ಮುಂಬಯಿ: ಸುಶಾಂತ್ ಸಿಂಗ್ ರಜಪೂತ್ ಪ್ರಕರಣದಲ್ಲಿ ನಟಿ ರಿಯಾ ಚಕ್ರವರ್ತಿಗೆ ಬಾಂಬೆ ಹೈಕೋರ್ಟ್ ನೀಡಿದ ಜಾಮೀನು ಪ್ರಶ್ನಿಸುವುದಿಲ್ಲ ಎಂದು ಮಂಗಳವಾರ ಕೇಂದ್ರ ಸರ್ಕಾರ (ಜು18 ರಂದು) ಸುಪ್ರೀಂ ಕೋರ್ಟ್ ಗೆ ಹೇಳಿದೆ.
2020 ರಲ್ಲಿ ಗೆಳೆಯ ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿ ರಿಯಾ ಅವರನ್ನು ಡ್ರಗ್ಸ್ ಪ್ರಕರಣದಲ್ಲಿ ನಾರ್ಕೋಟಿಕ್ ಡ್ರಗ್ಸ್ ಮತ್ತು ಸೈಕೋಟ್ರೋಪಿಕ್ ಸಬ್ಸ್ಟೆನ್ಸಸ್ ಕಾಯ್ದೆ ಅನ್ವಯ ಪ್ರಕರಣ ದಾಖಲಿಸಿ ಬಂಧಿಸಲಾಗಿತ್ತು. ಬಳಿಕ ಬಾಂಬೆ ಹೈಕೋರ್ಟ್ ಅಕ್ಟೋಬರ್ 2021 ರಲ್ಲಿ ರಿಯಾ ಚಕ್ರವರ್ತಿಗೆ ಜಾಮೀನು ನೀಡಿತು.
ಡ್ರಗ್ಸ್ ಖರೀದಿಸಲು ಹಣವನ್ನು ನೀಡುವುದು ಎಂದರೆ ರಿಯಾ ಯಾವುದೇ ಅಕ್ರಮ ಕಳ್ಳಸಾಗಣೆಯಲ್ಲಿ ಭಾಗಿಯಾಗಿದ್ದಾಳೆ ಎಂದರ್ಥವಲ್ಲ ಎಂದು ಬಾಂಬೆ ಹೈಕೋರ್ಟ್ ತನ್ನ ಆದೇಶದಲ್ಲಿ ಹೇಳಿತ್ತು. ಯಾರಿಗಾದರೂ ಹಣ ನೀಡಿದರೆ ಅವರು ಅದನ್ನು ಮಾಡಲು ಪ್ರೋತ್ಸಾಹಿಸಿದರು ಎಂದು ಅರ್ಥವಲ್ಲ ಎಂದು ನ್ಯಾಯಾಲಯ ಹೇಳಿತ್ತು.
ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್‌ವಿ ರಾಜು ಅವರು ನ್ಯಾಯಮೂರ್ತಿಗಳಾದ ಎಎಸ್ ಬೋಪಣ್ಣ ಮತ್ತು ಎಂಎಂ ಸುಂದ್ರೇಶ್ ಅವರ ಪೀಠಕ್ಕೆ ಜಾಮೀನು ಪ್ರಶ್ನಿಸುವುದಿಲ್ಲ ಎನ್ನುವುದರ ಬಗ್ಗೆ ಮಾಹಿತಿಯನ್ನು ನೀಡಿದ್ದಾರೆ. ಬಾಂಬೆ ಹೈಕೋರ್ಟ್‌ನ ಎನ್‌ಡಿಪಿಎಸ್ ಕಾಯ್ದೆಯ ಸೆಕ್ಷನ್ 27 ಎ ವ್ಯಾಖ್ಯಾನವನ್ನು ಸವಾಲಿಗೆ ಮುಕ್ತವಾಗಿ ಇಡಬೇಕು ಎಂದು ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್‌ವಿ ರಾಜು ಅವರು ಹೇಳಿದ್ದಾರೆ.
ಈ ವಿಚಾರ ಹೊರಬರುತ್ತಿದ್ದಂತೆ ನಟಿ ರಿಯಾ ಚಕ್ರವರ್ತಿ ಮತ್ತೆ ಟ್ರೆಂಡ್ ಆಗಿದ್ದಾರೆ. ಸುಶಾಂತ್ ಕೇಸ್ ಬಳಿಕ ಅನೇಕರ ಕೆಂಗಣ್ಣಿಗೆ ಗುರಿಯಾಗಿರುವ ರಿಯಾ ವಿರುದ್ಧ ಮತ್ತೆ ಕೆಲವರು ಕಿಡಿಕಾಡಿದ್ದಾರೆ. ರಿಯಾ ಅವರು ಜಾಮೀನು ಪ್ರಶ್ನಿಸುವುದಿಲ್ಲ ಎನ್ನುವ ವಿಚಾರ ಗೊತ್ತಾದ ಬಳಿಕ “Gratitude”( ಕೃತಜ್ಞತೆ) ಎನ್ನುವ ಸ್ಟೋರಿಯನ್ನು ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿದ್ದು ವೈರಲ್ ಆಗಿದೆ. ನಟಿ ಕೃತಜ್ಞತೆ ಹೇಳಿರುವುದು ಯಾರಿಗೆ ಮತ್ತು ಯಾಕೆ ಎನ್ನುವುದರ ಬಗ್ಗೆ ಟ್ವಿಟರ್ ನಲ್ಲಿ ಚರ್ಚೆ ಶುರುವಾಗಿದೆ.
2020 ರ ಜೂನ್ 14 ರಂದು ಮುಂಬೈನಲ್ಲಿರುವ ತಮ್ಮ ಫ್ಲಾಟ್‌ನಲ್ಲಿ ಸುಶಾಂತ್ ಸಿಂಗ್ ರಜಪೂತ್ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು.