ಅಧ್ಯಕ್ಷ ಪ್ರಶಾಂತ್ ಪೂಜಾರಿ, ಶಶಿರಾಜ್ ಕುಂದರ್, ಸುಕೇಶ್ ಕುಂದರ್ ಮತ್ತಿತರರು ಉಪಸ್ಥಿತರಿದ್ದರು. ಜಿಲ್ಲಾಧಿಕಾರಿಗೆ ಮನವಿ ನೀಡಿದ ಅನಂತರ ಪ್ರತಿಭಟನೆಯನ್ನು ಹಿಂತೆಗೆದುಕೊಳ್ಳಲಾಯಿತು.
ಬೆಂಗಳೂರಿನಲ್ಲಿ
ಮಾತ್ರ ಅನುಮತಿ
ಬೌನ್ಸ್ ಸಂಸ್ಥೆಯು ದ್ವಿಚಕ್ರ ವಾಹನ ಬಾಡಿಗೆ ನೀಡುವ ಪದ್ಧತಿಗೆ ಬೆಂಗಳೂರಿನಲ್ಲಿ ಮಾತ್ರ ಅನುಮತಿ ಪಡೆದುಕೊಂಡಿದ್ದಾರೆ. ಉಡುಪಿಯಲ್ಲಿ ಅವರಿಗೆ ಇನ್ನೂ ಅನುಮತಿ ನೀಡಿಲ್ಲ. ಅನುಮತಿ ಸಿಗುವವರೆಗೆ ಬಾಡಿಗೆಗೆ ನೀಡುವಂತಿಲ್ಲ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಆರ್‌ಟಿಒ ಅಧಿಕಾರಿಗಳು, ನಗರಸಭೆ ಪೌರಾಯುಕ್ತರಿಗೆ ಸೂಚನೆ ನೀಡಲಾಗಿದೆ.
– ಜಿ.ಜಗದೀಶ್, ಜಿಲ್ಲಾಧಿಕಾರಿ