Advertisement

ಎರಡು ತಿಂಗಳಲ್ಲಿ ಮೂರು ಲಕ್ಷ ಆಸ್ತಿಗೆ ಆರ್ಎಫ್ಐಡಿ ಸಾಧನ

12:08 PM Aug 04, 2020 | Suhan S |

ಹುಬ್ಬಳ್ಳಿ: ಮನೆಗಳಿಂದ ತ್ಯಾಜ್ಯ ಸಂಗ್ರಹ, ಆಸ್ತಿ-ನೀರಿನ ಕರ ಪಾವತಿ ಬಾಕಿ ಇನ್ನಿತರ ಮಾಹಿತಿ ನೀಡುವ ಬಹುಪಯೋಗಿ ಆರ್‌ಎಫ್ಐಡಿ ಡಿವೈಸ್‌ನ್ನು ಅವಳಿನಗರದ ಸುಮಾರು 35 ಸಾವಿರ ಆಸ್ತಿಗಳಿಗೆ ಅಳವಡಿಕೆ ಮಾಡಲಾಗಿದ್ದು, ಇನ್ನೆರಡು ತಿಂಗಳಲ್ಲಿ ಎಲ್ಲ 3 ಲಕ್ಷ ಆಸ್ತಿಗಳಿಗೂ ಅಳವಡಿಸಲು ಹು.ಧಾ.ಸ್ಮಾರ್ಟ್‌ಸಿಟಿ ಕಂಪೆನಿ ಮುಂದಾಗಿದೆ.

Advertisement

ಅವಳಿನಗರದಲ್ಲಿ ಸುಮಾರು 10 ಸಾವಿರ ಆಸ್ತಿಗಳಿಗೆ ಪ್ರಾಯೋಗಿಕವಾಗಿ ಆರ್‌ಎಫ್ಐಡಿ ಟ್ಯಾಗ್‌ ಅಳವಡಿಕೆ ಮಾಡಲಾಗಿತ್ತು. ಅಲ್ಲಿನ ಫ‌ಲಿತಾಂಶ ಆಧರಿಸಿ ಇದೀಗ ಸುಮಾರು 35 ಸಾವಿರ ಆಸ್ತಿಗಳಿಗೆ ಅಳವಡಿಸಿದ್ದು, ಉಳಿದ 2.65ಲಕ್ಷ ಆಸ್ತಿಗಳಿಗೆ ಎರಡು ತಿಂಗಳಲ್ಲಿಯೇ ಅಳವಡಿಕೆ ಮಾಡಲು ಕ್ರಮ ಕೈಗೊಳ್ಳಲಾಗಿದೆ.

ಬಹುಪಯೋಗಿ ಡಿವೈಸ್‌: ಆರ್‌ಎಫ್ ಐಡಿ ಅತ್ಯಂತ ಸರಳ ಡಿವೈಸ್‌ ಆಗಿದ್ದು, ಎರಡು ರೂಪಾಯಿ ನಾಣ್ಯದ ರೂಪದಲ್ಲಿರುವ ಇದನ್ನು ಪ್ರತಿ ಮನೆ ಇಲ್ಲವೆ ಕಟ್ಟಡದ ಬಾಗಿಲು ಇಲ್ಲವೆ ಕಾಂಪೌಂಡ್‌ ಗೇಟ್‌ಗೆ ಅಳವಡಿಸಲಾಗುತ್ತದೆ. ಇದಕ್ಕೆ ತ್ಯಾಜ್ಯ ಸಂಗ್ರಹ ವಾಹನಗಳ ಚಾಲಕರಿಗೆ ನೀಡಿರುವ ರೀಡರ್‌ಗಳಿಗೆ ಸಂಪರ್ಕ ಕಲ್ಪಿಸಲಾಗಿರುತ್ತದೆ. ಡಿವೈಸ್‌, ರೀಡರ್‌ ಯಂತ್ರಗಳು ಸೇರಿದಂತೆ ಒಟ್ಟಾರೆ ಮಾಹಿತಿ ಸ್ಮಾರ್ಟ್‌ಸಿಟಿ ಯೋಜನೆಯ ಕಮಾಂಡ್‌ ಆ್ಯಂಡ್‌ ಕಂಟ್ರೋಲ್‌ ರೂಂನಲ್ಲಿ ದಾಖಲಾಗುತ್ತದೆ. ತ್ಯಾಜ್ಯ ಸಾಗಣೆ ವಾಹನಗಳ ಚಾಲಕರ ಕೊರಳಲ್ಲಿ ರೀಡಿಂಗ್‌ ಸಿಮ್‌ ಅಳವಡಿಕೆ ಮಾಡಲಾಗಿರುತ್ತದೆ. ಮನೆಗಳ ಮುಂದೆ ವಾಹನ ಬರುತ್ತಿದ್ದಂತೆಯೇ ಅಳವಡಿಕೆಯ ಡಿವೈಸ್‌ ರೀಡರ್‌ಗೆ ಸಂಪರ್ಕ ಹೊಂದಿ ಮಾಹಿತಿ ರವಾನಿಸುತ್ತದೆ.

ತ್ಯಾಜ್ಯ ಸಂಗ್ರಹ ಕುರಿತಾಗಿ ಸ್ಪಷ್ಟ ಮಾಹಿತಿ ಪಡೆಯುವ ನಿಟ್ಟಿನಲ್ಲಿ ಈಗಾಗಲೇ ಆಟೋ ಟಿಪ್ಪರ್‌ ಗಳಿಗೆ ಜಿಪಿಎಸ್‌ ಅಳವಡಿಸಲಾಗಿದ್ದು, ಚಾಲಕರಿಗೆ ಸಿಮ್‌ ನೀಡಿರುವುದರಿಂದ ಎಲ್ಲ 67 ವಾರ್ಡ್‌ಗಳಲ್ಲಿ ತ್ಯಾಜ್ಯ ಸಂಗ್ರಹ ಆಗುತ್ತಿದೆಯೇ, ಎಷ್ಟು ಸುತ್ತು ತ್ಯಾಜ್ಯ ಸಂಗ್ರಹ ವಾಹನ ಸುತ್ತಿದೆ, ಎಷ್ಟು ಕಿ.ಮೀ. ಸಂಚಾರ ಕೈಗೊಂಡಿದೆ. ವಾಹನದಲ್ಲಿ ಎಷ್ಟು ಡಿಸೇಲ್‌ ಬಳಕೆಯಾಗಿದೆ, ಎಷ್ಟು ಉಳಿದಿದೆ ಎಂಬುದನ್ನು ವಾಹನಕ್ಕೆ ಅಳವಡಿಸಿದ ಸೆನ್ಸರ್‌ ಆಧಾರದಲ್ಲಿ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಇದರಿಂದ ತ್ಯಾಜ್ಯ ಸಾಗಣೆ ವಾಹನಗಳವರು ನಿಗದಿತ ವಾರ್ಡ್‌ಗಳಿಗೆ ಹೋಗಿದ್ದರೆ ಪ್ರತಿ ಮನೆಯಿಂದಲೂ ತ್ಯಾಜ್ಯ ಸಂಗ್ರಹಿಸಿಕೊಂಡು ಬಂದಿದ್ದಾರೆಯೇ ಎಂಬ ಮಾಹಿತಿ ಕಮಾಂಡ್‌ ಆ್ಯಂಡ್‌ ಕಂಟ್ರೋಲ್‌ ರೂಂನಲ್ಲಿ ಸಂಗ್ರಹವಾಗಲಿದ್ದು, ಆ ಮಾಹಿತಿ ಮಹಾನಗರ ಪಾಲಿಕೆಗೂ ರವಾನೆಯಾಗಲಿದೆ.

ಆಸ್ತಿ ತೆರಿಗೆ ಸಂಖ್ಯೆ ಜೋಡಣೆ: ಮನೆಗಳಿಗೆ ಅಳವಡಿಸುವ ಆರ್‌ಎಫ್ಐಡಿಗೆ ಆಸ್ತಿಕರ ಹಾಗೂ ನೀರಿನ ಕರದ ಸಂಖ್ಯೆಗಳನ್ನು ಅಳವಡಿಸಲಾಗುತ್ತಿದ್ದು, ಇದರಿಂದ ಯಾರು ಆಸ್ತಿ ಹಾಗೂ ನೀರಿನ ಕರ ಪಾವತಿಸಿಲ್ಲ ಎಂಬ ಮಾಹಿತಿ ಲಭ್ಯವಾಗಲಿದೆ. ಇದರಿಂದ ಮಹಾನಗರ ಪಾಲಿಕೆ ಹಾಗೂ ಜಲಮಂಡಳಿಗೆ ಬಾಕಿ ಬರುವವರ ಮಾಹಿತಿ ಸುಲಭವಾಗಿ ದೊರೆಯಲಿದೆ. ಭವಿಷ್ಯದಲ್ಲಿ ಇದಕ್ಕೆ ಹೆಸ್ಕಾಂ, ಅಂಚೆ ಇನ್ನಿತರ 8-10 ಸೇವೆಗಳ ಜೋಡಣೆಯಾಗಲಿದ್ದು, ಸಾರ್ವಜನರು ಪಾವತಿಸಬೇಕಾದ ಶುಲ್ಕ-ಕಂತುಗಳ ಬಾಕಿ ಬಗ್ಗೆ ಮಾಹಿತಿ ದೊರೆಯುವ ನಿಟ್ಟಿನಲ್ಲಿ ಮಾಹಿತಿ ಅಳವಡಿಕೆಗೆ ಯೋಜಿಸಲಾಗಿದೆ.

