Advertisement

ಶ್ರೀಮಂತ ಪಾಪಿಗಳಿಗೆ ಯಮಲೋಕಕ್ಕೆ 1st ಕ್ಲಾಸ್‌ ಟಿಕೆಟ್‌ ಸಿಗುತ್ತಾ?

06:00 AM Aug 14, 2018 | |

ಭೂಮಿಯ ಮೇಲೆ ಹಣ, ದೇಹ, ಪತಿ, ಪತ್ನಿ, ಸಂಬಂಧಗಳು ಯಾವುದೂ ಶಾಶ್ವತವಲ್ಲ. ಧರ್ಮಾಚರಣೆ ಮಾತ್ರ ಶಾಶ್ವತವಾದದ್ದು. ಧರ್ಮಾಚರಣೆಯೆಂದರೆ ದೇವರ ಪೂಜೆ ಮಾಡುವುದು ಎಂದಲ್ಲ. ಒಳ್ಳೆಯತನದಿಂದ ಬದುಕುವುದು. ನಾವು ಎಷ್ಟೇ ತಪ್ಪುಗಳನ್ನು ಮಾಡಿದರೂ  ತಿದ್ದಿಕೊಳ್ಳಲು ಅವಕಾಶವಿರುತ್ತದೆ.

Advertisement

ವೇದ-ಪುರಾಣಗಳ ಪ್ರಕಾರ 84 ಲಕ್ಷ ನಾನಾ ವಿಧದ ಜೀವರಾಶಿಗಳು ಜನನ-ಮರಣಗಳ ಕ್ರಿಯೆಯಲ್ಲಿ ತೊಡಗಿದ್ದರೂ, ಯಮರಾಜ ಎಲ್ಲರಿಗೂ ಶಿಕ್ಷೆ ವಿಧಿಸಲು ಕಾತುರದಿಂದ ಕಾದು ಕುಳಿತಿಲ್ಲ. ಪರಮಾತ್ಮನ ಸೃಷ್ಟಿಯಲ್ಲಿ ಯಮಪುರಿಯೂ ಇದೆ. ಅದಕ್ಕೆ ವ್ಯವಸ್ಥಾಪಕ ನಿರ್ದೇಶಕನನ್ನಾಗಿ ಯಮರಾಜನನ್ನು ಆಯ್ಕೆ ಮಾಡಿದ್ದಾನೆ. ನಾವು ಕರ್ಮ ಮಾರ್ಗದಲ್ಲಿ ಮಾಡುವ ತಪ್ಪುಗಳಿಗೆ ನಾವೇ ಜವಾಬ್ದಾರರು. ಅದಕ್ಕೆ ಯಮ ತಾನೇ ಏನು ಮಾಡಲು ಸಾಧ್ಯ? ನಮ್ಮ ತಪ್ಪುಗಳನ್ನು ತಿದ್ದಿಕೊಂಡು ಸತ್ಯ-ಧರ್ಮವನ್ನು ಅನುಸರಿಸುವ ಮಾರ್ಗಗಳು ನಮ್ಮ ಕಣ್ಣಮುಂದೆ ಇದ್ದರೂ ನಾವು ತಪ್ಪನ್ನೇ ಸರಿ ಎಂದುವಾದಿಸಿ ಅದನ್ನೇ ಮುಂದುವರಿಸಿದರೆ ಖಂಡಿತ ಯಮಲೋಕ ಯಾತ್ರೆಗೆ ಹೋಗಲೇಬೇಕು. 

ಮನುಷ್ಯ ಸತ್ತ ನಂತರ ಎಲ್ಲಿಗೆ ಹೋಗುತ್ತಾನೆ ಅನ್ನುವುದು ಪ್ರತಿಯೊಬ್ಬರಿಗೂ ಕಾಡುವಂತಹ ಪ್ರಶ್ನೆ. ಕೆಲವು ಜಿಜ್ಞಾಸುಗಳು ಕೊನೆ ತನಕ ಪ್ರಶ್ನೆ ಮಾಡುತ್ತಲೇ ಇರುತ್ತಾರೆ. ನರಕವನ್ನು ಯಾರು ಕಂಡಿದ್ದಾರೆ, ಸ್ವರ್ಗವನ್ನು ಯಾರು ಕಂಡಿದ್ದಾರೆ? ಎಷ್ಟು ಸಂಶೋಧನೆ ಮಾಡಿದರೂ ಅವುಗಳಿಗೆ ಉತ್ತರ ಸಿಗುವುದಿಲ್ಲ ಎಂಬುದು ಅವರ ತಕರಾರು. ನಿಜ ಹೇಳಬೇಕೆಂದರೆ, ಜೀವನದಲ್ಲಿ ಉತ್ತರ ಗಳನ್ನೇ ಹುಡುಕಲು ಹೋದರೆ ಯಾವುದಕ್ಕೂ ಉತ್ತರ ಸಿಗುವುದಿಲ್ಲ. ನಮಗೆ ಯಾವುದು ಉತ್ತರವಾಗಿ ಕಾಣಿಸುತ್ತದೆಯೋ ಅದು ಬೇರೆಯವರಿಗೆ ಪ್ರಶ್ನೆಯಾಗೇ ಉಳಿದಿರಬಹುದು. ಆದರೆ ಎಲ್ಲವೂ ನಿಂತಿರುವುದು ನಂಬಿಕೆಯ ಮೇಲೆ. ಮಗು ಹುಟ್ಟಿದ ತಕ್ಷಣ ಇವರೇ ನನ್ನ ಅಪ್ಪ-ಅಮ್ಮ ಅಂತ ಯಾರನ್ನೂ ಗುರುತು ಹಿಡಿಯುವುದಿಲ್ಲ. ಆ ಮಗುವಿಗೆ ನಾವು ಹೇಳಿ ಹೇಳಿ ಅಜ್ಜಿ, ತಾತಾ, ಚಿಕ್ಕಪ್ಪ, ಚಿಕ್ಕಮ್ಮ ಎಲ್ಲರನ್ನೂ ಪರಿಚಯಿಸುತ್ತೇವೆ. ಅದೊಂದು ಜೀವ ಹೊಸ ದೇಹಧಾರಣೆ ಮಾಡಿ ಹೊಸದಾಗಿ ಜನ್ಮ ಪಡೆದು ತನ್ನ ಸುತ್ತಮುತ್ತಲಿರುವ ವಾತಾವರಣವನ್ನು ನಂಬುತ್ತಾ ಅನುಸರಿಸುತ್ತಾ ಹೋಗುತ್ತದೆ. ಎಲ್ಲವೂ ನಂಬಿಕೆಯಷ್ಟೇ. 

ಹಾಗೆಯೇ ಮನಷ್ಯನೊಬ್ಬ ಸತ್ತ ನಂತರ ಅವನ ಈ ಜನ್ಮದ ಪಾಪ ಕರ್ಮಗಳ ಲೆಕ್ಕದ ಪ್ರಕಾರ ಮುಂದಿನ ಜನ್ಮದಲ್ಲಿ ಮನುಷ್ಯನಾಗಿ ಹುಟ್ಟುತ್ತಾನೋ ಬೇರೆ ಜಂತುವಾಗಿ ಹುಟ್ಟುತ್ತಾನೋ ಎಂಬುದನ್ನು ನಿರ್ಧರಿಸಲು ಒಬ್ಬ ನ್ಯಾಯಮೂರ್ತಿ ಇರಲೇಬೇಕು. ಯಮಧರ್ಮರಾಜ ತನಗೆ ವಹಿಸಿರುವ ಕರ್ತವ್ಯವನ್ನು ನಿಷ್ಠೆಯಿಂದ ಮಾಡಿ ನಮ್ಮ ಮುಂದಿನ ಜನ್ಮವನ್ನು ನಿರ್ಧರಿಸಲು ಸಹಾಯಮಾಡುತ್ತೇನೆ. 

