ತಿಪಟೂರು: ತಾಲೂಕಿನಲ್ಲಿ ಹಾಯ್ದುಹೋಗಿರುವ ರಾಷ್ಟ್ರೀಯ ಹೆದ್ದಾರಿ 206 ರಸ್ತೆಯು ಬಿದರೆಗುಡಿ- ಅಯ್ಯನಬಾವಿಯಿಂದ ತಿಪಟೂರುವರೆಗೂ ಗುಂಡಿ ಗಳಿಂದ ರಸ್ತೆ ಹಾಳಾಗಿ ಹೋಗಿದೆ. ಇದರಿಂದ ವಾಹನ ಸಂಚಾರಕ್ಕೆ ತೀವ್ರ ತೊಂದರೆಯಾಗಿ ಅಪಘಾತಗಳಿಗೆ ಆಹ್ವಾನ ನೀಡುತ್ತಿದ್ದರೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮಾತ್ರ ಇತ್ತ ಗಮನಹರಿಸಿ ರಸ್ತೆ ಸರಿಪಡಿಸದೆ ವಾಹನ ಸವಾರರು ಹಾಗೂ ಪ್ರಯಾಣಿಕರ ಜೀವದ ಜೊತೆ ಚಲ್ಲಾಟವಾಡುತ್ತಿದೆ.
ಈ ರಸ್ತೆ ಬೆಂಗಳೂರು-ತುಮಕೂರು-ಶಿವಮೊಗ್ಗ-ಹೊನ್ನಾವರ ಮುಖ್ಯ ರಸ್ತೆಯಾಗಿರುವುದರಿಂದ ಪ್ರತಿನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತವೆ. ತಾಲೂಕಿನ ಅರ್ಧ ಭಾಗದ ಜನರು ಇದೇ ರಸ್ತೆ ಮೇಲೆಯೇ ಓಡಾಡಬೇಕಿದೆ. ಸರ್ಕಾರಿ ಹಾಗೂ ಖಾಸಗಿ ಬಸ್‌ಗಳು, ಲೆಕ್ಕವಿಲ್ಲದಷ್ಟು ಕಾರುಗಳು, ದ್ವಿಚಕ್ರವಾಹನಗಳು, ಬಾರಿ ವಾಹನಗಳು, ಶಾಲಾ- ಕಾಲೇಜುಗಳ ವಿದ್ಯಾರ್ಥಿಗಳು ಓಡಾಡುವ ಮುಖ್ಯ ರಸ್ತೆಯಾಗಿದೆ. ಆದರೆ, ರಸ್ತೆಯ ಬಹುತೇಕ ಕಡೆ ಗಳಲ್ಲಿ ಗುಂಡಿ ಬಿದ್ದಿರುವ ಕಾರಣ ವಾಹನಗಳ ಸುಗಮ ಸಂಚಾರಕ್ಕೆ ಕಷ್ಟಕರವಾಗಿದ್ದು, ವಾಹನ ಸವಾರರಂತೂ ಗುಂಡಿ ತಪ್ಪಿಸಲು ಹೋಗಿ ಇನ್ನೊಂದು ವಾಹನಕ್ಕೆ ಡಿಕ್ಕಿಹೊಡೆಯುತ್ತಿರುವ ಘಟನೆಗಳು ನಿತ್ಯವೂ ನಡೆಯುತ್ತಿದೆ.
ಅಪಘಾತಗಳಿಗೆ ಆಸ್ಪದ: ಬಿದರೆಗುಡಿ-ಅಯ್ಯನಬಾವಿ-ಮಾದೀಹಳ್ಳಿವರೆಗೆ ರಸ್ತೆ ಹಾನಿಯಾಗಿದೆ. ನಗರದ ಹಾಸನ ಸರ್ಕಲ್ನಲ್ಲೂ ರಸ್ತೆ ಸಂಪೂರ್ಣ ಹಾಳಾಗಿದ್ದು, ಕೇಳುವವರಿಲ್ಲದಂತಾಗಿದೆ. ನಗರದ ಒಳಗಡೆಯೂ ರಸ್ತೆ ವಿಸ್ತರಣೆ ನೆಪದಲ್ಲಿ ಅಲ್ಲಲ್ಲಿ ಕಾಮಗಾರಿ ಅರ್ಧಕ್ಕೆ ನಿಂತಿರುವ ಕಾರಣವೂ ಅಪಘಾತಗಳಿಗೆ ಆಸ್ಪದವಾಗಿದೆ. ರಸ್ತೆ ಪಕ್ಕದಲ್ಲಿರುವ ವಿದ್ಯುತ್ ಕಂಬಗಳನ್ನು ತೆರವುಗೊಳಿಸದಿರುವ ಪರಿಣಾಮವೂ ತೊಂದರೆಯಾಗಿದೆ. ರಸ್ತೆ ಅಗಲೀ ಕರಣದ ನೆಪದಲ್ಲಿ 2-3ಬಾರಿ ಕಾಮಗಾರಿ ಪ್ರಾರಂಭಿಸಿದರೂ ಈವರೆಗೂ ರಸ್ತೆ ಅಂಚಿನವರೆಗೂ ಈವರೆಗೂ ಡಾಂಬರೀಕರಣವಾಗದೆ ರಸ್ತೆಯೆಲ್ಲಾ ಧೂಳಿನ ಮಯವಾಗಿದೆ.
ಸೂಚನಾ ಫಲಕ ಇಲ್ಲ:ಕಳೆದ 6-7 ವರ್ಷ ಗಳಿಂದಲೂ ನಗರದ ಒಳಗಡೆ ಹಾಯ್ದು ಹೋಗುವ ಹೈವೆಗೆ ಮುಕ್ತಿ ಸಿಗದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಅಲ್ಲದೇ ಹಾಸನ ಸರ್ಕಲ್, ಈಡೇನಹಳ್ಳಿಗೇಟ್, ಬಿದರೆಗುಡಿ ಮುಂತಾದ ಕಡೆಗಳಲ್ಲಿ ಡಿವೈಡರ್ ಹಾಕಿದ್ದು ಡಿವೈಡರ್ ಪ್ರಾರಂಭವಾಗುವ ಬಳಿ ಯಾವುದೇ ಎಚ್ಚರಿಕೆ ಸೂಚನಾ ಫಲಕಗಳು ಇಲ್ಲದ ಕಾರಣ ವಾಹನ ಸವಾರರು ವೇಗವಾಗಿ ಬಂದು ಡಿವೈಡರ್‌ಗೆ ಡಿಕ್ಕಿ ಹೊಡೆದು ಅಪಘಾತಗಳಾಗುತ್ತಿದ್ದರೂ ಅಧಿ ಕಾರಿಗಳು ಮಾತ್ರ ಕಣ್ಮುಚ್ಚಿ ಕುಳಿತಿದ್ದಾರೆ. ಕಲ್ಪತರು ಮಾಂಟೆಸರಿ ಸ್ಕೂಲ್ ಮುಂಭಾಗ ಇದೇ ಹೈವೇಯಲ್ಲಿ ಗುಂಡಿ ಬಿದ್ದು ತಿಂಗಳಾಗಿದ್ದು, ವಾಹನ ಸವಾರರಿಗೆ ತೀವ್ರ ತೊಂದರೆಯಾಗಿದೆ. ಈ ಗುಂಡಿಗೆ ಅಡ್ಡಲಾಗಿ ಬ್ಯಾರಿಕೇಡ್ ಒಂದನ್ನು ಇಟ್ಟಿದ್ದು ಅದು ವಾಹನ ಸವಾರರಿಗೆ ಸರಿಯಾಗಿ ಕಾಣಿಸದೆ ಅಪಘಾತಗಳಾಗುತ್ತಿವೆ.
ಸರ್ಕಾರ ರಸ್ತೆ ದುರಸ್ತಿಗೆ ನೂರಾರು ಕೋಟಿ ರೂಪಾಯಿ ಹಣ ಬಿಡುಗಡೆ ಮಾಡಿದರೂ ಉತ್ತಮ ಗುಣಮಟ್ಟದ ರಸ್ತೆ ನಿರ್ಮಿಸುವಲ್ಲಿ ಅಧಿಕಾರಿಗಳು ಮಾತ್ರ ವಿಫಲರಾಗಿದ್ದಾರೆ. ಈಗಾಲಾದರೂ ಸಂಬಂಧಪಟ್ಟ ಅಧಿಕಾರಿಗಳು ಗುಂಡಿಗಳನ್ನು ಮುಚ್ಚಿ ರಸ್ತೆ ಸರಿಪಡಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿ ಕೊಡುತ್ತಾರೋ ಕಾದುನೋಡಬೇಕಿದೆ.