ಹಿಂದೀಲಿ “ಸರ್ಕಾರ್’ ಎಂಬ ಚಿತ್ರ ಬಂದಿದ್ದು ಗೊತ್ತಿದೆ. ಅಮಿತಾಭ್ ಬಚ್ಚನ್ ಅಭಿನಯದ ಈ ಚಿತ್ರ ಸೂಪರ್ ಹಿಟ್ ಆಗಿ, ನಂತರ ಎರಡು ಭಾಗಗಳು ಬಿಡುಗಡೆಯಾಗಿದ್ದೂ ಆಗಿದೆ. ಈಗ ಕನ್ನಡದಲ್ಲಿ ಅದೇ ಹೆಸರಿನ ಚಿತ್ರವೊಂದು ತಯಾರಾಗಿದೆ. ಸದ್ಯದಲ್ಲೇ ಬಿಡುಗಡೆಯೂ ಆಗುತ್ತಿದೆ. ಈ ಮಧ್ಯೆ ಚಿತ್ರದ ಪೋಸ್ಟರ್ ಅನಾವರಣಗೊಳಿಸುವ ಮೂಲಕ ಚಿತ್ರದ ಬಗ್ಗೆ ಮಾತನಾಡುವುದಕ್ಕೆ ಮೊದಲ ಬಾರಿಗೆ ಮಾಧ್ಯಮದವರೆದುರು ಚಿತ್ರತಂಡದವರು ಕಾಣಿಸಿಕೊಂಡರು.
“ಸರ್ಕಾರ್’ ಚಿತ್ರವನ್ನು ಮಂಜು ಪ್ರೀತಮ್ ಎನ್ನುವವರು ನಿರ್ದೇಶಿಸಿದ್ದಾರೆ. ಇನ್ನು ಚಿತ್ರದಲ್ಲಿ ಜಾಗ್ವಾರ್ ಜಗ್ಗಿ ನಾಯಕನಾಗಿ ನಟಿಸಿದರೆ, ಲೇಖ ಚಂದ್ರ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಜೊತೆಗೆ ಶೋಭರಾಜ್, ಯಮುನಾ ಶ್ರೀನಿಧಿ, “ಉಗ್ರಂ’ ಮಂಜು, ಧರ್ಮ ಮುಂತಾದವರು ನಟಿಸಿದ್ದಾರೆ. ಇನ್ನು ಪ್ರೀತಮ್ ಅವರ ತಾಯಿ ಪಾರ್ವತಿ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.
ನಿರ್ದೇಶಕ ಮಂಜು ಈ ಚಿತ್ರದಲ್ಲಿ ರೌಡಿಸಂ ಹಿನ್ನೆಲೆಯ ಕಥೆಯೊಂದನ್ನು ಹೇಳುವುದಕ್ಕೆ ಹೊರಟಿದ್ದಾರಂತೆ. ರೌಡಿಸಂ ಎನ್ನುವುದು ನೀರಿನ ಮೇಲೆ ಗುಳ್ಳೆ ಇರುವಂತೆ, ಯಾವಾಗ ಏನು ಬೇಕಾದರೂ ಆಗಬಹುದು ಎಂಬ ವಿಷಯವನ್ನು ಈ ಚಿತ್ರದ ಮೂಲಕ ಹೇಳಹೊರಟಿದ್ದಾರೆ. ರೌಡಿಸಂಗೆ ಇಳಿದರೆ ತಂದೆ-ತಾಯಿ, ಪ್ರೀತಿ, ಸ್ನೇಹ ಎಲ್ಲವನ್ನೂ ಹೇಗೆ ಕಳೆದುಕೊಳ್ಳಬೇಕಾಗುತ್ತದೆ ಎಂದು ಈ ಕಥೆಯಲ್ಲಿ ನಿರೂಪಿಸುವ ಪ್ರಯತ್ನವನ್ನು ಮಾಡಿದ್ದಾರೆ.
“ದಿ ಬುಲೆಟ್’ ಎಂಬ ಅಡಿಬರಹ ಇರುವ “ಸರ್ಕಾರ್’ ಚಿತ್ರಕ್ಕೆ ಬೆಂಗಳೂರು, ಹುಬ್ಬಳ್ಳಿ, ಉಡುಪಿ ಮುಂತಾದ ಕಡೆ ಚಿತ್ರೀಕರಣ ಮಾಡಲಾಗಿದೆ. ಕಥೆಯು ಹುಬ್ಬಳ್ಳಿಯಲ್ಲಿ ಶುರುವಾಗಲಿದ್ದು, ನಂತರ ಬೆಂಗಳೂರಿಗೆ ಬರುತ್ತದಂತೆ. ಚಿತ್ರಕ್ಕೆ ಅರುಣ್ ಕುಮಾರ್ ಅವರ ಛಾಯಾಗ್ರಹಣ ಮತ್ತು ಸತೀಶ್ ಆರ್ಯನ್ ಅವರ ಸಂಗೀತವಿದೆ.