ಸಿದ್ದಾಪುರ: ತುಂಗಭದ್ರಾ ನದಿ ಪಾತ್ರದ ಗ್ರಾಮಗಳಲ್ಲಿ ಹಿಂಗಾರು ಹಂಗಾಮಿನ ಬೇಸಿಗೆ ಭತ್ತದ ಬೆಳೆ ಕಟಾವು ಕಾರ್ಯ ಚುರುಕುಗೊಂಡಿದೆ. ಮುಂಗಾರು ಹಂಗಾಮಿನಲ್ಲಿ ತುಂಗಭದ್ರಾ ಡ್ಯಾಂ ತುಂಬಿದ್ದರಿಂದ ಈ ಬಾರಿ ಎಡದಂಡೆ ಕಾಲುವೆ ವ್ಯಾಪ್ತಿಯ ರೈತರು ಎರಡು ಬೆಳೆ ಬೆಳೆಯಬಹುದೆಂದು ಸಂತಸಗೊಂಡಿದ್ದರು. ಆದರೆ ಅಧಿಕಾರಿಗಳು ಸರಿಯಾಗಿ ನೀರಿನ ನಿರ್ವಹಣೆ ಮಾಡುವಲ್ಲಿ ವಿಫಲರಾಗಿದ್ದರಿಂದ ಎರಡನೇ ಬೆಳೆ ಬೆಳೆಯಲು ಕೈತಪ್ಪಿತೆಂಬ ಆತಂಕ ರೈತರಲ್ಲಿ ಮನೆಮಾಡಿದೆ.
ಎರಡನೇ ಬೆಳೆಯಾಗಿ ಆರ್.ಎನ್.ಆರ್ ಹಾಗೂ ಕಾವೇರಿ ಸೋನಾ ತಳಿ ಭತ್ತ ಬೆಳೆದಿದ್ದರು. ಈಗಾಗಲೇ ಈ ಬೇಳೆ ಕಟಾವಿಗೆ ಬಂದಿದ್ದು ಹಾರ್ವೆಸ್ಟರ್ ಮೂಲಕ ರೈತರು ಭತ್ತದ ಕಟಾವು ಕಾರ್ಯ ಜೋರಾಗಿ ನಡೆಯುತ್ತಿದೆ. ಜತೆಗೆ ಇಳುವರಿ ಸಹ ಈ ಭಾರಿ ಉತ್ತಮವಾಗಿದೆ ಎನ್ನುತ್ತಾರೆ ಹೆಬ್ಟಾಳದ ರೈತ ಲಕ್ಷ್ಮಣ. ಯಾವುದೇ ರೋಗ ತಗುಲದ ಭತ್ತ ಎಕರೆಗೆ 40ರಿಂದ 45ಚೀಲ ಇಳುವರಿ ದೊರಕುತ್ತಿದೆ. ಆದರೆ ಕೆಲವು ಕಡೆ ರೋಗಕ್ಕೆ ತುತ್ತಾದ ಭತ್ತ ಎಕರೆಗೆ 30 ರಿಂದ 35 ಚೀಲ ಇಳುವರಿ ದೊರಕುತ್ತಿದೆ.
ಭತ್ತ ಕಟಾವಿನ ನಂತರ ಆ ಭತ್ತವನ್ನು ರೈತರು ತಮ್ಮ ಜಮೀನಿನಲ್ಲಿ ಇಲ್ಲವೇ ರಸ್ತೆಯ ಒಂದು ಬದಿ ಉದ್ದುದ್ದವಾಗಿ ಭತ್ತ ಸುರುವಿ ಒಣಗಿಸಿ ರಾಶಿ ಮಾಡುತ್ತಿದ್ದಾರೆ. ಈ ಒಣಗಿಸಿದ ಆರ್.ಎನ್.ಆರ್ ಭತ್ತಕ್ಕೆ ಈ ಬಾರಿ 75 ಕೇಜಿ ಚೀಲವೊಂದಕ್ಕೆ 1,400 ರಿಂದ 1450 ರೂ. ದರ ಇದ್ದು, ರೈತರ ಮುಖದಲ್ಲಿ ಸ್ವಲ್ಪ ಮಂದಹಾಸ ಮೂಡಿದೆ ಎನ್ನಬಹುದು.
