ಮುಂಬೈ: ನಟ ಸುಶಾಂತ್ ಸಿಂಗ್ ಸಾವು ಪ್ರಕರಣದಲ್ಲಿ ಮಾದಕ ವಸ್ತು ನಂಟಿನ ವಿಚಾರದ ಬಗ್ಗೆ ತನಿಖೆ ನಡೆಸುತ್ತಿದ್ದ ಎನ್ ಸಿಬಿ ಅಧಿಕಾರಿಗಳು ಸುಶಾಂತ್ ಮಾಜಿ ಪ್ರೇಯಸಿ ರಿಯಾ ಚಕ್ರವರ್ತಿಯನ್ನು ಮಂಗಳವಾರ ಬಂಧಿಸಿದ್ದಾರೆ.
ತನಿಖೆ ನಡೆಸುವ ಉದ್ದೇಶದಿಂದ ರಿಯಾ ಚಕ್ರವರ್ತಿಗೆ ಇಂದು ಎನ್ ಸಿಬಿ ಅಧಿಕಾರಿಗಳು ಮೂರನೇ ಬಾರಿ ಸಮನ್ಸ್ ನೀಡಿದ್ದರು. ತನಿಖೆಗೆ ಹಾಜರಾದ ರಿಯಾ ಚಕ್ರವರ್ತಿಯನ್ನು ಅಧಿಕಾರಿಗಳು ಬಂಧಿಸಿದ್ದು, ಇಂದು ಸಂಜೆ ಐದು ಗಂಟೆಯ ಸುಮಾರಿಗೆ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಿದ್ದಾರೆ ಎಂದು ವರದಿಯಾಗಿದೆ.
ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ರಿಯಾ ಸಹೋದರ ಶೋವಿಕ್ ಚಕ್ರವರ್ತಿ, ಸುಶಾಂತ್ ಸಿಂಗ್ ಹೌಸ್ ಮ್ಯಾನೇಜರ್ ಸ್ಯಾಮ್ಯಯೆಲ್ ಮಿರಾಂಡ ಮತ್ತು ಆತನ ಸಿಬ್ಬಂದಿ ದೀಪೇಶ್ ಸಾವಂತ್ ರನ್ನು ಎನ್ ಸಿಬಿ ಅಧಿಕಾರಿಗಳು ಬಂಧನಕ್ಕೆ ಒಳಪಡಿಸಿದ್ದಾರೆ.
ಇದನ್ನೂ ಓದಿ: ಸ್ಯಾಂಡಲ್ ವುಡ್ ಡ್ರಗ್ ಪ್ರಕರಣ: ನಟಿ ಸಂಜನಾ ಗಲ್ರಾನಿ ಬಂಧನ
ಮಾದಕ ವಸ್ತು ಸಂಗ್ರಹಣೆ ಮತ್ತು ಸೇವನೆ ಪ್ರಕರಣದಡಿಯಲ್ಲಿ ರಿಯಾರನ್ನು ಬಂಧಿಸಲಾಗಿದೆ ಎಂದು ವರದಿಯಾಗಿದೆ. ಬುಧವಾರ ಬೆಳಿಗ್ಗೆ ರಿಯಾ ಮತ್ತು ಉಳಿದ ಮೂವರು ಬಂಧಿತರನ್ನು ನ್ಯಾಯಾಧೀಶರ ಎದುರು ಹಾಜರು ಪಡಿಸಲಾಗುವುದು ಎಂದು ವರದಿಯಾಗಿದೆ.
ಬಾಲಿವುಡ್ ನಟ ಸುಶಾಂತ್ ಸಿಂಗ್ ಜೂನ್ 14ರಂದು ತಮ್ಮ ಮುಂಬೈ ನಿವಾಸದಲ್ಲಿ ಸಾವಿಗೀಡಾಗಿದ್ದರು. ಸಾವು ಪ್ರಕರಣದ ತನಿಖೆಯನ್ನು ಸಿಬಿಐ ನಡೆಸುತ್ತಿದ್ದು, ಪ್ರಕರಣದಲ್ಲಿ ಮಾದಕ ವಸ್ತು ನಂಟು ಬೆಳಕಿಗೆ ಬಂದ ಹಿನ್ನಲೆಯಲ್ಲಿ ಎನ್ ಸಿಬಿ ಪ್ರಕರಣವನ್ನು ಕೈಗೆತ್ತಿಕೊಂಡಿತ್ತು.
ರಿಯಾ ಮತ್ತು ಆಕೆಯ ಆತ್ಮೀಯ ಬಳಗವು ಸುಶಾಂತ್‌ಗೆ ಒತ್ತಾಯಪೂರ್ವಕವಾಗಿ ಡ್ರಗ್ ನೀಡುತ್ತಿದ್ದರು ಎಂದು ಸುಶಾಂತ್‌ರ ಸ್ನೇಹಿತರೊಬ್ಬರು ಸೋಮವಾರ ಹೇಳಿದ್ದಾರೆ.
ಸುಶಾಂತ್‌ರ ಹಣಕಾಸು ವ್ಯವಹಾರದಿಂದ ಹಿಡಿದು ಎಲ್ಲವನ್ನೂ ರಿಯಾ ನಿಯಂತ್ರಿಸುತ್ತಿದ್ದರು. ಸುಶಾಂತ್ ಡ್ರಗ್ ಸೇವಿಸುತ್ತಿರಲಿಲ್ಲ. ಅಲ್ಲದೆ, ಇತರರಿಗೂ ಅದನ್ನು ಸೇವಿಸದಂತೆ ಸಲಹೆ ನೀಡುತ್ತಿದ್ದರು. ಆದರೆ, ರಿಯಾ ಮತ್ತು ಆಕೆಯ ಬಳಗವು ಭಾರೀ ಪ್ರಮಾಣದಲ್ಲಿ ಡ್ರಗ್ ಅನ್ನು ಸುಶಾಂತ್‌ಗೆ ನೀಡುತ್ತಿತ್ತು. ಅವರ ಮನೆಯಲ್ಲಿ ಸಾಕಷ್ಟು ಔಷಧಗಳು ಇದ್ದಿದ್ದನ್ನೂ ನಾನು ನೋಡಿದ್ದೇನೆ. ನಾನು ಈ ಕುರಿತ ಮಾಹಿತಿಯನ್ನು ಸಿಬಿಐಗೆ ನೀಡಿದ್ದೇನೆ ಎಂದೂ ಅವರು ಹೇಳಿರುವುದಾಗಿ ವರದಿಯಾಗಿದೆ.