Advertisement

ಅವಳಿನಗರದಲ್ಲಿನ ಸುಮಾರು 3 ಲಕ್ಷ ಆಸ್ತಿಗಳಿಗೆ ಆರ್‌ಎಫ್ಐಡಿ ಡಿವೈಸ್‌ ಅಳವಡಿಕೆಯ ಮೇಲುಸ್ತುವಾರಿ, ಅಳವಡಿಕೆ ಕಾರ್ಯಕ್ಕೆ ಒಟ್ಟು 10 ತಂಡಗಳನ್ನು ರಚಿಸಲಾಗಿದೆ. ಇದುವರೆಗೆ ಸುಮಾರು 35 ಆಸ್ತಿಗಳಿಗೆ ಡಿವೈಸ್‌ ಅಳವಡಿಕೆ ಸಾಧ್ಯವಾಗಿದೆ. ಹತ್ತು ತಂಡಗಳಲ್ಲಿ ಮೂರು ತಂಡಗಳವರು ಕೋವಿಡ್ ಸೋಂಕಿಗೆ ಸಿಲುಕಿರುವುದು, ಕೊರೊನಾದಿಂದ ಸೀಲ್‌ಡೌನ್‌, ಲಾಕ್‌ಡೌನ್‌, ಕಂಟೇನ್ಮೆಂಟ್‌ ಪ್ರದೇಶದಿಂದ ಡಿವೈಸ್‌ ಅಳವಡಿಕೆ ಕಾರ್ಯ ನಿರೀಕ್ಷಿತ ರೀತಿಯಲ್ಲಿ ಆಗಿಲ್ಲ. ಇನ್ನೆರಡು ತಿಂಗಳಲ್ಲಿ ಬಾಕಿ ಇರುವ 2.65ಲಕ್ಷ ಆಸ್ತಿಗಳಿಗೆ ಡಿವೈಸ್‌ ಅಳವಡಿಸಲಾಗುವುದು. -ಎನ್‌.ಎಚ್‌.ನರೇಗಲ್‌, ವಿಶೇಷಾಧಿಕಾರಿ ಹು.ಧಾ.ಸ್ಮಾರ್ಟ್‌ಸಿಟಿ ಯೋಜನೆ.

ನಾಲ್ಕು ಯಂತ್ರಗಳ ಖರೀದಿ :  ಅವಳಿನಗರದಲ್ಲಿ ತ್ಯಾಜ್ಯ ನಿರ್ವಹಣೆ ಹಾಗೂ ಸ್ವಚ್ಛತೆ ದೃಷ್ಟಿಯಿಂದ ಸ್ಮಾರ್ಟ್‌ಸಿಟಿ ಯೋಜನೆಯಡಿಯಲ್ಲಿ ಈಗಾಗಲೇ 15 ಅತ್ಯಾಧುನಿಕ ಆಟೋ ಟಿಪ್ಪರ್‌ಗಳನ್ನು ಪಾಲಿಕೆಗೆ ಹಸ್ತಾಂತರಿಸಲಾಗಿದೆ. ತ್ಯಾಜ್ಯ ನಿರ್ವಹಣೆ-ಸ್ವತ್ಛತೆ ಉದ್ದೇಶಕ್ಕಾಗಿಯೇ ಸ್ಮಾರ್ಟ್ ಸಿಟಿ ಯೋಜನೆಯಲ್ಲಿ 3.20ಕೋಟಿ ರೂ. ಗಳನ್ನು ತೆಗೆದಿರಿಸಲಾಗಿದ್ದು, ಅದರಲ್ಲಿಯೇ ಆಟೋಟಿಪ್ಪರ್‌ ನೀಡಲಾಗಿದೆ. ಇದಲ್ಲದೆ ಹುಕ್‌ ಲೋಡರ್‌ ವಾಹನ ಹಾಗೂ ಜೆಟ್ಟಿಂಗ್‌ ಮಿಷನ್‌ ಸೇರಿದಂತೆ ನಾಲ್ಕು ವಾಹನ ನೀಡಲು ಯೋಜಿಸಲಾಗಿದೆ. ಪಾಲಿಕೆಯವರು ನಾಲಾ ಹಾಗೂ ಚರಂಡಿಗಳಲ್ಲಿ ಹೂಳು ತೆಗೆಯುವ ಯಂತ್ರದ ಬೇಡಿಕೆ ಸಲ್ಲಿಸಿದ್ದರಿಂದ ಹೂಳು ತೆಗೆಯುವ ಅತ್ಯಾಧುನಿಕ ಯಂತ್ರದ ಪರಿಶೀಲನೆ ನಡೆಯುತ್ತಿದ್ದು, ದೊರೆತರೆ ನೀಡಲಾಗುವ ನಾಲ್ಕು ಯಂತ್ರಗಳಲ್ಲಿ ಅದು ಸೇರಲಿದೆ.

 

-ಅಮರೇಗೌಡ ಗೋನವಾರ

Advertisement

Udayavani is now on Telegram. Click here to join our channel and stay updated with the latest news.

Next