ಈ ಬಾರಿ ಹಿಂಗಾರು ಹಂಗಾಮಿನ ಭತ್ತದ ಗದ್ದೆಯ ಎಕರೆ ಒಂದಕ್ಕೆ 25 ರಿಂದ 30 ಸಾವಿರ ರೂ.ಖರ್ಚು ಮಾಡಲಾಗಿದೆ. ಎಕರೆಗೆ 40ರಿಂದ 45ಚೀಲ ಇಳುವರಿ ದೊರಕಿದರೆ, ಇವತ್ತಿನ ದರದ ಲೆಕ್ಕ ಹಾಕಿ ಸ್ವಂತ ಜಮಿನು ಹೊಂದಿದ್ದರೆ ಎಲ್ಲಾ ಖರ್ಚು ತೆಗೆದು ಎಕರೆಗೆ 10 ರಿಂದ 15 ಸಾವಿರ ಉಳಿತಾಯವಾಗುತ್ತದೆ. ಲೀಜ್‌ಗೆ(ಗುತ್ತಿಗೆ) ಮಾಡಿದ್ದರೆ ಎಕರೆಗೆ 4 ಸಾವಿರ ಉಳಿತಾಯವಾಗುತ್ತದೆ ಎಂದು ಮೂಸ್ಟೂರಿನ ರೈತರು ಹೆಳುತ್ತಾರೆ.
Advertisement
ತುಂಗಭದ್ರಾ ನದಿ ನೀರನ್ನಾಶ್ರಯಿಸಿ ಜಮಾಪುರ, ಉಳೇನೂರು, ಅಯೋಧ್ಯಾ, ಢಣಾಪುರ, ಹೆಬ್ಟಾಳ, ಮುಸ್ಟೂರು ಸೇರಿದಂತೆ ಇತರೆ ನದಿ ದಂಡೆಯ ಪಾತ್ರದ ಗ್ರಾಮಗಳ ರೈತರು ಹರಿಯುವ ತುಂಗಭದ್ರಾ ನದಿ ನೀರನ್ನೇ ಆಶ್ರಯಿಸಿ ಪಂಪ್‌ಸೆಟ್ ಮೂಲಕ ಸಾವಿರಾರು ಎಕರೆ ಪ್ರದೇಶದಲ್ಲಿ ಎರಡನೇ ಬೆಳೆಯಾಗಿ ಭತ್ತ ಬೆಳೆದಿದ್ದರು.
Related Articles
Advertisement
ನೆಲಕ್ಕುರುಳಿದ ಭತ್ತ: ಇತ್ತೀಚೆಗೆ ಬೀಸಿದ ಮಳೆ, ಗಾಳಿಗೆ ಹೆಬ್ಟಾಳ ಬಳಿ ಕಟಾವಿಗೆ ಬಂದಿದ್ದ ಭತ್ತದ ಬೆಳೆ ನೆಲಕ್ಕುರುಳಿ ಸ್ವಲ್ಪ ಪ್ರಮಾಣದಲ್ಲಿ ನಷ್ಟ ಸಂಭವಿಸಿದೆ ಎನ್ನಲಾಗಿದೆ. ನೆಲಕ್ಕುರುಳಿದ ಭತ್ತ ಹಾರ್ವೆಸ್ಟರ್ ಮೂಲಕ ಕಟಾವು ಮಾಡಲು ಸಮಯವೂ ಜಾಸ್ತಿ ತಗೊಂಡು ಖರ್ಚು ಹೆಚ್ಚಾಗುತ್ತದೆ ಎನ್ನುತ್ತಾರೆ ರೈತರು. ಒಟ್ಟಾರೆ ನದಿ ಪಾತ್ರದ ಗ್ರಾಮಗಳ ರೈತರಲ್ಲಿ ಎರಡನೇ ಬೆಳೆಯ ಭತ್ತದ ಕಟಾವಿನ ಕಾರ್ಯ ಸುಗ್ಗಿ ಸಂಭ್ರಮ ಮನೆ ಮಾಡಿದೆ ಎಂದೇ ಹೇಳಬಹುದು.
•ಸಿದ್ದನಗೌಡ ಹೊಸಮನಿ