Advertisement

ರಂಗ ಶಿಬಿರಗಳಿಂದ ಅಭಿವ್ಯಕ್ತಿ ಸ್ವಾತಂತ್ರ್ಯ ಜಾಗೃತ

05:15 PM May 02, 2019 | Naveen |

ರಿಪ್ಪನ್‌ಪೇಟೆ: ಗ್ರಾಮೀಣ ಪ್ರದೇಶಗಳಲ್ಲಿ ರಂಗ ಶಿಬಿರಗಳತ್ತ ಆಸಕ್ತಿ ಮೂಡುತ್ತಿದ್ದು ಇವುಗಳು ಮಕ್ಕಳಲ್ಲಿ ಸುಪ್ತವಾಗಿರುವ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಜಾಗೃತಗೊಳಿಸುತ್ತದೆ ಎಂದು ಮಳಲಿ ಮಠದ ಶ್ರೀ ಗುರುನಾಗಭೂಷಣ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

Advertisement

ಪಟ್ಟಣದ ಜಿಎಸ್‌ಬಿ ಕಲ್ಯಾಣ ಮಂದಿರದಲ್ಲಿ ಮಲೆನಾಡು ಕಲಾ ತಂಡ, ಜಾಗೃತಿ ಕಲಾ ವೇದಿಕೆ ಹಾಗೂ ವಿವಿಧ ಸಂಘ-ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ 15 ದಿನಗಳವರೆಗೆ ಆಯೋಜಿಸಲಾಗಿದ್ದ ‘ಹಳ್ಳಿ ಮಕ್ಕಳ ರಂಗ ಹಬ್ಬ’ ಕಾರ್ಯಕ್ರಮದ ಸಮಾರೋಪ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.

ಪ್ರತಿಯೊಂದು ಮಗುವಿನಲ್ಲಿಯೂ ಒಂದು ಪ್ರತಿಭೆ ಅಡಕವಾಗಿರುತ್ತದೆ. ಅಂತಹ ಪ್ರತಿಭೆ ಹೊರಹೊಮ್ಮಲು ಚಡಪಡಿಸುವ ಮಗು ಅವಕಾಶಕ್ಕಾಗಿ ಹಾತೊರೆಯುತ್ತಿರುತ್ತದೆ. ಪೋಷಕರು ತಮ್ಮ ಮನಸ್ಸಿನಲ್ಲಿರುವಂತೆ ಮಕ್ಕಳನ್ನು ಬೆಳೆಸುವ ಆಲೋಚನೆಯಲ್ಲಿ ಇವರ ಆಸಕ್ತಿಯನ್ನು ಗಣನೆಗೆ ತೆಗೆದುಕೊಳ್ಳುವುದಿಲ್ಲ. ಅಂತಹ ಸಂದರ್ಭದಲ್ಲಿ ಪೋಷಕರು ಮತ್ತು ಮಕ್ಕಳ ಮಧ್ಯೆ ದ್ವಂದ್ವ ಏರ್ಪಟ್ಟು ಏನನ್ನೂ ಮಾಡಬೇಕು ಎಂಬ ನಿಖರ ಗುರಿ ಹೊಂದಲು ಸಾಧ್ಯವಾಗುವುದಿಲ್ಲ. ರಂಗ ಶಿಬಿರಗಳಲ್ಲಿ ಕಲಿಸುವ ವಿವಿಧ ಪ್ರಕಾರಗಳ ಕಲೆಗಳಿಂದ ಅವರಲ್ಲಿರುವ ಆಸಕ್ತಿಗೆ ಪ್ರೋತ್ಸಾಹ ದೊರೆತಂತಾಗಿ ಮಗುವಿನ ಮನಸ್ಸಿನಲ್ಲಿ ನನ್ನ ಬಯಕೆಯನ್ನು ಪಡೆದಿದ್ದೇನೆ ಎಂಬ ಸಂತೋಷದ ಕ್ಷಣವನ್ನು ಕಾಣಬಹುದು ಎಂದರು.

ಸಾಹಿತಿ ಡಾ| ಶ್ರೀಪತಿ ಹಳಗುಂದ ಮಾತನಾಡಿ, ರಂಗ ಶಿಬಿರಗಳಲ್ಲಿ ಮಕ್ಕಳ ತರಬೇತಿಯ ಜೊತೆಗೆ ಪೋಷಕರು ಅರಿಯುವ ಅಗತ್ಯವಿದೆ. ಕುಟುಂಬದೊಂದಿಗೆ ಬಾಂಧವ್ಯವನ್ನು ವೃದ್ಧಿಸಿಕೊಳ್ಳಲು ಅವಕಾಶ ಕಲ್ಪಿಸಲಾಗುತ್ತದೆ. ಇದನ್ನು ಬಳಸಿಕೊಂಡ ಪೋಷಕರು ತಮ್ಮ ಮಕ್ಕಳಿಗೆ ತಾವೇ ಆದರ್ಶರಾಗಬೇಕೇ ವಿನಃ ಬೇರೆಯವರನ್ನು ಬೆರಳು ಮಾಡುವುದು ಸರಿಯಲ್ಲ ಎಂದರು.

ಶಿಬಿರದ ಮಕ್ಕಳು ‘ಸಾಯೋ ತನಕ ಕಾಯಬೇಡ’, ‘ಪುಟ್ಟಜ್ಜಿ ಪುಟ್ಟಜ್ಜಿ ಕತೆ ಹೇಳು’ ಹಾಗೂ ‘ಕರುಣೆಗೆ ಜೈ’ ಎಂಬ ಮೂರು ನಾಟಕಗಳನ್ನು ಮನೋಜ್ಞವಾಗಿ ಅಭಿನಯಿಸಿದರು. ರಂಗಗೀತೆ, ಜಾನಪದ ನೃತ್ಯದಿಂದ ಸಭಿಕರ ಮನ ತಣಿಸಿದರು.

Advertisement

ಕಾರ್ಯಕ್ರಮದಲ್ಲಿ ಸಾಹಿತಿ ಹೊ.ನಾ. ಸತ್ಯ, ಪ್ರೊ| ರತ್ನಾಕರ, ಮುಖಂಡರಾದ ಎಂ.ಬಿ. ಲಕ್ಷ್ಮಣಗೌಡ, ಜಂಬಳ್ಳಿ ಗಿರೀಶ, ಎನ. ಸತೀಶ, ಮಂಜುನಾಥ ಕಾಮತ್‌, ನಿದೇರ್ಶಕ ಗಣೇಶ ಆರ್‌. ಕೆಂಚನಾಲ ಇನ್ನಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next