ಯಮಪುರಿ ಹೇಗಿದೆ ಗೊತ್ತೇ? 
ಯಮಧರ್ಮರಾಜನ ವಿಶಾಲವಾದ ಪುರ 44 ಯೋಜನ ಗಳಷ್ಟು ವಿಸ್ತೀರ್ಣ ಹೊಂದಿದ್ದು, ಅದು ಬಹುಭೀತಿ ಪುರದ ಎದುರಿನಲ್ಲಿದೆ ಎಂದು ಪುರಾಣಗಳು ಹೇಳುತ್ತವೆ. ಎಲ್ಲಾ ದ್ವಾರ ಗಳಲ್ಲೂ ಪಾಪಿಯ ಕೆಟ್ಟ ಕೆಲಸಗಳನ್ನು ಓದುತ್ತಾ ಹೋಗುತ್ತಾರೆ. ಕೊನೆಗೆ ಪಾಪಿಯನ್ನು ಯಮರಾಜನ ಬಳಿಗೆ ಕರೆದೊಯ್ಯತ್ತಾರೆ. ಯಾರು ನಾಸ್ತಿಕ ಮತ್ತು ಮಹಾಪಾಪಿಗಳಾಗಿರುತ್ತಾರೋ ಅವರ ಬಗ್ಗೆ ಏನನ್ನೂ ವಿಚಾರಿಸದೆ ನೇರವಾಗಿ ಯಾತನೆಯನ್ನು ಭೋಗಿ ಸಲು ಕಳಿಸುತ್ತಾರೆ. ನಿಮ್ಮ ಪಾಪ ಕರ್ಮಕ್ಕೆ ನೀವೇ ಕಾರಣರು, ಮೂರ್ಖನಿರಲಿ, ಪಂಡಿತನಿರಲಿ, ದರಿದ್ರನಿರಲಿ, ಧನಿಕನಿರಲಿ, ಸಬಲನಿರಲಿ, ದುರ್ಬಲನಿರಲಿ ಯಮರಾಜ ಎಲ್ಲರೊಡನೆಯೂ ಸಮಾನವಾದ ವ್ಯವಹಾರ ಮಾಡುತ್ತಾನೆ. ಪಾಪಿಗಳನ್ನು ಪ್ರಚಂಡ ಮತ್ತು ಚಂಡಕರೆಂಬ ದೂತರು ಪಾಶದಿಂದ ಬಂಧಿಸಿ ನರಕದತ್ತ ಕೊಂಡೊಯ್ಯುತ್ತಾರೆ. ಹಾಗೆಯೇ ಧರ್ಮದ ತತ್ವವನ್ನು ಅರಿತ ಬುದ್ಧಿವಂತ, ಧಾರ್ಮಿಕ ಜನರಿಗೆ ಒಳ್ಳೆಯದನ್ನು ಮಾಡಿ ದೇವರಿಗೆ ಪ್ರಿಯವಾದ ಜೀವಿಯನ್ನು ಪುಷ್ಪಕ ವಿಮಾನದ ಗೌರವ ತೋರಿ ಸ್ವರ್ಗಕ್ಕೆ ಕರೆದುಕೊಂಡು ಹೋಗುತ್ತಾರೆ. ಸದಾ ಪಾಪ ಕರ್ಮಗಳಲ್ಲೇ ತೊಡಗಿರುವ, ಒಳ್ಳೆ ಕೆಲಸಗಳಿಂದ ದೂರವಿರುವ ಜೀವಿಯು ಒಂದು ನರಕದಿಂದ ಇನ್ನೊಂದು ನರಕವನ್ನು ಒಂದು ಭಯದಿಂದ ಮತ್ತೂಂದು ಭಯವನ್ನು ಪ್ರಾಪ್ತಿಯೊಂದುತ್ತದೆ. ಧಾರ್ಮಿಕ ಜನರು ಧರ್ಮರಾಜನ ಪುರದಲ್ಲಿ 3 ದಿಕ್ಕುಗಳಲ್ಲಿ ಹೋಗುತ್ತಾರೆ. ಆದರೆ ಪಾಪಿಗಳು ದಕ್ಷಿಣ ದ್ವಾರದಲ್ಲಿ ಮಹಾ ದುಃಖದಾಯಕ ವೈತರಣೀ ನದಿಯ ಮೂಲಕ ಹೋಗುತ್ತಾರೆ ಎಂದು ಗರುಡ ಪುರಾಣದಲ್ಲಿ ವಿಷ್ಣು ಹೇಳುತ್ತಾನೆ.

