ಡೆಹ್ರಾಡೂನ್: “ಜಗತ್ತಿನ ಅತಿ ಎತ್ತರದ ಶಿಖರವಾದ ಎವರೆಸ್ಟ್‌ನಲ್ಲಿ ಇತ್ತೀಚೆಗೆ ದಟ್ಟಣೆ ಹೆಚ್ಚಾಗುತ್ತಿದೆ. ಎಲ್ಲ ರೀತಿಯ ಸೌಕರ್ಯಗಳನ್ನು ಖರೀದಿಸಲು ಶಕ್ತವಾಗಿರುವ ಹಣವಂತ ಪರ್ವತಾರೋಹಿಗಳು ಹೆಚ್ಚಾಗಿದ್ದಾರೆಯೇ ವಿನಾ ನಿಖರ ಉದ್ದೇಶ, ತರಬೇತಿ ಮತ್ತು ಅನುಭವಿಗಳ ಕೊರತೆಯಿದೆ.”
ಹೀಗೆಂದು ಹೇಳಿದ್ದು ಮೌಂಟ್ ಎವರೆಸ್ಟ್ ಅನ್ನು ಏರಿದ ಮೊತ್ತಮೊದಲ ಭಾರತೀಯ ಮಹಿಳೆ ಬಚೇಂದ್ರಿ ಪಾಲ್.
ಎಡ್ಮಂಡ್ ಹಿಲರಿ ಮತ್ತು ಥೇನ್‌ಸಿಂಗ್ ನಾರ್ಗೆ ಅವರು ಮೊದಲ ಬಾರಿಗೆ ಎವರೆಸ್ಟ್ ಪರ್ವತಾರೋಹಣ ಮಾಡಿ (1953, ಮೇ 29) ಸೋಮವಾರಕ್ಕೆ ಸರಿಯಾಗಿ 70 ವರ್ಷಗಳು ಪೂರ್ಣಗೊಂಡಿವೆ. 70ನೇ ವರ್ಷಾಚರಣೆ ಹಿನ್ನೆಲೆಯಲ್ಲಿ ಮಾತನಾಡಿರುವ ಬಚೇಂದ್ರಿ ಪಾಲ್, “ನಾನು 1984ರಲ್ಲಿ ಎವರೆಸ್ಟ್ ಶಿಖರವೇರುವ ಸಂದರ್ಭದಲ್ಲಿ ಕೇವಲ ಅನುಭವಿಗಳು ಮತ್ತು ತರಬೇತಿ ಪಡೆದವರಿಗೆ ಮಾತ್ರ ಅವಕಾಶ ನೀಡಲಾಗುತ್ತಿತ್ತು. ಆದರೆ, ಈಗ ಹಣ ಇರುವ ಯಾರು ಬೇಕಿದ್ದರೂ ಶಿಖರವೇರಬಹುದಾಗಿದೆ. ಎವರೆಸ್ಟ್ ಎನ್ನುವುದು ಈಗ ಪ್ರವಾಸಿ ತಾಣವಾಗಿ ಮಾರ್ಪಾಡಾಗಿದೆ. ಹೀಗಾಗಿ, ಅಲ್ಲಿ ದಟ್ಟಣೆ ಹೆಚ್ಚಾಗಿದೆ. ಸಾವಿನ ಸಂಖ್ಯೆಯೂ ಏರಲೂ ಇದುವೇ ಕಾರಣ’ ಎಂದು ಹೇಳಿದ್ದಾರೆ.
“ಎವರೆಸ್ಟ್ ಮಾತ್ರವಲ್ಲ, ನೇಪಾಳದ ಪ್ರತಿಯೊಂದು ಪರ್ವತಾರೋಹಣವನ್ನೂ ವಾಣಿಜ್ಯೀಕರಣ ಮಾಡಲಾಗಿದೆ’ ಎಂದು 7 ಬಾರಿ ಎವರೆಸ್ಟ್ ಏರಿರುವ ಲವ್ ರಾಜ್ ಸಿಂಗ್ ಧರ್ಮಶಕು ಕಳವಳ ವ್ಯಕ್ತಪಡಿಸಿದ್ದಾರೆ.