Advertisement

ಕೆಲವು ರಾಜಕೀಯ ವ್ಯಕ್ತಿಗಳು ಕಪ್ಪು ಹಣ ಜಾಸ್ತಿ ಇದೆ ಅಂತ, ತಮ್ಮ ಅಧಿಕಾರದ ಮದದಿಂದ ತಾವು ಮಾತ್ರವಲ್ಲದೆ ತಮ್ಮ ಮಕ್ಕಳನ್ನು ಸಹ ವಿಮಾನದಲ್ಲಿ ಫ‌ಸ್ಟ್‌ ಕ್ಲಾಸ್‌ (ಮೊದಲ ದರ್ಜೆಯ) ಟಿಕೆಟ್‌ ಪಡೆದು ಒಂದಕ್ಕೆ ಹತ್ತರಷ್ಟು ಹಣ ಸುರಿದು ಕಳುಹಿಸುತ್ತಾರೆ. ಇವರಿಗೆಲ್ಲ ಯಮಲೋಕಕ್ಕೆ ಹೋಗಲು ನಿಜವಾಗಲೂ ಫ‌ಸ್ಟ್‌ಕ್ಲಾಸ್‌ ಟಿಕೆಟ್‌ ಸಿಗುತ್ತಾ? ತಾವು ಕೆಟ್ಟ ಕೆಲಸ ಮಾಡೋದಲ್ಲದೆ ತಮ್ಮ ಮಕ್ಕಳ ಪಾಪದ ಲೆಕ್ಕವನ್ನೂ ತಾವೇ ಬೆಳೆಸುತ್ತಾ ಹೋಗುತ್ತಾರೆ.

ಭೂಮಿಯ ಮೇಲೆ ಹಣ, ದೇಹ, ಪತಿ, ಪತ್ನಿ, ಸಂಬಂಧಗಳು ಯಾವುದೂ ಶಾಶ್ವತವಲ್ಲ. ಧರ್ಮಾಚರಣೆ ಮಾತ್ರ ಶಾಶ್ವತವಾದದ್ದು. ಧರ್ಮಾಚರಣೆಯೆಂದರೆ ದೇವರ ಪೂಜೆ ಮಾಡುವುದು ಎಂದುಕೊಳ್ಳಬೇಡಿ. ಒಳ್ಳೆಯತನದಿಂದ ಬದುಕುವುದೇ ಧರ್ಮಾಚರಣೆ. ನಾವು ಎಷ್ಟೇ ತಪ್ಪುಗಳನ್ನು ಮಾಡಿದರೂ ಸಹ ಅವುಗಳನ್ನು ತಿದ್ದಿಕೊಳ್ಳಲು ಅವಕಾಶವಿರುತ್ತದೆ. ಎಲ್ಲವನ್ನೂ ಧರ್ಮದ ಕಣ್ಣುಗಳಿಂದ ನೋಡಿದಾಗ ನಮ್ಮ ಜೀವನದ ಮುಂದಿನ ಹೆಜ್ಜೆ ಹೇಗೆ ಇಡಬೇಕು ಎಂಬುದು ತಾನಾಗಿಯೇ ಅರಿವಾಗುತ್ತದೆ. ಜೀವಾವಸ್ಥೆಯಲ್ಲಿ ಮನುಷ್ಯನಿಗೆ ಆತನ ಆತ್ಮವೇ ಬಂಧು. ಮರಣವಾದ ಕ್ಷಣ ಮಾತ್ರದಲ್ಲಿ ಮನುಷ್ಯನ ಸಂಪತ್ತು ಮನೆಯಲ್ಲಿಯೇ ಉಳಿದುಹೋಗುತ್ತದೆ. ಬಂಧುಗಳು ಸ್ಮಶಾನ ದಲ್ಲಿಯೇ ದೂರ ಸರಿದುಹೋಗುತ್ತಾರೆ. ಶರೀರ ಭಸ್ಮವಾಗಿ ಹೋಗುತ್ತದೆ. ಸತ್ತ ನಂತರ ನಾವು ಯಾರ ಮಗಳು/ಮಗ, ಯಾರ ಪತ್ನಿ/ಪತಿ ಇವು ಯಾವುದೂ ಯಮನ ಬಳಿ ಸಹಾಯ ಮಾಡಲು ಸಾಧ್ಯವಿಲ್ಲ. ನಾನು ದೊಡ್ಡ ಮಂತ್ರಿಗಳ ಮಗಳಾಗಿರಲಿ ಅಥವಾ ಬೀದಿಯಲ್ಲಿ ಹುಟ್ಟಿರುವ ಅನಾಥೆಯಾಗಿರಲಿ ನನ್ನ ಈ ಜನ್ಮಕ್ಕೆ ನಾನೇ ಕಾರಣ. ಹಾಗೆಯೇ ನನ್ನ ಮುಂದಿನ ಜನ್ಮಕ್ಕೆ ನನ್ನನ್ನು ನಾನೇ ಸಜ್ಜುಮಾಡಿಕೊಳ್ಳಬೇಕು. ನನ್ನ ಜೀವನಕ್ಕೆ ನಾನೇ ಉತ್ತರಿಸಬೇಕು. 

ಕೆಲವರು ಪಾಪದ ಕೆಲಸಗಳನ್ನು ಮಾಡಿ ಹಣ ಸಂಪಾದಿಸಿ ಅದನ್ನು ಬಡವರಿಗೆ ಹಂಚಿ ನಾನು ಒಳ್ಳೇ ಕೆಲಸ ಮಾಡುತ್ತಿದ್ದೇನೆ ಎಂದುಕೊಳ್ಳುತ್ತಾರೆ. ಅದು ತಪ್ಪು. ಒಂದು ಪಾಪದ ಕೆಲಸ ಮಾಡು ವುದಲ್ಲದೆ ಸೋಗಲಾಡಿತನ ಮಾಡುತ್ತಾ ಕುಶಲೋಪರಿ ವಿಚಾರಿ ಸುವುದು, ಧರ್ಮವನ್ನು ದುರ್ಬಳಕೆ ಮಾಡಿಕೊಳ್ಳುವುದು ಇವೆಲ್ಲ ಒಂದರ ಮೇಲೊಂದು ಪಾಪ ಕರ್ಮದ ಪುಸ್ತಕದಲ್ಲಿ ಸೇರಿಕೊಳ್ಳು ತ್ತದೆಯೇ ಹೊರತು ಪುಣ್ಯವನ್ನಂತೂ ನೀಡುವುದಿಲ್ಲ. ಮೈ ಬಗ್ಗಿಸಿ, ಧರ್ಮದಿಂದ ದುಡಿದು ಜನರ ಶ್ರೇಯಸ್ಸನ್ನು ಬಯಸಿದರೆ ಮಾತ್ರ ಪುಣ್ಯದ ಪುಸ್ತಕ ತೆರೆದುಕೊಳ್ಳುವುದು. ಕೆಲವು ಶ್ರೀಮಂತರು ಮಹಾನ್‌ ಒಳ್ಳೆಯವರಂತೆ ಲಕ್ಷಣವಾಗಿ ಹಣೆಗೆ ವಿಭೂತಿ ಕುಂಕುಮ ಇಟ್ಟುಕೊಂಡು ದಿನ ಆ ಬೆಳಿಗ್ಗೆ ದೇವಸ್ಥಾನಕ್ಕೆ ಹೋಗು ವುದ ಲ್ಲದೆ ಹಲವು ದೇವಸ್ಥಾನದ ಜೀರ್ಣೋದ್ಧಾರಕ್ಕಾಗಿ ಲಕ್ಷಾಂತರ ಹಣ ಕೊಟ್ಟು ದೇವರೇ ಒಳ್ಳೇದು ಮಾಡಪ್ಪಾ ಅಂತ ಕೇಳಿಕೊಳ್ಳುತ್ತಾರೆ. ದೇವಸ್ಥಾನದಿಂದ ಹೊರಬರುತ್ತಿದ್ದಂತೆಯೇ ಹದ್ದುಗಳಂತೆ ಕೆಟ್ಟದ್ದನ್ನು ಮಾಡಲು ಹೊಂಚುಹಾಕುತ್ತಾರೆ. ದುಡ್ಡಿನಿಂದ ಏನನ್ನು ಬೇಕಾದರೂ ಪಡೆದುಕೊಳ್ಳಬಹುದು ಅಂತ ಎಷ್ಟೋ ಹೆಂಗಸರನ್ನು ದುಡ್ಡು ಬಿಸಾಕಿ ಉಪಯೋಗಿಸಿಕೊಳ್ಳುತ್ತಾರೆ. ಅದೇ ರೀತಿ ಮುಂದಿನ ದಿನ ಮತ್ತೂಂದು ಹಣದ ಕಂತೆ ಎತ್ತಿ ಸಮಾಜದ ಉದ್ಧಾರಕ್ಕಾಗಿ ನಾನು ಕೊಡ್ತಿದ್ದೀನಿ ಅಂತ ಘೋಷಿಸುತ್ತಾರೆ.

ಹಣದಿಂದ ಏನನ್ನು ಬೇಕಾದರೂ ಪಡೆಯಬಹುದು ಸರಿ, ಆದರೆ ದೇವರನ್ನಲ್ಲ, ಪುಣ್ಯವನ್ನಲ್ಲ. ಹಣದಿಂದ ದೇವರ ದರ್ಶನ ಪಡೆದರೂ ಪಾಪಿಗಳು ಎಂದಿಗೂ ದೇವರನ್ನು ಪಡೆಯಲು ಸಾಧ್ಯವೇ ಇಲ್ಲ ಆವರಿಗೆ ಪುನರಪಿ ಜನನಂ ಪುನರಪಿ ಮರಣಂ ಖಚಿತ. ಸ್ವಲ್ಪ ಪಾಪ ಮಾಡಿದರೆ ಎಲ್ಲರೂ ಗೌರವಿಸುವ ಯಾವು ದಾದರೂ ಮುಗ್ಧ ಮೂಕ ಪ್ರಾಣಿಯಾಗಿ ಹುಟ್ಟಿ ಬರಲು ಅವಕಾಶ ವಿರಬಹುದೇನೋ. ಆದರೆ ಅತಿಯಾಗಿ ಪಾಪ ಮಾಡಿದವರು ಮುಂದಿನ ಜನ್ಮದಲ್ಲಿ ಕ್ಷುಲ್ಲಕ ಜೀವಿಗಳಾಗಿ ಹುಟ್ಟತ್ತಾರೆ. ನಾವು ಏನಾಗಿ ಹುಟ್ಟಬೇಕು ಎಂಬುದನ್ನು ನಾವೇ ನಿರ್ಧರಿಸಬೇಕು. ನಮಗೆ ಜನ್ಮವೇ ಬೇಡ ಎಂದರೆ ಮುಕ್ತಿಯನ್ನು ಪಡೆಯಲು ಶ್ರೀ ಹರಿಯನ್ನು ಸ್ಮರಿಸಬೇಕು ಅಷ್ಟೇ… ತುಂಬಾ ಸುಲಭ!

Advertisement

Udayavani is now on Telegram. Click here to join our channel and stay updated with the latest news.

Next